ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಕೊಲೆ ಪ್ರಕರಣವನ್ನು ಎಸ್ಐಟಿಗೆ ವಹಿಸಬೇಕೆಂದು ಚಲನಚಿತ್ರನಟ, ಸಾಮಾಜಿಕ ಹೋರಾಟಗಾರ ಚೇತನ ಅಹಿಂಸಾ ಆಗ್ರಹಿಸಿದರು.
ಬೀದರ್ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು, ʼ16 ವರ್ಷದ ಅಪ್ರಾಪ್ತ ಬಾಲಕಿಯ ಕೊಲೆ ಘಟನೆ ಅತ್ಯಂತ ಖಂಡನೀಯ. ಈ ಪ್ರಕರಣದ ಆರೋಪಿಯನ್ನು ರಕ್ಷಿಸಲು ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂಬುದು ನಿಧಾನಗತಿಯ ತನಿಖೆಯಿಂದ ಗೊತ್ತಾಗುತ್ತಿದೆ. ಮೊದಲು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕೇಸ್ ದಾಖಲಾಗಿತ್ತು. ಅದನ್ನು ಖಂಡಿಸಿ ಹಲವು ಸಂಘಟಕರು ಹೋರಾಟ ನಡೆಸಿದ ಪ್ರತಿಫಲ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಸತ್ಯ ಬಹಿರಂಗವಾಗುತ್ತಿದ್ದಂತೆ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆʼ ಎಂದರು.
ʼಈ ಪ್ರಕರಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಎಲ್ಲೊ ಸತ್ಯ ಮರೆಮಾಚುತ್ತಿರಬಹುದು ಎಂದೆನಿಸುತ್ತಿದೆ. ಘಟನೆ ನಡೆದು 15 ದಿನಗಳು ಕಳೆದರೂ ಜಿಲ್ಲೆಗೆ ಇಲ್ಲಿಯವರೆಗೆ ಐಜಿಪಿ ಸೇರಿದಂತೆ ಅಥವಾ ಇತರೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡದೇ ಇರುವುದು ಪ್ರಭಾವಿಗಳ ಒತ್ತಡ ಇರಬಹುದು ಅಥವಾ ಆರೋಪಿಯನ್ನು ಈ ಪ್ರಕರಣದಿಂದ ಬಚಾವ್ ಮಾಡಲು ಒಳಗೊಳಗೆ ಮಸಲತ್ತು ನಡೆಯುತ್ತಿದೆ ಎಂಬ ಅನುಮಾನ ಮೂಡುತ್ತಿದೆʼ ಎಂದು ದೂರಿದರು.
ಈ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಅನ್ಯ ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಬೇಕು. ಮತ್ತೊಮ್ಮೆ ಬಾಲಕಿಯ ಶವ ಮರುಪರೀಕ್ಷೆ ನಡೆಸಿ, ಅದರ ವರದಿ ಬಹಿರಂಗಗೊಳಿಸಬೇಕು. ಈ ಪ್ರಕರಣದ ವಿಚಾರವಾಗಿ ಹೋರಾಟ ನಡೆಸುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿ ಅವರ ಧ್ವನಿ ಹತ್ತಿಕ್ಕುವ ಕಾರ್ಯ ನಡೆಯುತ್ತಿದ್ದು, ಅದನ್ನು ಕೈ ಬಿಡಬೇಕು. ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿರಲಿ ಅವರಿಗೆ ಶಿಕ್ಷೆ ಆಗಬೇಕು ಹಾಗೂ ನೊಂದ ಕುಟುಂಬಕ್ಕೆ ಪ್ರಾಮಾಣಿಕ ನ್ಯಾಯ ಒದಗಿಸುವ ಜವಾಬ್ದಾರಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಮೇಲಿದೆ. ಈ ವಿಚಾರವಾಗಿ ರಾಜ್ಯದ ಗೃಹ ಸಚಿವರೊಂದಿಗೆ ಮಾತನಾಡುವೆʼ ಎಂದವರು ತಿಳಿಸಿದರು.
ನಾನು ಸದಾ ಹೋರಾಟಗಾರನೇ ಹೊರತು ರಾಜಕಾರಣಿಯಾಗಲು ಇಷ್ಟ ಪಡುವುದಿಲ್ಲ. ಆದರೆ, ರಾಜ್ಯ, ದೇಶದಲ್ಲಾಗಲಿ ಬದಲಾವಣೆ ಅಗತ್ಯ. ಈಚೆಗೆ ʼಜಿರಳೆ ಜನತಾ ಪಾರ್ಟಿʼ ಎಂಬ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಚೇತನ ಅವರು, ಬರೀ ಸಾಮಾಜಿಕ ಮಾಧ್ಯಮಗಳಲ್ಲಿ ಗುರುತಿಸಿಕೊಂಡರೆ ಜನಪ್ರಿಯತೆ ಬರಲ್ಲ. ಬದಲಿಗೆ ಜನರ ಬಳಿ ತೆರಳಿ ಅವರ ಸಮಸ್ಯೆಗಳನ್ನು ಆಲಿಸುವ ಕೆಲಸ ಆಗಬೇಕು. ಅಂದಾಗ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಎಲ್ಲ ಸಂದರ್ಭಗಳಲ್ಲಿ ತಮಿಳುನಾಡು ಮಾದರಿ ಆಗುತ್ತದೆ ಎಂಬುದು ಬರೀ ಭ್ರಮೆ ಮಾತ್ರʼ ಎಂದರು.
ನಟ ದರ್ಶನ ವಿಚಾರವಾಗಿ ಮಾತನಾಡಿದ ಚೇತನ, ʼನಟ ದರ್ಶನ ಅವರು ಆದಷ್ಟು ಬೇಗ ಜೈಲಿನಿಂದ ಬಿಡುಗಡೆ ಆಗುತ್ತಾರೆ ಎಂಬ ವಿಶ್ವಾಸ ನನಗಿದೆ. ಹೊರ ಬಂದರೂ ಉತ್ತಮ ಜೀವನಶೈಲಿ ರೂಪಿಸಿಕೊಂಡು ಸಾಮಾನ್ಯರಂತೆ ಬದುಕುವಂತಾಗಲಿʼ ಎಂದರು.
ಇದನ್ನೂ ಓದಿ : ಹುಮನಾಬಾದ್ | ನೀಟ್ ಪ್ರಶ್ನೆಪತ್ರಿಕೆ ಸೋರಿಕೆ : ಎನ್‌ಟಿಎ ರದ್ದತಿಗೆ ದಸಂಸ ಆಗ್ರಹ
ಬಿಎಸ್‌ಪಿ ಜಿಲ್ಲಾಧ್ಯಕ್ಷ ಕಪಿಲ ಗೋಡಬೊಲೆ, ಪತ್ರಕರ್ತ ಶಕ್ತಿಕಾಂತ ಬಾವಿದೊಡ್ಡಿ, ದಲಿತ ಮುಖಂಡರಾದ ರಾಜಕುಮಾರ್ ಮೂಲಭಾರತಿ, ಹರ್ಷಿತ್ ದಾಂಡೇಕರ್, ಹನುಮಂತ ಮಟ್ಟೆ, ಅಂಬಾದಾಸ್ ಚಕ್ರವರ್ತಿ, ಸಂತೋಷ ಶಿಂಧೆ, ಉತ್ತಮ ಸುತಾರ, ರಜನೀಶ ಎಮ್ ಮತ್ತಿತರರು ಹಾಜರಿದ್ದರು.




