ಭಾರತೀಯ ಮೂಲದ 26 ವರ್ಷದ ಯುವತಿಯೊಬ್ಬರು ಗುಂಡೇಟಿನಿಂದ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಪಶ್ಚಿಮ ಲಂಡನ್‌ನ ಮನೆಯೊಂದರಲ್ಲಿ ನಡೆದಿದೆ. ಈ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 31 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಮೃತರನ್ನು ಭಾರತೀಯ ಮೂಲದ ನವನೀತ್ ಕೌರ್ (26) ಎಂದು ಗುರುತಿಸಲಾಗಿದೆ. ಲಂಡನ್‌ನ ಪಶ್ಚಿಮ ಭಾಗದಲ್ಲಿರುವ ಹೌನ್ಸ್‌ಲೋ ಪ್ರದೇಶದ ಚೆರ್ಟ್‌ಸಿ ರೋಡ್‌ನಲ್ಲಿರುವ ಮನೆಯೊಂದರಲ್ಲಿ ಯುವತಿಯ ಕ್ಷೇಮ ವಿಚಾರಿಸಲು ಹೋದ ಸಂದರ್ಭದಲ್ಲಿ, ಆಕೆ ತೀವ್ರ ಗುಂಡೇಟಿನ ಗಾಯಗಳೊಂದಿಗೆ ಬಿದ್ದಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ತುರ್ತು ವೈದ್ಯಕೀಯ ಸಿಬ್ಬಂದಿ ಆಕೆ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ಲೈಂಗಿಕ ಹಗರಣ | ಆರೋಪಿ ಪ್ರಜ್ವಲ್ ಜರ್ಮಿನಿಯಿಂದ ಲಂಡನ್‌ಗೆ ರೈಲಿನಲ್ಲಿ ಪರಾರಿ
ಈ ಕೃತ್ಯಕ್ಕೆ ಸಂಬಂಧಿಸಿದಂತೆ ಅದೇ ಪ್ರದೇಶದ (ಚೆರ್ಟ್‌ಸಿ ರೋಡ್) ನಿವಾಸಿ ರಜತ್ ಜಸ್ವಾಲ್ (31) ಎಂಬಾತನನ್ನು ಮೆಟ್ರೋಪಾಲಿಟನ್ ಪೊಲೀಸರು ಶೀಘ್ರದಲ್ಲೇ ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಕೊಲೆ ಹಾಗೂ ಅಕ್ರಮ ಬಂದೂಕು ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಬಂಧಿತ ಆರೋಪಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆಯ ತನಿಖಾಧಿಕಾರಿಗಳು ಸುದೀರ್ಘ ತನಿಖೆ ಮುಂದುವರಿಸಿದ್ದಾರೆ. ಮೃತರ ಕುಟುಂಬಸ್ಥರಿಗೆ ಮಾಹಿತಿ ತಲುಪಿಸಲಾಗಿದ್ದು, ಅವರಿಗೆ ತನಿಖಾ ಸಂಸ್ಥೆಗಳ ಕಡೆಯಿಂದ ಅಗತ್ಯ ಬೆಂಬಲ ನೀಡಲಾಗುತ್ತಿದೆ.





