ಅಕ್ಷರ ದಾಸೋಹ ಕಾರ್ಯಕರ್ತೆಯರ ಬದುಕಿಗೆ ಮಾರಕವಾಗಿರುವ ಕ್ಲಸ್ಟರ್ ಕಿಚನ್ ಯೋಜನೆಯನ್ನು ರಾಜ್ಯ ಸರ್ಕಾರ ಕೂಡಲೇ ಕೈಬಿಡಬೇಕು. ಇಲ್ಲದಿದ್ದರೆ ನ.16ರಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಛೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷರಾದ ಜಿ.ಮುಸ್ತಫಾ ಹೇಳಿದರು
ಪಟ್ಟಣದ ಬಿಇಓ ಎನ್. ವೆಂಕಟೇಶಪ್ಪ ಹಾಗೂ ಅಕ್ಷರ ದಾಸೋಹ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ತದನಂತರ ಮಾತನಾಡಿ ಅಕ್ಷರ ದಾಸೋಹ ಕಾರ್ಯಕರ್ತೆಯರ ಬದುಕಿಗೆ ಮಾರಕವಾಗಿರುವ ಕ್ಲಸ್ಟರ್ ಕಿಚನ್ ಯೋಜನೆಯನ್ನು ರಾಜ್ಯ ಸರ್ಕಾರ ಕೂಡಲೇ ಕೈಬಿಡಬೇಕು. ಇಲ್ಲದಿದ್ದರೆ ನ.16ರಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷ ಮುಸ್ತಫಾ ಎಚ್ಚರಿಕೆ ನೀಡಿದರು.
ಕಳೆದ 25 ವರ್ಷಗಳಿಂದ ಅತ್ಯಂತ ಕಡಿಮೆ ವೇತನದಲ್ಲಿ ದುಡಿಯುತ್ತಿರುವ ಬಡ ಮಹಿಳೆಯರ ಜೀವನೋಪಾಯಕ್ಕೆ ಪೆಟ್ಟು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಸುಮಾರು 1.30 ಲಕ್ಷ ಬಿಸಿಯೂಟ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದು, ಕ್ಲಸ್ಟರ್ ಮಟ್ಟದಲ್ಲಿ ಅಡುಗೆ ತಯಾರಿಸಿ ಶಾಲೆಗಳಿಗೆ ವಿತರಿಸುವ ಯೋಜನೆ ಜಾರಿಯಾದರೆ ಸಾವಿರಾರು ಮಹಿಳೆಯರ ಬದುಕು ಬೀದಿಪಾಲಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಳೆದ ಹಲವು ವರ್ಷಗಳಿಂದ ಕೇವಲ ₹300 ಗೌರವಧನದಲ್ಲಿ ಬಡ ಮಕ್ಕಳಿಗೆ ಅಡುಗೆ ಮಾಡಿ ಊಟ ನೀಡಿದ ಕಾರ್ಯಕರ್ತೆಯರಿಗೆ ನಿರಂತರ ಹೋರಾಟದ ಫಲವಾಗಿ ಈಗ ₹4,600 ಗೌರವಧನ ದೊರೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕ್ಲಸ್ಟರ್ ಕಿಚನ್ ಯೋಜನೆ ಜಾರಿಗೊಳಿಸಿದರೆ ಅನೇಕ ಕುಟುಂಬಗಳು ಜೀವನೋಪಾಯ ಕಳೆದುಕೊಳ್ಳಲಿವೆ. ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮನವಿಯನ್ನು ಪರಿಗಣಿಸಿ ಬಡ ಮಹಿಳೆಯರ ಬದುಕಿಗೆ ತೊಂದರೆಯಾಗುವ ಯೋಜನೆಯನ್ನು ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು.
ಅಕ್ಷರ ದಾಸೋಹ ಯೋಜನೆಯಿಂದ ಶಾಲೆಗಳಲ್ಲಿ ಮಕ್ಕಳು ಜಾತಿ, ಧರ್ಮದ ಭೇದವಿಲ್ಲದೆ ಒಂದೇ ಸೂರಿನಡಿ ಕುಳಿತು ಊಟ ಮಾಡುವ ಮೂಲಕ ಸಾಮಾಜಿಕ ಸಮಾನತೆಯ ಪಾಠ ಕಲಿಯುತ್ತಿದ್ದಾರೆ. ಶಾಲೆ ಮುಖ್ಯಶಿಕ್ಷಕರಿಗೆ ಅಕ್ಷರ ದಾಸೋಹದ ಜವಾಬ್ದಾರಿ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ ಯೋಜನೆಯ ಸ್ವರೂಪ ಬದಲಿಸುವುದು ಸರಿಯಲ್ಲ. ಇದರಿಂದ ಬಡ ಮಹಿಳೆಯರ ಕುಟುಂಬ ನಿರ್ವಹಣೆ ಕಷ್ಟಕರವಾಗಲಿದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ..?ಕೋಲಾರ | ಕಾಂಗ್ರೆಸ್ಸಿಗರನ್ನು ತುಂಡು ಮಾಡಿ ಅರಬ್ಬಿ ಸಮುದ್ರಕ್ಕೆ ಎಸೆಯುವ ಹೇಳಿಕೆ: ನಗರ ಪೊಲೀಸ್ ಠಾಣೆಯಲ್ಲಿ 3 ದೂರು ಸಲ್ಲಿಕೆ
ಈ ಸಂದರ್ಭದಲ್ಲಿ ಬಿಸಿಯೂಟ ಕಾರ್ಯಕರ್ತೆಯರಾದ ಕೆ.ಭಾರತಿ,ಗೌರಮ್ಮ, ನೂರ್ ಅಗಸ್ಥಾ,ಕೆ.ಜಿ.ಅಮರಾವತಿ, ಸುಬ್ಬಮ್ಮ,ಲಕ್ಷ್ಮೀ ನರಸಮ್ಮ,ರಾಮಾಂಜನಮ್ಮ ಹಾಗೂ ಇತರರು ಹಾಜರಿದ್ದರು.




