ಮಳೆಗಾಲದಲ್ಲಿಯೂ ಬೇಸಿಗೆಯ ಧಗೆಗೆ ತತ್ತರಿಸಿದ್ದ ಜನರಿಗೆ ಗುರುವಾರ ಸಂಜೆ ಜಿಲ್ಲೆಯ ವಿವಿಧೆಡೆ ಸುರಿದ ಬಿರುಸಿನ ಮಳೆ ತಂಪಿನ ಅನುಭವ ನೀಡಿತು.
ಬೀದರ್ ನಗರ ಸೇರಿದಂತೆ ಔರಾದ್, ಭಾಲ್ಕಿ ತಾಲೂಕಿನ ಗ್ರಾಮೀಣ ಭಾಗದ ಹಲವೆಡೆ ಜೋರು ಮಳೆಯಾಗಿದೆ. ಕೆಲವೆಡೆ ಒಂದು ಗಂಟೆಗೂ ಅಧಿಕ ಕಾಲ ಎಡೆಬಿಡದೆ ಗುಡುಗು ಸಹಿತ ಮಳೆ ಸುರಿದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಬೀದರ್, ಮರಖಲ, ನೌಬಾದ್, ಕೋಳಾರ, ಭಾಲ್ಕಿ ತಾಲೂಕಿನ ನಿಟ್ಟೂರ, ಹಲಬರ್ಗಾ, ಔರಾದ್ ತಾಲೂಕಿನ ಕೌಠಾ, ಬಲ್ಲೂರ, ಮುಸ್ತಾಪುರ, ಸಂತಪೂರ ಸೇರಿದಂತೆ ವಿವಿಧೆಡೆ ಉತ್ತಮ ಮಳೆಯಾಗಿದೆ. ಕೆಲವೆಡೆ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಯಿತು.
ಇದನ್ನೂ ಓದಿ : ಹೆಸರಾಯಿತು ಕಲ್ಯಾಣ ಕರ್ನಾಟಕ; ಬದಲಾಗದ ಜನರ ಬದುಕು!
ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಸೋಯಾಬೀನ್, ತೊಗರಿ ಸೇರಿದಂತೆ ವಿವಿಧ ಬೆಳೆಗಳು ಬಿರುಬಿಸಿಲಿಗೆ ಬಾಡುತ್ತಿದ್ದು, ಕೃಷಿ ಚಟುವಟಿಕೆಗಳಿಗೂ ಹಿನ್ನಡೆಯಾಗಿತ್ತು. ಗುರುವಾರ ಸುರಿದ ಮಳೆ ಬೆಳೆಗಳಿಗೆ ಕೊಂಚ ಚೇತರಿಕೆ ನೀಡುವ ನಿರೀಕ್ಷೆ ಮೂಡಿಸಿದ್ದು, ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.




