ಭಾರತದ ಸಂವಿಧಾನಕ್ಕೆ ಜಗತ್ತಿನಲ್ಲಿಯೇ ವಿಶಿಷ್ಟ ಸ್ಥಾನ ಮತ್ತು ಮಹತ್ವವಿದೆ. ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ ಭಾರತವು ಸಂವಿಧಾನದ ಬಲವಾದ ತಳಹದಿಯ ಮೇಲೆ ನಿಂತಿದೆ. ಸಂವಿಧಾನದ ಪಾಲನೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಸಾಹಿತಿ ಡಾ.ಎಸ್.ಎಂ. ಜನವಾಡಕರ್ ಹೇಳಿದರು.
ನಗರದ ಬೀದರ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಭಾರತೀಯ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ನಮ್ಮ ಸಂವಿಧಾನವು ಧರ್ಮಕ್ಕಿಂತ ಶಿಕ್ಷಣಕ್ಕೆ, ಹಕ್ಕುಗಳ ಜೊತೆಗೆ ಕರ್ತವ್ಯಗಳಿಗೂ ಹೆಚ್ಚಿನ ಮಹತ್ವ ನೀಡಿದೆ. ಸಂವಿಧಾನದ ಆಶಯಗಳನ್ನು ಪಾಲಿಸುವುದರಿಂದ ನಾವೆಲ್ಲರೂ ಭಾರತೀಯರು ಎಂಬ ಹಿರಿಮೆ, ಹೆಮ್ಮೆ ಮೂಡುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೀದರ್ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ರಾಜಕುಮಾರ ಮಾಲಿಪಾಟೀಲ ಮಾತನಾಡಿ, “ಭವ್ಯ ಭಾರತದ ಇತಿಹಾಸದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಜನಿಸಿದ್ದು ನಮ್ಮೆಲ್ಲರ ಪುಣ್ಯ. ಜಗತ್ತಿನ ಮಹಾನ್ ಜ್ಞಾನಿಗಳಲ್ಲಿ ಒಬ್ಬರಾದ ಅವರು ಜ್ಞಾನಸೂರ್ಯರಾಗಿದ್ದರು. ಸಮಾನತೆ ಮತ್ತು ನ್ಯಾಯದ ತಳಹದಿಯ ಮೇಲೆ ಭವ್ಯ ಭಾರತ ನಿರ್ಮಾಣದ ಕನಸು ಕಂಡಿದ್ದರು” ಎಂದು ಹೇಳಿದರು.
“ಬಾಬಾ ಸಾಹೇಬರ ಹೋರಾಟ, ಶ್ರಮ ಮತ್ತು ಪ್ರತಿಭೆಯ ಫಲವಾಗಿ ನಾವು ಸದೃಢ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮುನ್ನಡೆಸಲು ಸಾಧ್ಯವಾಗಿದೆ. ದೇಶದ ಪ್ರತಿಯೊಬ್ಬರೂ ಸಮಾನವಾಗಿ ಬದುಕಲು, ಶಿಕ್ಷಣ ಪಡೆಯಲು ಹಾಗೂ ತಮ್ಮ ಮೂಲಭೂತ ಹಕ್ಕುಗಳನ್ನು ಅನುಭವಿಸುವುದರ ಜೊತೆಗೆ ಕರ್ತವ್ಯಗಳನ್ನು ನಿರ್ವಹಿಸಲು ಸಂವಿಧಾನವೇ ಆಧಾರವಾಗಿದೆ. ಭಾರತದ ಸಂವಿಧಾನ ಜಗತ್ತಿಗೆ ಮಾದರಿಯಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಜಗನ್ನಾಥ ಬಿ.ಪಾಟೀಲ್ ಸಿರಕಟನಳ್ಳಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.

ಅಂಬಿಕಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಎನ್.ಎಸ್. ಕುಲಕರ್ಣಿ ಸ್ವಾಗತಿಸಿದರು. ಡಾ. ಸುರೇಖಾ ಬಿರಾದಾರ ವಂದಿಸಿದರು. ಡಾ. ರಾಮಚಂದ್ರ ಗಣಾಪುರ ನಿರೂಪಿಸಿದರು. ಸಮಾರಂಭದಲ್ಲಿ ಬೀದರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಇದನ್ನೂ ಓದಿ : ಬೀದರ್ | ವಿಶ್ವದ ಶ್ರೇಷ್ಠ ಸಂವಿಧಾನ ನಮ್ಮ ದೇಶಕ್ಕೆ ಭದ್ರ ಬುನಾದಿ: ಈಶ್ವರ ಖಂಡ್ರೆ



