ಮಹಾಶರಣ ಅಂಬಿಗರ ಚೌಡಯ್ಯ ಅವರು ಕೇವಲ ದೋಣಿ ನಡೆಸುವ ಅಂಬಿಗರಲ್ಲ, ದೋಣಿ ನಡೆಸುತ್ತಲೇ ಶಿವಯೋಗ ಸಾಧನೆ ಮಾಡಿ ಲಿಂಗಾಂಗ ಸಾಮರಸ್ಯದ ಸುಖವನ್ನು ಸಮಾಜಕ್ಕೆ ನೀಡಿದ ಮಹಾಗುರು ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ನಗರದ ಹಿರೇಮಠ ಸಂಸ್ಥಾನದಲ್ಲಿ ಸೋಮವಾರ ಆಯೋಜಿಸಿದ್ದ 500ನೇ ಶಿವಾನುಭವ ಗೋಷ್ಠಿ ಹಾಗೂ ಮಹಾಶರಣ ಅಂಬಿಗರ ಚೌಡಯ್ಯನವರ ಸ್ಮರಣೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
“ಅಂಬಿಗರ ಚೌಡಯ್ಯ ಅವರು ತಮ್ಮ ಕಾಯಕವಾದ ದೋಣಿ ನಡೆಸುವುದನ್ನೇ ಆಧ್ಯಾತ್ಮಿಕ ಸಾಧನೆಯನ್ನಾಗಿ ರೂಪಿಸಿಕೊಂಡಿದ್ದರು. ತಮ್ಮ ಹೆಸರನ್ನೇ ವಚನಗಳ ಅಂಕಿತನಾಮವನ್ನಾಗಿ ಬಳಸಿಕೊಂಡ ಅವರು ನೇರ, ನಿರ್ಭೀತ ನುಡಿಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಿದರು. ಅನುಭವ ಮಂಟಪದಲ್ಲಿ ಸಮಾನತೆಯ ನೆಲೆಯಲ್ಲಿ ಭಾಗವಹಿಸಿ, ಬಸವಣ್ಣ ಅವರಿಂದ ಲಿಂಗದೀಕ್ಷೆ ಪಡೆದು ಅನೇಕ ವಚನಗಳನ್ನು ರಚಿಸಿದರು” ಎಂದು ತಿಳಿಸಿದರು.
“ತುಂಬಿದ ಹೊಳೆಯಲ್ಲಿ ಜನರನ್ನು ದೋಣಿಯ ಮೂಲಕ ದಡ ಸೇರಿಸುವ ಅಂಬಿಗರಾಗಿದ್ದ ಚೌಡಯ್ಯ ಅವರು, ಭವಸಾಗರದಿಂದಲೂ ಜೀವಿಗಳನ್ನು ದಾಟಿಸುವ ಆಧ್ಯಾತ್ಮಿಕ ಸಾಮರ್ಥ್ಯ ಹೊಂದಿದ ಶಿವಶರಣರಾಗಿದ್ದರು. ತಮ್ಮ ತೀಕ್ಷ್ಣ ವಚನಗಳ ಮೂಲಕ ಶರಣರ ವಚನ ಕ್ರಾಂತಿಯಲ್ಲಿ ವಿಶಿಷ್ಟ ಛಾಪು ಮೂಡಿಸಿದ ಅವರು, ಬಸವ ಬಾನಂಗಳದ ಅಮೂಲ್ಯ ನಕ್ಷತ್ರಗಳಲ್ಲಿ ಧ್ರುವತಾರೆಯಂತೆ ಪ್ರಕಾಶಿಸಿದ ಮಹಾನುಭಾವರಾಗಿದ್ದಾರೆ” ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಸಿದ್ಧಬಸವ ಸ್ವಾಮೀಜಿ ಹಾಗೂ ಶಿವಬಸವ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಗುಂಡಪ್ಪ ಸಂಗಮಕರ ಅವರು ಅಂಬಿಗರ ಚೌಡಯ್ಯನವರ ಜೀವನ ಸಾಧನೆ ಕುರಿತು ಅನುಭಾವ ನೀಡಿದರು.

ಸಿದ್ರಾಮಪ್ಪ ಅಣದೂರೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಅವರು ಬಸವ ಗುರುಪೂಜೆ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತ ಜನಾರ್ಧನ ಬಿರಾದಾರ ಸೇರಿದಂತೆ ನಿವೃತ್ತರಾದ ಬಸವರಾಜ ಶಂಕರೆಪ್ಪ ರಂಜೇರೆ, ವಿಶ್ವನಾಥ ಖಾಜಾಪುರೆ, ರಾಮರಾವ ಮೇತ್ರೆ ಹಾಗೂ ಬಸಪ್ಪ ಚನ್ನಬಸಪ್ಪ ಜಲ್ದೆ ಅವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ : ಬೀದರ್ | ರಾಡ್‌ನಿಂದ ಮಾರಣಾಂತಿಕ ಹಲ್ಲೆಗೈದು ಪತ್ನಿಯನ್ನು ಕೊಂದ ಪತಿ!
ಕಾರ್ಯಕ್ರಮದಲ್ಲಿ ಬಸವರಾಜ ಮರೆ, ಅಶೋಕ ರಾಜೋಳೆ, ನಾಗಶೆಟ್ಟಿ ಲಂಜವಾಡೆ, ಭಾವರಾವ ನೆಲವಾಡೆ, ವಿಠಲರಾವ ಮೇತ್ರೆ, ಸೋಮನಾಥ ಏಣಕೂರು, ಮಲ್ಲಿಕಾರ್ಜುನ ಬಿರಾದಾರ, ಕಾಶಿನಾಥ ಭೂರೆ, ಶಾಂತಮ್ಮ ಮೂಲಗೆ, ಅನ್ನಪೂರ್ಣ ಬಿರಾದಾರ, ನಾಗಶೆಟ್ಟಿ ಖಂಡಾರೆ, ಬಾಬುರಾವ ಭಾಸಗೆ, ಅಶೋಕ ಅಂಬಿಗಾರ, ಸಂತೋಷ ನಾಟೇಕರ್, ಶ್ರೀದೇವಿ ಲಾಲಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು. ದೀಪಕ ಠಮಕೆ ನಿರೂಪಿಸಿದರು. ಶ್ರೀಮಠದ ಪ್ರಸಾದ ನಿಲಯದ ಮಕ್ಕಳಿಂದ ವಚನ ಪ್ರಾರ್ಥನೆ ನಡೆಯಿತು. ಕು. ಬಸವಜಯಂತಿ ವಚನ ಗಾಯನ ನಡೆಸಿದರು.




