ಬೀದರ್ ನಗರದ ಮೈಲೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯವನ್ನು ಯಾವುದೇ ಕಾರಣಕ್ಕೂ ಘೋಡಂಪಳ್ಳಿಗೆ ಸ್ಥಳಾಂತರಿಸಬಾರದು ಎಂದು ಕರ್ನಾಟಕ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಗ್ರಹ ಸಮಿತಿ ಆಗ್ರಹಿಸಿದೆ.
ಸಮಿತಿಯ ಪದಾಧಿಕಾರಿಗಳು ಈ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಬರೆದ ಮನವಿ ಪತ್ರವನ್ನು ನಗರದಲ್ಲಿ ಸೋಮವಾರ ಕಚೇರಿ ಅಧಿಕಾರಿಗೆ ಸಲ್ಲಿಸಿದರು.
ಸಮಿತಿಯ ಕಲಬುರಗಿ ವಿಭಾಗೀಯ ಅಧ್ಯಕ್ಷ ಸಂಗಮೇಶ ಬಾವಿದೊಡ್ಡಿ ಮಾತನಾಡಿ, ʼಘೋಡಂಪಳ್ಳಿಗೆ ವಸತಿ ನಿಲಯ ಸ್ಥಳಾಂತರಿಸುತ್ತಿರುವುದು ಸರಿಯಲ್ಲ. ಘೋಡಂಪಳ್ಳಿ ವಸತಿ ನಿಲಯ ಅರಣ್ಯ ಪ್ರದೇಶದಲ್ಲಿ ಇರುವ ಕಾರಣ ವಿದ್ಯಾರ್ಥಿಗಳಿಗೆ ಸುರಕ್ಷತೆ ಇಲ್ಲ. ನಗರದಿಂದ ದೂರ ಇದೆ. ವಿದ್ಯಾರ್ಥಿಗಳಿಗೆ ಬೀದರನ ಕಾಲೇಜುಗಳಿಗೆ ಬಂದು ಹೋಗಲು ಸರಿಯಾದ ಬಸ್ ಸೌಕರ್ಯವೂ ಇಲ್ಲʼ ಎಂದರು.
ʼವಸತಿ ನಿಲಯ ಸ್ಥಳಾಂತರದಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಹೀಗಾಗಿ ವಸತಿ ನಿಲಯ ಸ್ಥಳಾಂತರ ರದ್ದುಪಡಿಸಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿಗಳೊಂದಿಗೆ ಹೋರಾಟ ನಡೆಸಲಾಗುವುದುʼ ಎಂದು ಎಚ್ಚರಿಸಿದರು.
ಇದನ್ನೂ ಓದಿ : ಬೀದರ್ | ಸಾಹಿತ್ಯ, ಸಂಗೀತದಿಂದ ಮನಸ್ಸಿಗೆ ನೆಮ್ಮದಿ : ಬಸವರಾಜ ಧನ್ನೂರ
ಈ ಸಂದರ್ಭದಲ್ಲಿ ಪ್ರಮುಖರಾದ ಧನರಾಜ ಮುಸ್ತಾಪುರ, ಸಮಿತಿಯ ಸದಸ್ಯರಾದ ಬೀರಗೊಂಡ ಘೋಡಂಪಳ್ಳೆ, ವೀರಶೆಟ್ಟಿ ಕೌಡಗೆ, ಮಹೇಂದ್ರಕುಮಾರ ಹೊಸಮನಿ, ಹುಲೆಪ್ಪ ಕೌಡಗೆ ಮತ್ತಿತರರಿದ್ದರು.




