ಚುನಾವಣಾ ಆಯೋಗದ ಎಸ್‌ಐಆರ್ ಪ್ರಕ್ರಿಯೆಯನ್ನು ವಿರೋಧಿಸಿ ಜಾತ್ಯತೀತ ಪಕ್ಷಗಳು ಹಾಗೂ ವಿವಿಧ ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಮಂಗಳವಾರ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಕಾಲ್ನಡಿಗೆ ಮೂಲಕ ಮೌನ ಪ್ರತಿಭಟನೆ ನಡೆಸಲಾಯಿತು. ನಂತರ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ಮನವಿ ಸಲ್ಲಿಸಿ, ಎಸ್‌ಐಆರ್ ಪ್ರಕ್ರಿಯೆಯನ್ನು ಪ್ರಜಾತಾಂತ್ರಿಕ ಹಾಗೂ ಪಾರದರ್ಶಕವಾಗಿ ನಡೆಸುವಂತೆ ಒತ್ತಾಯಿಸಲಾಯಿತು.
ಪ್ರತಿಭಟನಾಕಾರರು ಚುನಾವಣಾ ಆಯೋಗ ನಾಗರಿಕ ಸಮಾಜದ ಪ್ರಶ್ನೆಗಳಿಗೆ ಉತ್ತರಿಸದೆ ಮೌನ ವಹಿಸಿರುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು. ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕ ಸಮಾಜ ವ್ಯಕ್ತಪಡಿಸಿರುವ ಆತಂಕಗಳು ಮತ್ತು ಹಕ್ಕೊತ್ತಾಯಗಳಿಗೆ ಇದುವರೆಗೆ ಯಾವುದೇ ಅಧಿಕೃತ ಸ್ಪಂದನೆ ನೀಡದಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಕ್ಕೂಟದ ಜಿಲ್ಲಾ ಮುಖಂಡ ಮರೆಪ್ಪ ಚಟ್ಟೇಕರ್ ಮಾತನಾಡಿ, ‘ಎಸ್‌ಐಆರ್ ಪ್ರಕ್ರಿಯೆಯನ್ನು ಪಾರದರ್ಶಕ ಹಾಗೂ ಪ್ರಜಾತಾಂತ್ರಿಕವಾಗಿ ನಡೆಸಬೇಕೆಂಬ ಉದ್ದೇಶದಿಂದ ನಾಗರಿಕ ಸಮಾಜವು ಮಂಡಿಸಿರುವ ನಾಲ್ಕು ಪ್ರಮುಖ ಹಕ್ಕೊತ್ತಾಯಗಳ ಕುರಿತು ಮೇ 30ರಂದು ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳ ಮೂಲಕ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಒಂದು ತಿಂಗಳು ಕಳೆದರೂ ಯಾವುದೇ ಅಧಿಕೃತ ಪ್ರತಿಕ್ರಿಯೆ ದೊರೆತಿಲ್ಲ’ ಎಂದು ದೂರಿದರು.
‘ಜೂನ್ 20ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎಸ್‌ಐಆರ್ ವಿರೋಧಿ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿ, ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಯನ್ನು ಆಹ್ವಾನಿಸಿ ನಾಗರಿಕ ಸಮಾಜದ ಆತಂಕಗಳಿಗೆ ಉತ್ತರ ನೀಡುವಂತೆ ಕೋರಲಾಗಿತ್ತು. ಕರ್ನಾಟಕದ ಸಾಹಿತಿಗಳು, ಚಿಂತಕರು, ಕಲಾವಿದರು ಹಾಗೂ ರಂಗಕರ್ಮಿಗಳು ಸಹ ಬಹಿರಂಗ ಪತ್ರದ ಮೂಲಕ ಚುನಾವಣಾ ಆಯೋಗ ಸ್ಪಂದಿಸುವಂತೆ ಒತ್ತಾಯಿಸಿದ್ದರು. ರಾಜ್ಯ ಸರ್ಕಾರ ಕಳುಹಿಸಿದ್ದ ಪತ್ರಕ್ಕೂ ಆಯೋಗ ಯಾವುದೇ ಉತ್ತರ ನೀಡಿಲ್ಲ’ ಎಂದು ಅವರು ಆರೋಪಿಸಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಪ್ರಶ್ನೆಗಳಿಗೆ ಉತ್ತರಿಸುವುದು ಸಾರ್ವಜನಿಕ ಸಂಸ್ಥೆಗಳ ಮೂಲಭೂತ ಜವಾಬ್ದಾರಿಯಾಗಿದೆ. ಆದರೆ ಚುನಾವಣಾ ಆಯೋಗ ಈ ಹೊಣೆಗಾರಿಕೆಯಿಂದ ಹಿಂದೆ ಸರಿದು ಮೌನ ವಹಿಸಿರುವುದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಧಕ್ಕೆಯಾಗಿದೆ ಎಂದು ಒಕ್ಕೂಟ ಟೀಕಿಸಿದೆ. ಇದರ ವಿರುದ್ಧ ರಾಜ್ಯಾದ್ಯಂತ ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸುವ ಮೂಲಕ ಆಯೋಗದ “ಮೌನ” ಹಾಗೂ “ಏಕಪಕ್ಷೀಯ ಧೋರಣೆ”ಯನ್ನು ಖಂಡಿಸಲಾಗುತ್ತಿದೆ’ ಎಂದು ತಿಳಿಸಿದರು.
ರೈತ ಮುಖಂಡ ಫಕೀರ್ ಅಹಮ್ಮದ್ ಮಾತನಾಡಿ, ‘ಎಸ್‌ಐಆರ್ ಪ್ರಕ್ರಿಯೆ ಜಾರಿಯ ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತಹ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಆತಂಕವಿದೆ. ಯಾವುದೇ ಮತದಾರರ ಹೆಸರನ್ನು ಅಳಿಸುವ ಮೊದಲು ಸಂಬಂಧಪಟ್ಟವರಿಗೆ ಸಮರ್ಪಕ ಮಾಹಿತಿ ನೀಡಬೇಕು. ಆಕ್ಷೇಪಣೆ ಸಲ್ಲಿಸಲು ಹಾಗೂ ಮೇಲ್ಮನವಿ ಸಲ್ಲಿಸಲು ಸಾಕಷ್ಟು ಕಾಲಾವಕಾಶ ಕಲ್ಪಿಸುವುದು ಚುನಾವಣಾ ಆಯೋಗದ ಕರ್ತವ್ಯ’ ಎಂದು ಆಗ್ರಹಿಸಿದರು.

‘ನಾಗರಿಕ ಸಮಾಜದ ನ್ಯಾಯಸಮ್ಮತ ಬೇಡಿಕೆಗಳನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸದಿದ್ದರೆ ಹಾಗೂ ಇದೇ ರೀತಿಯ ಏಕಪಕ್ಷೀಯ ಧೋರಣೆ ಮುಂದುವರಿದರೆ ರಾಜ್ಯಾದ್ಯಂತ ವ್ಯಾಪಕ ಜನಾಂದೋಲನ ರೂಪುಗೊಳ್ಳುವುದು ಅನಿವಾರ್ಯ’ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಡಾ. ಸುನೀಲ್ ಕುಮಾರ್ ರೆಡಸನ್, ಹೊನ್ನೇಶ ದೊಡ್ಮನಿ, ಮೊಹಮ್ಮದ್ ವಾಸ್ಯ, ರಾಜ್ ಮೈನೋದ್ದೀನ್, ಕೆಪಿಸಿಸಿ ಸಂಯೋಜಕ ರಾಘವೇಂದ್ರ ಗೌಡ ಮಾನಸಗಲ್, ಡಾ. ಘಾಳ್ಯಪ್ಪ ಪೂಜಾರಿ ಸೇರಿದಂತೆ ಹಲವು ಮುಖಂಡರು ಮಾತನಾಡಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಅಣಬಿ ಗ್ರಾಮದಲ್ಲಿ ಕಾರಹುಣ್ಣಿಮೆ ವೈಭವ
ಈ ಸಂದರ್ಭದಲ್ಲಿ ಅಮ್ಜದ್ ಹುಸೇನ್, ಗೋಪಾಲ ತೆಳಿಗೇರಿ, ಸೈದಪ್ಪ ಕೂಲೂರು, ಭೀಮರಾಯ ಹೋಸಮನಿ, ಮರಲಿಂಗ ಸಾವೂರ್, ಗುಲಾಮ ಜಿಲಾನಿ ಸಾಬ್, ಬಾಲರಾಜ ಖಾನಾಪೂರ, ಮಹಿಬೂಬ್ ಸಾಬ್, ಮಲ್ಲಿಕಾರ್ಜುನ ಅನಕಸೂಗೂರು, ನಿಂಗಣ್ಣ ಅನಕಸೂಗೂರು, ಮೊಹಮ್ಮದ್ ಖಾಜಾ, ಶರಬಣ್ಣ, ಹಣಮಂತ ಗುರುಸುಣಿಗಿ, ಹಣಮಂತ ರಾಯನ್ನೋರ್, ದೇವಿಂದ್ರಪ್ಪ ಕೊಂಕಲ್, ಮಲ್ಲು ಖಾನಾಪೂರ, ಭಾಗಪ್ಪ ಖಾನಾಪೂರ, ಈರಣ್ಣ ಅನಕಸೂಗೂರು, ಪರಶುರಾಮ ಕಿರಿಯಾಳ, ಚಂದ್ರಕಾಂತ ಮುನೆಯಪ್ನೋರ್, ಮಹಾದೇವಪ್ಪ ಬಿಜೆಸವಾರ್ ಸೇರಿದಂತೆ ಜಾತ್ಯತೀತ ಪಕ್ಷಗಳ ಮುಖಂಡರು, ವಿವಿಧ ಜನಪರ ಸಂಘಟನೆಗಳ ಪದಾಧಿಕಾರಿಗಳು, ಸಾಮಾಜಿಕ ಹೋರಾಟಗಾರರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ




