ಅಲ್ಪಸಂಖ್ಯಾತರ ಮಹಿಳಾ ಪದವಿ ಪೂರ್ವ ಕಾಲೇಜು ಕಟ್ಟಡಕ್ಕೆ ಬೀದರ್ ನಗರದಲ್ಲಿ ಶುಕ್ರವಾರ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಜಂಟಿಯಾಗಿ ಶಂಕುಸ್ಥಾಪನೆ ನೆರವೇರಿಸಿದರು.
ʼರಾಜ್ಯ ಸರ್ಕಾರ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಅವಿರತ ಶ್ರಮಿಸುತ್ತಿದೆ. ಕಾಲೇಜು ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಲಿದೆʼ ಎಂದು ತಿಳಿಸಿದರು.

ʼಅಲ್ಪಸಂಖ್ಯಾತರ ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು 4.96 ಕೋಟಿ ವೆಚ್ಚದಲ್ಲಿ ಪದವಿ ಪೂರ್ವ ಕಾಲೇಜು ಕಟ್ಟಡ ನಿರ್ಮಿಸಲಾಗುತ್ತಿದೆ. ಕಾಲೇಜಿನಿಂದ ಅಲ್ಪಸಂಖ್ಯಾತರ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿದೆʼ ಎಂದು ಸಚಿವ ರಹೀಂ ಖಾನ್ ತಿಳಿಸಿದರು.
ಜಿಲ್ಲಾ ಪಂಚಾಯತಿ ಸಿಇಒ ಡಾ. ಗಿರೀಶ್ ಬದೋಲೆ, ಮುಖಂಡ ಮುಹಮ್ಮದ್ ಗೌಸ್, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಹಾಗೂ ಪ್ರಮುಖರಾದ ಮನ್‌ದೀಪ್ ಕೌರ್, ಮನ್ಸೂರ್ ಅಹಮ್ಮದ್ ಖಾದ್ರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಯುವನಿಧಿ ಯೋಜನೆಗೆ ನೋಂದಣಿ ಆರಂಭ
ಕರ್ನಾನಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ಪಡೆಯಲು ಅಹ್ ಅಭ್ಯರ್ಥಿಗಳಿಂದ ನೋಂದಣಿ ಆಹ್ವಾನಿಸಲಾಗಿದೆ.
ಪದವಿ ಪಾಸಾದ ಅಭ್ಯರ್ಥಿಗಳಿಗೆ 3,000 ರೂ. ಡಿಪ್ಲೋಮಾ ಮುಗಿಸಿದ ಅಭ್ಯರ್ಥಿಗಳಿಗೆ 1,500 ರೂ. ಭತ್ಯೆ ನೀಡಲಾಗುತ್ತದೆ. ಪದವಿ ಮತ್ತು ಡಿಪ್ಲೋಮಾ ಮುಗಿಸಿ ಉದ್ಯೋಗವಿಲ್ಲದೆ ಇರುವ ಯುವಕ-ಯುವತಿಯರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಆಭ್ಯರ್ಥಿಗಳು ಕನಿಷ್ಟ 6 ವರ್ಷಗಳವರಗೆ ಕರ್ನಾಟಕದಲ್ಲಿ ವಾಸವಾಗಿರಬೇಕು. ಪದವಿ-ಡಿಪ್ಲೋಮಾ ಮುಗಿಸಿ ಕನಿಷ್ಠ 180 ದಿನಗಳ ನಂತರವೂ ಉದ್ಯೋಗ ಸಿಗದೆ, ಉನ್ನತ ವ್ಯಾಸಂಗಕ್ಕೆ ದಾಖಲಾಗದೆ ಇರುವ ಅಭ್ಯರ್ಥಿಗಳು ಈ ಯೋಜನೆಗೆ ಅರ್ಹರಾಗಿರುತ್ತಾರೆ.
ಸ್ವಯಂ ಉದ್ಯೋಗ ಹೊಂದಿಲ್ಲದ ಅಭ್ಯರ್ಥಿಗಳು, ಉನ್ನತ ವಿದ್ಯಾಭ್ಯಾಸ ಮುಂದುವರಿಸದೇ ಇರುವ ಅಭ್ಯರ್ಥಿಗಳು, 2023-24ರಿಂದ ಪಾಸಾದ (ತೇರ್ಗಡೆಯಾದ) ಅಭ್ಯರ್ಥಿಗಳು ಯುವನಿಧಿ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡು ಇದರ ಉಪಯೋಗ ಪಡೆದುಕೋಳ್ಳಬೇಕು. ಅಭ್ಯರ್ಥಿಗಳು ನೋಂದಣಿಯನ್ನು ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಬಾಪೂಜಿ ಕೇಂದ್ರಗಳಲ್ಲಿ ಸಲ್ಲಿಸಬಹುದಾಗಿದೆ ಎಂದು ಬೀದರ ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜವಳಿ ತಂತ್ರಜ್ಞಾನದಲ್ಲಿ ಡಿಪ್ಲೋಮಾ ಕೋರ್ಸಗಾಗಿ ಅರ್ಜಿ ಆಹ್ವಾನ
2026-27ನೇ ಸಾಲಿನ ಶೈಕ್ಷಣಿಕ ಅವಧಿಗೆ ಮೂರು ವರ್ಷದ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಡಿಪ್ಲೋಮಾ (ಡಿಹೆಚ್‌ಟಿಟಿ) ಕೋರ್ಸ್ ಕಲಿಕೆಗಾಗಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಇಂಗ್ಲೀಷ್‍ನ್ನು ಒಂದು ವಿಷಯವಾಗಿ ವ್ಯಾಸಂಗ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವ್ಯಾಸಂಗದ ಸಮಯದಲ್ಲಿ ಮಾರ್ಗಸೂಚಿಯ ಪ್ರಕಾರ ಪ್ರತಿ ವಿದ್ಯಾರ್ಥಿಗೆ ಪ್ರತಿ ತಿಂಗಳು ರೂ. 2,500 ರಂತೆ ಶಿಷ್ಯವೇತನ ನೀಡಲಾಗುವುದು. ಪುರುಷ ಅಭ್ಯರ್ಥಿಗಳಿಗೆ ವಸತಿ ನಿಲಯದ ಸೌಲಭ್ಯವನ್ನು ಹಣ ಪಾವತಿಸುವ ಆಧಾರದ ಮೇಲೆ ಕಲ್ಪಿಸಲಗುವುದು.
ಅರ್ಜಿಯನ್ನು https://swdhmis.karnataka.gov.in/ ಮೂಲಕ ಡೌನ್‍ಲೊಡ್ ಮಾಡಿಕೊಂಡು ಭರ್ತಿ ಮಾಡಿ ಗದಗ-ಬೆಟಗೇರಿಯ ನರಸಾಪುರದಲ್ಲಿರುವ ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆಯ ಪ್ರಾಂಶುಪಾಲರ ವಿಳಾಸಕ್ಕೆ ಮೇ 30ರೊಳಗಾಗಿ ಸಲ್ಲಿಸಬೇಕು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08372-259664, ಮೊಬೈಲ್ ಸಂಖ್ಯೆ 9916143619 ಅಥವಾ ಸಹಾಯಕ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ರೇಷ್ಮೆ ಇಲಾಖೆ ಕಚೇರಿ ಕಟ್ಟಡ, 2ನೇ ಮಹಡಿ, ಕೋಳಾರ (ಕೆ) ಬೀದರ ಇವರ ಮೊಬೈಲ್ ಸಂಖ್ಯೆ 9972205911 ಗಳಿಗೆ ಸಂಪರ್ಕಿಸಲು ಬೀದರ ಜಿಲ್ಲಾ ಪಂಚಾಯತ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯಗಳ ಪ್ರವೇಶಾತಿಗೆ ಆನ್‍ಲೈನ್ ಅರ್ಜಿ ಆಹ್ವಾನ
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ನಡೆಸಲ್ಪಡುತ್ತಿರುವ 2026-27ನೇ ಸಾಲಿನ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳ ಪ್ರವೇಶಾತಿಗಾಗಿ ಅರ್ಹ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಮೆಟ್ರಿಕ್ ಪೂರ್ವ ವಸತಿ ನಿಲಯಗಳಿಗೆ 5ನೇ ತರಗತಿಯಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಹಾಗೂ ಮೆಟ್ರಿಕ್ ನಂತರದ ವಸತಿ ನಿಲಯಗಳಿಗೆ ಪಿಯುಸಿ, ಪದವಿ ಹಾಗೂ ವೃತ್ತಿಪರ ಕೋರ್ಸ್‍ಗಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಪ್ರವೇಶಾತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶೇ.75 ರಷ್ಟು ಹಾಗೂ ಇತರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶೇ.25ರಷ್ಟು (ಖಾಲಿ ಇರುವ ಸ್ಥಳಗಳಿಗೆ ಮಾತ್ರ) ಮೀಸಲಾತಿ ಇರಲಿದೆ.
ಆಸಕ್ತ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ವೆಬ್‍ಸೈಟ್ ಲಿಂಕ್ ಬಳಸಿ, ವಿದ್ಯಾರ್ಥಿ ಲಾಗಿನ್‍ನಲ್ಲಿ ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾದ ವಿದ್ಯಾರ್ಥಿಯ ಎಸ್‍ಎಸ್‍ಪಿ ಸ್ಟೂಡೆಂಟ್ ಐಡಿ, ಸ್ಯಾಟ್ಸ್ ಐಡಿ, ಆಧಾರ್ ಕಾರ್ಡ್, ಹಿಂದಿನ ವರ್ಷದ ಅಂಕಪಟ್ಟಿ, ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಅನ್‍ಲೈನ್‍ದಲ್ಲಿ ಅರ್ಜಿ ಸಲ್ಲಿಸುವುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಪ್ರವೇಶ ಬಯಸುವ ವಸತಿ ನಿಲಯದ ವಾರ್ಡನ್ ಅಥವಾ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ದೂರವಾಣಿ ಸಂಖ್ಯೆ 9480843082 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು (ಗ್ರೇಡ್-1) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಕವಿಗೋಷ್ಠಿ, ಗೌರವ ಸನ್ಮಾನ ಹಾಗೂ ಸಂಗೀತ ಸಂಭ್ರಮ
ಬೀದರ ನಗರದ ಮೈಲೂರು ಕ್ರಾಸ್ ಹತ್ತಿರವಿರುವ ಮಹಾಲಕ್ಷ್ಮೀ ಸಭಾಂಗಣದಲ್ಲಿ ಮಂದಾರ ಕಲಾವಿದರ ವೇದಿಕೆ ಬೀದರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಮೇ 17ರಂದು ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಕವಿಗೋಷ್ಠಿ, ಗೌರವ ಸನ್ಮಾನ ಹಾಗೂ ಸಂಗೀತ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಜಗನ್ನಾಥ ಮಹಾರಾಜರು ವಹಿಸಿಕೊಳ್ಳಲಿದ್ದು, ಮುಖಂಡ ಬಸವರಾಜ ಧನ್ನೂರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಾಹಿತಿ ಮಾಣಿಕ ನೇಳಗೆ ಅಧ್ಯಕ್ಷತೆ ವಹಿಸಲಿದ್ದು, ಬೀದರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಸಂಜೀವಕುಮಾರ ಅತಿವಾಳೆ ಹಾಗೂ ಬಾಬುರಾವ ಗೊಂಡ, ಡಾ.ರಘುಶಂಖ ಭಾತಂಬ್ರಾ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಇದನ್ನೂ ಓದಿ : ಬೀದರ್ | ಪೆಟ್ರೋಲ್, ಡೀಸೆಲ್ ದರ ಏರಿಕೆ ಹಿಂಪಡೆಯುವಂತೆ ಸಂಸದ ಸಾಗರ್ ಖಂಡ್ರೆ ಆಗ್ರಹ
ಕಾರ್ಯಕ್ರಮದಲ್ಲಿ ಕವಿಗೋಷ್ಠಿ, ಗೌರವ ಸನ್ಮಾನ ಹಾಗೂ ಸಂಗೀತ ಸಂಭ್ರಮ ಏರ್ಪಡಿಸಲಾಗಿದ್ದು, ಸಂಗೀತ ಕಾರ್ಯಕ್ರಮದಲ್ಲಿ ಶಿವಕುಮಾರ ಪಾಂಚಾಳ, ರಮೇಶ್ ಕೋಳಾರ ಸೇರಿದಂತೆ ಅನೇಕ ಖ್ಯಾತ ಸಂಗೀತ ಕಲಾವಿದರು ತಮ್ಮ ಸಂಗೀತ ಮತ್ತು ಗಜಲ್ ಗೀತೆಗಳ ಮೂಲಕ ಜನರನ್ನು ರಂಜಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಬೇಕೆಂದು ಸಾಹಿತಿ ಎಂ.ಜಿ. ದೇಶಪಾಂಡೆ ಮನವಿ ಮಾಡಿದ್ದಾರೆ.




