ಮಟ್ಕಾ, ಜೂಜಾಟ ಹಾಗೂ ಅಕ್ರಮವಾಗಿ ಗಾಂಜಾ ಮಾರಾಟ ದಂಧೆಯಲ್ಲಿ ಭಾಗಿಯಾಗಿ ಸಾರ್ವಜನಿಕರ ಶಾಂತಿ, ನೆಮ್ಮದಿಗೆ ಕಂಟಕವಾಗಿದ್ದ ಜಿಲ್ಲೆಯ ಇಬ್ಬರು ರೌಡಿಶೀಟರ್ಗಳನ್ನು ಗಡಿಪಾರು ಮಾಡಿ ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರು ಆದೇಶ ಹೊರಡಿಸಿದ್ದಾರೆ.
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಠಾಳ ಠಾಣಾ ವ್ಯಾಪ್ತಿಯ ಗ್ರಾಮವೊಂದರ ಅಂಗದ ಹರಿನಾಥ ಕಾಂಬಳೆ ಹಾಗೂ ಹುಮನಾಬಾದ್ ಠಾಣೆ ವ್ಯಾಪ್ತಿಯ ನಿವಾಸಿ ಎಂ.ಡಿ.ಶರೀಫ್ಮಿಯ್ಯಾ ಗಡಿಪಾರಾದ ರೌಡಿಶೀಟರ್ಗಳು. ಅಂಗದ ಹರಿನಾಥ ಕಾಂಬಳೆಗೆ ರಾಯಚೂರು ಜಿಲ್ಲೆ ಹಾಗೂ ಎಂ.ಡಿ.ಶರೀಫ್ಮಿಯ್ಯಾಗೆ ಕೋಲಾರ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಠಾಳ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ ರೌಡಿಶೀಟರ್ ಅಂಗದ ಕಾಂಬಳೆ ಸುತ್ತಮುತ್ತಲಿನ ಗ್ರಾಮದವರಿಂದ ಹಣ ಪಡೆದು ಮಟ್ಕಾ, ಜೂಜಾಟ ನಡೆಸುತ್ತಿದ್ದನು. ಇದರಿಂದ ಬಡ ಕೂಲಿ ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಿಗಳು ಹೆಚ್ಚಿನ ಹಣ ಬರುತ್ತದೆ ಎಂಬ ಆಸೆಯಿಂದ ತಮ್ಮ ದಿನನಿತ್ಯದ ಸಂಪಾದನೆಯ ಹಣ ಮಟ್ಕಾ, ಜೂಜಾಟವೆಂಬ ಮೋಸದಾಟದಲ್ಲಿ ಹಾಕಿ ತಮ್ಮ ಹಣವನ್ನು ಕಳೆದುಕೊಳ್ಳುತ್ತಿದ್ದು, ಈ ಬಗ್ಗೆ ರೌಡಿಶೀಟರ್ ಅಂಗದ ಕಾಂಬಳೆ ಮೇಲೆ 11 ಪ್ರಕರಣಗಳು ದಾಖಲಾಗಿದ್ದರೂ ತನ್ನ ಅಪರಾಧಿಕ ಕೃತ್ಯಗಳು ಮುಂದುವರೆಸಿದನು. ಸಮಾಜದಲ್ಲಿ ಶಾಂತಿ ಪಾಲನೆ ಮತ್ತು ಕಾನೂನು ಸುವ್ಯವಸ್ಥೆಗಾಗಿ ಸದರಿ ರೌಡಿಶೀಟರ್ಗೆ ಬೀದರ ಜಿಲ್ಲೆಯಿಂದ ರಾಯಚೂರು ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.
ಹುಮನಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ ಎಂ.ಡಿ.ಶರೀಪ್ಮಿಯ್ಯಾ ನಾಂದೇಡಿ ಈತನು ಹುಮನಾಬಾದ್ ಹಾಗೂ ಭಾಲ್ಕಿ ತಾಲೂಕಿನಲ್ಲಿ ಅಕ್ರಮ ಗಾಂಜಾ ಸಾಗಾಟ, ಮಾರಾಟ ಮಾಡುವ ದಂಧೆ ಮಾಡಿಕೊಂಡಿದ್ದು, ಇದರಿಂದ ಜಿಲ್ಲೆಯಲ್ಲಿ ಯುವಕರ, ವಿದ್ಯಾರ್ಥಿಗಳ ಆರೋಗ್ಯ ಹಾಳುಮಾಡುವುದು ಸೇರಿದಂತೆ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟು ಮಾಡುತ್ತಿದ್ದನು. ಈತನ ವಿರುದ್ಧ ಸುಮಾರು 5 ಪ್ರಕರಣಗಳು ದಾಖಲಾಗಿದ್ದರೂ ಅಪರಾಧಿಕ ಕೃತ್ಯಗಳಿಂದ ದೂರವಾಗದೆ ತನ್ನ ಪ್ರವೃತಿಯನ್ನು ಮುಂದುವರೆಸಿಕೊಂಡಿದ್ದನು. ಈತನಿಗೆ ಬೀದರ್ದಿಂದ ಕೋಲಾರ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.
ಇದನ್ನೂ ಓದಿ : ಬೀದರ್ | ವಿಬಿ-ಜಿ ರಾಮ್ ಜಿ ಕಾಮಗಾರಿ ವೀಕ್ಷಣೆ, ಗುಳೆ ಹೋಗದಂತೆ ಸಲಹೆ ನೀಡಿದ ಸಚಿವ ಈಶ್ವರ ಖಂಡ್ರೆ
ಜಿಲ್ಲೆಯಲ್ಲಿ ಕಾನೂನು ವಿರುದ್ಧ ಚಟುವಟಿಕೆಯಲ್ಲಿ ಭಾಗಿಯಾಗಿ, ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಅಡೆತಡೆಯನ್ನುಂಟು ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಹಾಗೂ ಗಡಿಪಾರು ಮಾಡಲಾಗುವುದು. ಜಿಲ್ಲೆಯ ನಾಗರಿಕರು ಯಾವುದೇ ಕಾನೂನು ವಿರುದ್ದ ಚಟುವಟಿಕೆಯಲ್ಲಿ ಭಾಗಿಯಾಗಿ ಕಾನೂನು ಸಂಘರ್ಷದಲ್ಲಿ ಅಮೂಲ್ಯವಾದ ತನ್ನ ಹಾಗೂ ತನ್ನ ಕುಟುಂಬದ ಜೀವನವನ್ನು ಹಾಳುಮಾಡಿಕೊಳ್ಳಬೇಡಿ ಎಂದು ಸಾರ್ವಜನಿಕರಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರು ಕೋರಿದ್ದಾರೆ.





