ಕಿರಿಯ ವಯಸ್ಸಿನಲ್ಲೇ ಕರಾಟೆಯಲ್ಲಿ ಅಮೋಘ ಸಾಧನೆಗೈದ ಹೈದರಾಬಾದ್‍ನ ಕಿಶನ್‍ಬಾಗ್‍ನ ಬಹಾದ್ದೂರಪುರದ ಸಬಾ ಮಾಹೀನ್ ಖಾಜಾ ಮೊಯಿನುದ್ದೀನ್ ಅವರಿಗೆ ನಗರದ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು ಪ್ರೌಢ ಹಾಗೂ ಪದವಿಪೂರ್ವ ಉಚಿತ ಶಿಕ್ಷಣ ನೀಡುವುದಾಗಿ ಘೋಷಿಸಿದೆ.
ಬೀದರ್ ನಗರದ ಶಹಾಪುರ ಗೇಟ್ ಸಮೀಪದ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಕಚೇರಿಗೆ ಭಾನುವಾರ ಕುಟುಂಬದ ಸದಸ್ಯರೊಂದಿಗೆ ಭೇಟಿ ನೀಡಿದ ಸಬಾ ಮಾಹೀನ್ ಅವರಿಗೆ ಸಮೂಹದ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಅವರು ಶೈಕ್ಷಣಿಕ ನೆರವಿನ ಭರವಸೆ ನೀಡಿದರು.
ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ ಸಂಪೂರ್ಣ ಉಚಿತವಾಗಿ ಕೊಡಲಾಗುವುದು. ವೈದ್ಯಳಾಗಲು ಬಯಸಿದ್ದಲ್ಲಿ ನೀಟ್ ತರಬೇತಿಯನ್ನೂ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ʼಹೈದರಾಬಾದ್‍ನ ಗ್ರೇಸ್ ಎಕ್ಸೆಲ್ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಅಗ್ರಶ್ರೇಣಿಯಲ್ಲಿ ತೇರ್ಗಡೆಯಾಗಿರುವ ಸಬಾ ಮಾಹೀನ್ ತೆಲಂಗಾಣ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ 22, ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಮೂರು ಚಿನ್ನದ ಪದಕ ಜಯಿಸಿದ್ದಾರೆ. ಮೇ 8 ರಿಂದ 10 ರವರೆಗೆ ಮಲೇಷ್ಯಾದಲ್ಲಿ ನಡೆಯಲಿರುವ 22ನೇ ವಿಶ್ವ ಕರಾಟೆ ಚಾಂಪಿಯನ್‍ಶಿಪ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಅವರ ಸಾಧನೆ ಬಾಲಕಿಯರಿಗೆ ಮಾದರಿ ಹಾಗೂ ಪ್ರೇರಣೆಯಾಗಿದೆʼ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿನಿ ತಂದೆ ಖಾಜಾ ಮೊಯಿನುದ್ದೀನ್, ಕೋಚ್ ಮಾಸ್ಟರ್ ಮೊಹಮ್ಮದ್ ಉಮರ್ ಇದ್ದರು.
ಇದನ್ನೂ ಓದಿ : ಬೀದರ್ | 43 ಗ್ರಾಮಗಳಲ್ಲಿ ನೀರಿನ ಅಭಾವ : ನೀರು ಸರಬರಾಜಿಗೆ ಅಡ್ಡಿಪಡಿಸಿದರೆ ನಿರ್ದಾಕ್ಷಿಣ್ಯ ಕ್ರಮ




