ಔರಾದ್ ಪಟ್ಟಣದ ತಹಸೀಲ್ ಕಚೇರಿ ಆವರಣದಲ್ಲಿ ಎಸ್‌ಐಆರ್ ಹಾಗೂ ಇವಿಎಂ ರದ್ದತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಗೋಪಾಲ್ ಸಿಂಗ್ ಠಾಕೂರ್ ಅವರು ನಡೆಸುತ್ತಿರುವ ಏಕಾಂಗಿ ಉಪವಾಸ ಸತ್ಯಾಗ್ರಹ ಬುಧವಾರ 11ನೇ ದಿನ ಪೂರೈಸಿದೆ.
ಗೋಪಾಲ್ ಸಿಂಗ್ ಠಾಕೂರ್ ಅವರು ಮೇ 3 ರಿಂದ ಏಕಾಂಗಿಯಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆಹಾರ ಪದಾರ್ಥ, ಜ್ಯೂಸ್ ಸಹ ಸೇವಿಸದೆ ಕೇವಲ ನೀರು ಸೇವಿಸಿ ಸತ್ಯಾಗ್ರಹ ಮುಂದುವರೆಸಿದ್ದಾರೆ. ಈ ಸತ್ಯಾಗ್ರಹಕ್ಕೆ ಬೀದರ್ ಜಿಲ್ಲಾ ಎಸ್‌ಐಆರ್ ವಿರೋಧಿ ಜನಾಂದೋಲನ ಸಮಿತಿಯ ಸದಸ್ಯರು ಬುಧವಾರ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.
ಸಮಿತಿಯ ಪ್ರಮುಖರು ಮಾತನಾಡಿ, “ಪ್ರಜಾಪ್ರಭುತ್ವ ನಮ್ಮೆಲ್ಲರ ಜೀವ ಇದ್ದಂತೆ. ಅದು ಉಳಿದರೆ ನಾವೆಲ್ಲರೂ ಉಳಿಯುತ್ತೇವೆ. ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಮತದಾರರ ಹಕ್ಕು ಕಸಿದುಕೊಳ್ಳುವ ಸಂವಿಧಾನ ವಿರೋಧಿ ಪ್ರಕ್ರಿಯೆ ಖಂಡನೀಯ. ಗೋಪಾಲ್ ಸಿಂಗ್ ಠಾಕೂರ್ ಅವರು ನಡೆಸುತ್ತಿರುವ ಏಕಾಂಗಿ ಸತ್ಯಾಗ್ರಹಕ್ಕೆ ನಾವು ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತೇವೆ” ಎಂದು ಹೇಳಿದರು.
“ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಲು ಪಾರದರ್ಶಕ ಚುನಾವಣಾ ವ್ಯವಸ್ಥೆ ಅಗತ್ಯವಾಗಿದ್ದು, ಎಸ್‌ಐಆರ್ ಹಾಗೂ ಇವಿಎಂ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಔರಾದ್‌ನಲ್ಲಿ ಶೀಘ್ರದಲ್ಲೇ ಸಮಾವೇಶ ಆಯೋಜಿಸಲಾಗುವುದು” ಎಂದು ಸಮಿತಿಯ ಮುಖಂಡರು ತಿಳಿಸಿದರು.
ಧರಣಿ ನಿರತ ಗೋಪಾಲ್ ಸಿಂಗ್ ಠಾಕೂರ್ ಮಾತನಾಡಿ, “ಎಸ್‌ಐಆರ್ ಎಂಬುದು ಮತದಾರರ ಹಕ್ಕು ಕಸಿದುಕೊಳ್ಳುವ ತಂತ್ರವಾಗಿ ಪರಿಣಮಿಸಿದ್ದು, ಇದರ ಪರಿಣಾಮವಾಗಿ ಲಕ್ಷಾಂತರ ಜನರು ತಮ್ಮ ಅಮೂಲ್ಯ ಮತದಾನ ಹಕ್ಕನ್ನು ಕಳೆದುಕೊಂಡಿದ್ದಾರೆ” ಎಂದು ಆರೋಪಿಸಿದರು.

“ಪ್ರಜಾಪ್ರಭುತ್ವದ ಮೂಲ ಆಧಾರವಾದ ಮತದಾನದ ಹಕ್ಕಿಗೆ ಧಕ್ಕೆಯುಂಟು ಮಾಡುವ ಎಸ್‌ಐಆರ್ ಹಾಗೂ ಇವಿಎಂ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಪ್ರಜಾತಂತ್ರದ ಮೌಲ್ಯಗಳನ್ನು ಉಳಿಸಬೇಕೆಂಬ ಉದ್ದೇಶದಿಂದ ಇದು ನನ್ನ ಕರ್ತವ್ಯ ಎಂದು ಭಾವಿಸಿ ಹೋರಾಟ ನಡೆಸುತ್ತಿದ್ದೇನೆ. ನನ್ನ ಉಪವಾಸ ಸತ್ಯಾಗ್ರಹ 11ನೇ ದಿನ ಪೂರೈಸಿದ್ದು, 21 ದಿನಗಳವರೆಗೆ ನಿರಂತರವಾಗಿ ಮುಂದುವರಿಯಲಿದೆ” ಎಂದು ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ಸಮಿತಿಯ ಪ್ರಮುಖರು ತಹಸೀಲ್ದಾರ್ ಮಹೇಶ ಪಾಟೀಲ್ ಅವರೊಂದಿಗೆ ಫೋನ್ ಕರೆ ಮುಖಾಂತರ ಮಾತನಾಡಿ, “ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಗೋಪಾಲ್ ಸಿಂಗ್ ಅವರ ಆರೋಗ್ಯ ಪ್ರತಿ ದಿನ ಮೂರು ಬಾರಿ ತಪಾಸಣೆ ನಡೆಸಬೇಕು. ಧರಣಿ ಸ್ಥಳದಲ್ಲಿ ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸುರಕ್ಷತೆಗಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕುʼ ಎಂದು ಮನವಿ ಮಾಡಿದರು.
ಗೋಪಾಲ್ ಸಿಂಗ್ ಠಾಕೂರ್ ಅವರು ಧರಣಿ ನಡೆಸುತ್ತಿರುವ ಸ್ಥಳದಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲದಕ್ಕೆ ರಾತ್ರಿ ಕತ್ತಲಲ್ಲಿಯೇ ವಾಸ್ತವ್ಯ ಮಾಡುತ್ತಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಕ್ಕೆ ಮನೆಯಿಂದಲೇ ನೀರು ತರಿಸಿಕೊಳ್ಳುತ್ತಿದ್ದಾರೆ. 11 ದಿನಗಳಿಂದ ವಿವಿಧ ಜನಪರ ಸಂಘಟನೆಗಳ ಪ್ರಮುಖರು, ಸಾಮಾಜಿಕ ಚಿಂತಕರು ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಇಲ್ಲಿಯವರೆಗೆ ತಹಸೀಲ್ದಾರ್ ಮಹೇಶ ಪಾಟೀಲ್ ಅವರೊಬ್ಬರು ಮಾತ್ರ ಧರಣಿ ಸ್ಥಳಕ್ಕೆ ಭೇಟಿ ನೀಡಿ ಸತ್ಯಾಗ್ರಹ ಹಿಂಪಡೆಯಲು ಮನವೋಲಿಸುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಬೀದರ್ | ಎಸ್‌ಐಆರ್, ಇವಿಎಂಗೆ ವಿರೋಧ : 9ನೇ ದಿನ ಪೂರೈಸಿದ ಏಕಾಂಗಿ ಉಪವಾಸ ಸತ್ಯಾಗ್ರಹ
ಈ ವೇಳೆ ಎಸ್‌ಐಆರ್ ವಿರೋಧಿ ಜನಾಂದೋಲನ ಸಮಿತಿಯ ಪ್ರಮುಖರಾದ ಅಬ್ದುಲ್ ಮನ್ನಾನ್ ಸೇಠ್, ಓಂಪ್ರಕಾಶ್ ರೊಟ್ಟೆ, ನಿಜಾಮೊದ್ದೀನ್, ಡಾ.ಮಕ್ಸೂದ್ ಚಂದಾ, ಬಂಟಿ ದರ್ಬಾರೆ, ರಾಹುಲ್ ಖಂದಾರೆ, ಡಾ.ಫಯಾಜ್ ಹಾಗೂ ಪ್ರಮುಖರಾದ ಶಾಂತಕುಮಾರ ಭಾವಿಕಟ್ಟಿ, ಸಂತೋಷ್ ಸೂರ್ಯವಂಶಿ, ಸಂತೋಷ ಸಿಂಧೆ, ದಿನೇಶ್, ಪ್ರವೀಣಕುಮಾರ ಕಾರಂಜೆ, ಅಮೀರೋದ್ದೀನ್ ಸೇರಿದಂತೆ ಅನೇಕರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸತ್ಯಾಗ್ರಹಕ್ಕೆ ಐಕ್ಯತೆ ಸೂಚಿಸಿದರು.




