ಹಿರಿಯ ವಿದ್ವಾಂಸ, ಚಿಂತಕ ಹಾಗೂ ಕನ್ನಡ ಭಾಷಾ ತಜ್ಞ ಪ್ರೊ. ಕೆ.ವಿ. ನಾರಾಯಣ ಅವರ ಅಗಲಿಕೆ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಮೋಹನ್ ಚಂದ್ರಗುತ್ತಿ ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾಲಯದ ಡಾ. ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ವತಿಯಿಂದ ಪ್ರೊ. ಕೆ.ವಿ. ನಾರಾಯಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ‘ನುಡಿನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರೊ. ಕೆ.ವಿ. ನಾರಾಯಣ ಅವರ ವಿದ್ವತ್‌ಪೂರ್ಣ ವ್ಯಕ್ತಿತ್ವ, ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಅವರು ನೀಡಿದ ಮಹತ್ವದ ಕೊಡುಗೆ, ಶೈಕ್ಷಣಿಕ ಚಿಂತನೆಗಳು ಹಾಗೂ ವಿಶಿಷ್ಟ ಸಾಹಿತ್ಯಿಕ ಅಭಿರುಚಿಯನ್ನು ಸ್ಮರಿಸಿದರು. ಅವರೊಂದಿಗಿನ ಒಡನಾಟದ ಅನುಭವಗಳು, ಅಪರೂಪದ ನೆನಪುಗಳು ಹಾಗೂ ಅವರ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ಆಳವಾದ ಅಧ್ಯಯನ ಹಾಗೂ ವಿಶಿಷ್ಟ ಚಿಂತನೆಗಳನ್ನು ಹೊಂದಿದ್ದ ಪ್ರೊ. ಕೆ.ವಿ. ನಾರಾಯಣ ಅವರು ತಮ್ಮ ವಿದ್ವತ್‌ಪೂರ್ಣ ಬರಹಗಳು ಮತ್ತು ವಿಚಾರಧಾರೆಗಳ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಅವರ ಸಾಹಿತ್ಯಿಕ ಕೊಡುಗೆ ಮತ್ತು ವಿಚಾರಪರಂಪರೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥೆ ಪ್ರೊ. ಅಣ್ಣಮ್ಮ, ಪ್ರಾಧ್ಯಾಪಕರಾದ ಪ್ರೊ. ನಾಗಭೂಷಣ ಬಗ್ಗನಡು, ಡಾ. ಪಿ.ಎಂ. ಗಂಗಾಧರಯ್ಯ, ಪ್ರೊ. ಗೀತಾವಸಂತ ಸೇರಿದಂತೆ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿ ನುಡಿನಮನ ಸಲ್ಲಿಸಿದರು.




