ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ, ಸ್ವದೇಶಕ್ಕೆ ಮರಳಲು ಅನುಕೂಲವಾಗುವಂತೆ ಹೊಸ ಪಾಸ್ಪೋರ್ಟ್ ಹಾಗೂ ರಾಷ್ಟ್ರೀಯ ಗುರುತಿನ ಚೀಟಿ ನೀಡುವಂತೆ ಸೋಮವಾರ ಮನವಿ ಮಾಡಿದ್ದಾರೆ. ಆದರೆ, ಬಾಂಗ್ಲಾದೇಶ ಸರ್ಕಾರ ಅವರ ಕೋರಿಕೆಯನ್ನು ತಿರಸ್ಕರಿಸಿದ್ದು, ಭಾರತವು ಅವರನ್ನು ಹಸ್ತಾಂತರಿಸಬೇಕು ಎಂದು ಪುನರುಚ್ಚರಿಸಿದೆ.
ರಾಯಿಟರ್ಸ್ ಸುದ್ದಿಸಂಸ್ಥೆ ಪರಿಶೀಲಿಸಿರುವ ಪತ್ರದ ಪ್ರಕಾರ, 2024ರಲ್ಲಿ ಬಾಂಗ್ಲಾದೇಶದಿಂದ ಪಲಾಯನ ಮಾಡಿದ ಬಳಿಕ ಹಸೀನಾ ಈ ರೀತಿಯ ಮನವಿ ಸಲ್ಲಿಸಿರುವುದು ಇದೇ ಮೊದಲು. ಡಿಸೆಂಬರ್ನಲ್ಲಿ ಸ್ವದೇಶಕ್ಕೆ ಮರಳುವ ತಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಅವರು ಕೈಗೊಂಡಿರುವ ಸ್ಪಷ್ಟ ಹೆಜ್ಜೆ ಇದಾಗಿದೆ. ವಿದ್ಯಾರ್ಥಿಗಳ ನೇತೃತ್ವದ ಹೋರಾಟದಿಂದ ಅವರ ಸುದೀರ್ಘ ಆಡಳಿತ ಅಂತ್ಯಗೊಂಡ ಎರಡು ವರ್ಷಗಳ ಬಳಿಕದ ಈ ಬೆಳವಣಿಗೆ, ಬಾಂಗ್ಲಾದೇಶದಲ್ಲಿ ಹೊಸ ರಾಜಕೀಯ ಹಾಗೂ ಕಾನೂನು ಸಂಘರ್ಷಗಳಿಗೆ ಕಾರಣವಾಗುವ ಸಾಧ್ಯತೆಯಿದೆ.
ಸ್ವದೇಶಕ್ಕೆ ಮರಳಿ ನ್ಯಾಯಾಲಯದ ಮುಂದೆ ಶರಣಾಗುವ ಉದ್ದೇಶವಿದೆ ಎಂದು ಹಸೀನಾ ಈ ಹಿಂದೆ ರಾಯಿಟರ್ಸ್ಗೆ ತಿಳಿಸಿದ್ದರು. ಅಗತ್ಯ ಔಪಚಾರಿಕ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ವಾಪಸಾತಿಯ ದಿನಾಂಕವನ್ನು ಘೋಷಿಸಲಾಗುವುದು ಎಂದು ಅವರ ಸಹಾಯಕರು ಸೋಮವಾರ ಹೇಳಿದ್ದಾರೆ.
ವಿದ್ಯಾರ್ಥಿಗಳ ನೇತೃತ್ವದ ಹೋರಾಟವನ್ನು ಮಾರಣಾಂತಿಕವಾಗಿ ಹತ್ತಿಕ್ಕಲು ಆದೇಶಿಸಿದ ಪ್ರಕರಣದಲ್ಲಿ ಬಾಂಗ್ಲಾದೇಶದ ಯುದ್ಧಾಪರಾಧಗಳ ನ್ಯಾಯಾಲಯವು, ಹಸೀನಾ ಅವರ ಗೈರುಹಾಜರಿಯಲ್ಲೇ 2025ರ ನವೆಂಬರ್ನಲ್ಲಿ ಮರಣದಂಡನೆ ವಿಧಿಸಿತ್ತು. ಆದರೆ, ಭಾರತದಲ್ಲಿರುವ ಹಸೀನಾ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ.
ಲಂಡನ್ ಮೂಲದ ‘ಮ್ಯಾಟ್ರಿಕ್ಸ್ ಚೇಂಬರ್ಸ್’ನಲ್ಲಿರುವ ಹಸೀನಾ ಅವರ ವಕೀಲರು, ನವದೆಹಲಿಯ ಬಾಂಗ್ಲಾದೇಶ ಹೈಕಮಿಷನ್ನ ಹಂಗಾಮಿ ಹೈಕಮಿಷನರ್ ಪ್ರೀತಿ ರಹಮಾನ್ ಅವರಿಗೆ ಪತ್ರ ಬರೆದಿದ್ದಾರೆ. ‘ಮಧ್ಯಂತರ ಸರ್ಕಾರ ಹಾಗೂ ಇತರ ಪ್ರಾಧಿಕಾರಗಳು ಹಸೀನಾ ಅವರ ಹಾಲಿ ಬಾಂಗ್ಲಾದೇಶಿ ಪಾಸ್ಪೋರ್ಟ್ ಮತ್ತು ರಾಷ್ಟ್ರೀಯ ಗುರುತಿನ ಚೀಟಿಯನ್ನು ರದ್ದುಪಡಿಸಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ನಮ್ಮ ಕಕ್ಷಿದಾರರಿಗೆ ಹೊಸ ದಾಖಲೆಗಳನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಪತ್ರದಲ್ಲಿ ಕೋರಲಾಗಿದೆ.
ಹಸೀನಾ ಅವರು ಬಾಂಗ್ಲಾದೇಶದ ಪ್ರಜೆಯಾಗಿರುವುದನ್ನು ಪರಿಗಣಿಸಿ ಹಾಗೂ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಒಪ್ಪಂದಗಳಿಂದ ಉಂಟಾಗುವ ಬಾಧ್ಯತೆಗಳಿಗೆ ಅನುಗುಣವಾಗಿ, ಈ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದೂ ವಕೀಲರು ಮನವಿ ಮಾಡಿದ್ದಾರೆ.
ಆದರೆ, ಈ ಕೋರಿಕೆಯನ್ನು ಬಾಂಗ್ಲಾದೇಶ ಸರ್ಕಾರ ತಳ್ಳಿಹಾಕಿದೆ. ‘ಬಾಂಗ್ಲಾದೇಶವು ಭಯೋತ್ಪಾದಕರಿಗೆ ಪಾಸ್ಪೋರ್ಟ್ ನೀಡುವುದಿಲ್ಲ. ಅವರು ತಲೆಮರೆಸಿಕೊಂಡಿರುವ ಅಪರಾಧಿ. ಭಾರತದೊಂದಿಗೆ ನಮ್ಮ ಅಪರಾಧಿಗಳ ಹಸ್ತಾಂತರ ಒಪ್ಪಂದ ಜಾರಿಯಲ್ಲಿದೆ. ಅವರನ್ನು ನಮಗೆ ಹಸ್ತಾಂತರಿಸಬೇಕು’ ಎಂದು ಬಾಂಗ್ಲಾದೇಶದ ವಿದೇಶಾಂಗ ಖಾತೆ ರಾಜ್ಯ ಸಚಿವ ಹುಮಾಯೂನ್ ಕಬೀರ್ ಸುದ್ದಿಗಾರರಿಗೆ ಹೇಳಿದ್ದಾರೆ. ಹಸೀನಾ ಅವರು ಹಸ್ತಾಂತರ ಪ್ರಕ್ರಿಯೆಯ ಮೂಲಕ ದೇಶಕ್ಕೆ ಮರಳಿ, ನ್ಯಾಯಾಲಯಕ್ಕೆ ಶರಣಾಗಿ ಶಿಕ್ಷೆ ಅನುಭವಿಸಬೇಕು ಎಂದೂ ಅವರು ತಿಳಿಸಿದ್ದಾರೆ.
‘ಅವರನ್ನು ವ್ಯಾಪಾರ ನಿಮಿತ್ತ ಪ್ರಯಾಣಿಸುವ ಸಾಮಾನ್ಯ ವ್ಯಕ್ತಿಯಂತೆ ಪರಿಗಣಿಸಿ, ಅತ್ತೆ–ಮಾವನ ಮನೆಗೆ ಭೇಟಿ ನೀಡಲು ಬನ್ನಿ ಎಂದು ಹೇಳಬೇಕೇ?’ ಎಂದೂ ಕಬೀರ್ ವ್ಯಂಗ್ಯವಾಡಿದ್ದಾರೆ.
ಈ ಬೆಳವಣಿಗೆ ಕುರಿತು ಭಾರತದ ವಿದೇಶಾಂಗ ಸಚಿವಾಲಯ ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ. ಹಸೀನಾ ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾದೇಶ ಸಲ್ಲಿಸಿರುವ ಮನವಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಸಚಿವಾಲಯ ಏಪ್ರಿಲ್ನಲ್ಲಿ ತಿಳಿಸಿತ್ತು. ಅಲ್ಲಿನ ಹೊಸ ಸರ್ಕಾರದೊಂದಿಗೆ ರಚನಾತ್ಮಕವಾಗಿ ತೊಡಗಿಸಿಕೊಂಡು, ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಬಯಸುವುದಾಗಿಯೂ ಹೇಳಿತ್ತು.
ಹಸೀನಾ ಅವರ ಅವಾಮಿ ಲೀಗ್ ಪಕ್ಷವು ನಿಷೇಧಕ್ಕೊಳಗಾಗುವ ಮೊದಲು ಬಾಂಗ್ಲಾದೇಶದ ಅತಿದೊಡ್ಡ ಪಕ್ಷವಾಗಿತ್ತು. ಅವರ ಸರ್ಕಾರ ಪತನಗೊಂಡ ಬಳಿಕ ಪಕ್ಷವನ್ನು ನಿಷೇಧಿಸಲಾಗಿದ್ದು, ಅನೇಕ ಸಹೋದ್ಯೋಗಿಗಳು ಜೈಲಿನಲ್ಲಿದ್ದಾರೆ. ಇನ್ನು ಹಲವರು ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ.
ವಿವಿಧ ಅವಧಿಗಳಲ್ಲಿ ಒಟ್ಟು 20 ವರ್ಷ ಬಾಂಗ್ಲಾದೇಶದ ಪ್ರಧಾನಿಯಾಗಿದ್ದ ಹಸೀನಾ ಅವರಿಗೆ ಈಗಲೂ ಜನಸಮುದಾಯದ ಕೆಲವು ವರ್ಗಗಳಲ್ಲಿ ಬೆಂಬಲವಿದೆ. ಎರಡು ವರ್ಷಗಳಿಗೂ ಹೆಚ್ಚಿನ ಅಶಾಂತಿಯ ಬಳಿಕ ಸ್ಥಿರತೆ ತರಲು ಢಾಕಾ ಸರ್ಕಾರ ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ, ಅವರ ವಾಪಸಾತಿಯು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮತ್ತಷ್ಟು ತೀವ್ರಗೊಳಿಸಬಹುದು. ಮತ್ತೊಂದೆಡೆ, ಹಸೀನಾ ಅವರಿಗೆ ಭಾರತ ಆಶ್ರಯ ನೀಡಿದ ಬಳಿಕ ಹದಗೆಟ್ಟಿರುವ ಉಭಯ ದೇಶಗಳ ಸಂಬಂಧವು, ಅವರು ಭಾರತದಿಂದ ತೆರಳುವುದರಿಂದ ಸುಧಾರಿಸುವ ಸಾಧ್ಯತೆಯೂ ಇದೆ ಎಂದು ರಾಯಿಟರ್ಸ್ ವರದಿ ವಿಶ್ಲೇಷಿಸಿದೆ.





