ಗೊಂಡ ಹಾಗೂ ಟೋಕರಿ ಕೋಳಿ ಬುಡಕಟ್ಟು ಸಮುದಾಯಗಳೇ ಈ ನೆಲದ ಮೂಲ ಆದಿವಾಸಿಗಳಾಗಿದ್ದು, ಅವರ ಸರ್ವತೋಮುಖ ಅಭಿವೃದ್ಧಿ ವೇಗವಾಗಿ ಆಗಬೇಕಾಗಿದೆ ಎಂದು ಗೊಂಡ ಸಮುದಾಯದ ಮುಖಂಡ ಮಾಳಪ್ಪ ಅಡಸಾರೆ ಹೇಳಿದರು.
ಬೀದರ್ ನಗರದಲ್ಲಿ ಗೊಂಡ ಮಿತ್ರ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, “ಆದಿವಾಸಿ ಸಮುದಾಯಗಳು ಐಕ್ಯತೆಯಿಂದ ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು” ಎಂದು ಅವರು ಕರೆ ನೀಡಿದರು.
ಹಿರಿಯ ಸಾಹಿತಿ ಮಾಣಿಕ ನೇಳಗಿ ವಿಶೇಷ ಉಪನ್ಯಾಸ ನೀಡಿ, “ಬಿರ್ಸಾ ಮುಂಡಾ ಅವರು ದೇಶದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾಗಿದ್ದು, ಆದಿವಾಸಿಗಳ ಹಕ್ಕುಗಳಿಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ನಾಯಕರಾಗಿದ್ದಾರೆ. ‘ಜಲ, ಜಂಗಲ್, ಜಮೀನ್’ ಆದಿವಾಸಿಗಳ ಹಕ್ಕು ಎಂಬುದನ್ನು ಪ್ರತಿಪಾದಿಸಿ, ತಮ್ಮ ಸಮುದಾಯವನ್ನು ಸಂಘಟಿಸಿ ಹೋರಾಟ ನಡೆಸಿದ್ದರು” ಎಂದು ಸ್ಮರಿಸಿದರು.
“ಜಿಲ್ಲೆಯಲ್ಲಿ ಗೊಂಡ, ಟೋಕರೆ ಕೋಳಿ ಸೇರಿದಂತೆ ವಿವಿಧ ಬುಡಕಟ್ಟು ಸಮುದಾಯಗಳ ಜನಸಂಖ್ಯೆ ಹೆಚ್ಚಿದೆ. ಬೀದರ ವಿಶ್ವವಿದ್ಯಾಲಯದಲ್ಲಿ ಬುಡಕಟ್ಟು ಸಮುದಾಯಗಳ ಅಧ್ಯಯನ ಪೀಠ ಸ್ಥಾಪಿಸುವ ಅಗತ್ಯವಿದೆ. ಇದ್ದಕ್ಕಾಗಿ ಸಮುದಾಯದ ಮುಖಂಡರು ಕಾರ್ಯಪ್ರವೃತ್ತರಾಗಬೇಕು” ಎಂದು ಸಲಹೆ ನೀಡಿದರು.
ಆದಿವಾಸಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಡುಮ್ಮೆ ಪ್ರಾಸ್ತಾವಿಕ ಮಾತನಾಡಿ, “ವಿವಿಧ ಕಾರ್ಯಕ್ರಮಗಳ ಮೂಲಕ ಆದಿವಾಸಿ ಸಮುದಾಯಗಳಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಪರಿಷತ್ತು ನಿರಂತರವಾಗಿ ಮಾಡುತ್ತಿದೆ. ಜಿಲ್ಲೆಯ ಎಲ್ಲ ಗ್ರಾಮಗಳಿಗೂ ಬಿರ್ಸಾ ಮುಂಡಾ, ಬೊಮ್ಮಗೊಂಡ ಹಾಗೂ ವಾಲ್ಮೀಕಿ ಅವರ ಸಂದೇಶಗಳನ್ನು ತಲುಪಿಸುವ ಕಾರ್ಯ ಕೈಗೊಳ್ಳಲಾಗುವುದು” ಎಂದರು.
ಇದನ್ನೂ ಓದಿ : ಬೀದರ್ | ನೂತನ ಅಪರ ಜಿಲ್ಲಾಧಿಕಾರಿಯಾಗಿ ಸುರೇಖಾ ಅಧಿಕಾರ ಸ್ವೀಕಾರ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಗನ್ನಾಥ ಮೇತ್ರೆ ವಹಿಸಿದ್ದರು. ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ, ಈಶ್ವರ ಮಲಕಾಪೂರೆ, ಚಂದ್ರಕಲಾ ಸೇರಿದಂತೆ ಸಮುದಾಯದ ಪ್ರಮುಖರು ಭಾಗವಹಿಸಿದ್ದರು.




