ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಧಾಮದ ಶಾಗ್ಯ ಬೀಟ್ ವ್ಯಾಪ್ತಿಯ ಹೊಳೆದಟ್ಟಿ ಅರಣ್ಯ ಪ್ರದೇಶದಲ್ಲಿ ಇಂದು ಮುಂಜಾನೆ ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಮೂವರು ಶಂಕಿತ ಬೇಟೆಗಾರರು ಮೃತಪಟ್ಟಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ಶಾಗ್ಯ ಡಿಆರ್‌ಎಫ್‌ಒ ಕಚೇರಿಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸ ಮಾಡಿ, ಆಕ್ರೋಶ ಹೊರಹಾಕಿದ್ದಾರೆ.
ಅರಣ್ಯ ಇಲಾಖೆ ಮೂಲಗಳ ಪ್ರಕಾರ, ನಾಲ್ಕು ಜನ ಬೇಟೆಗಾರರು ನಾಡ ಬಂದೂಕುಗಳೊಂದಿಗೆ ಅರಣ್ಯಕ್ಕೆ ನುಗ್ಗಿ ಬೇಟೆ ನಡೆಸುತ್ತಿದ್ದರು. ಸಿಬ್ಬಂದಿ ಶರಣಾಗತಿಯನ್ನು ಕೇಳಿದಾಗ ಬೇಟೆಗಾರರು ಮೊದಲ ಗುಂಡು ಹಾರಿಸಿದ್ದು, ಪ್ರತಿದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಒಬ್ಬ ಅರಣ್ಯ ಸಿಬ್ಬಂದಿ ಶಿವರಾಜ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕನೇ ಬೇಟೆಗಾರ ಪರಾರಿಯಾಗಿದ್ದು, ಹುಡುಕಾಟ ನಡೆಯುತ್ತಿದೆ.
ಮೃತಪಟ್ಟವರು ಹನೂರು ತಾಲೂಕಿನ ತೋಮಿಯರ್ ಪಾಳ್ಯ ಗ್ರಾಮದ ಅಂತೋನಿಸ್ವಾಮಿ, ಪೀಟರ್ ಮತ್ತು ಕುಮಾರ್. ಅವರು ವನ್ಯಪ್ರಾಣಿಗಳನ್ನು ಅಕ್ರಮವಾಗಿ ಬೇಟೆಯಾಡಿ ಮಾಂಸ ಬೇರ್ಪಡಿಸುತ್ತಿದ್ದಾಗ ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ಲಭಿಸಿತ್ತು. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಮತ್ತು ಬೇಟೆಗಾರರ ನಡುವೆ ಗುಂಡಿನ ಚಕಮಕಿ ನಡೆದು ಮೂವರಿಗೆ ಗುಂಡು ತಗುಲಿ ಸಾವನ್ನಪ್ಪಿದ್ದಾರೆ.
ಘಟನೆಯ ಮಾಹಿತಿ ತಿಳಿದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಶಾಗ್ಯ ಡಿಆರ್‌ಎಫ್‌ಒ ಕಚೇರಿಗೆ ನುಗ್ಗಿ ಪೀಠೋಪಕರಣ, ಸಲಕರಣೆಗಳು, ಮೋಟಾರ್‌ಸೈಕಲ್ ಮತ್ತು ಕಚೇರಿ ಬೋರ್ಡ್‌ಗೆ ಹಾನಿ ಮಾಡಿದ್ದಾರೆ. “ಮೃತರು ಕಳ್ಳ ಬೇಟೆಗಾರರಲ್ಲ, ಅರಣ್ಯ ಸಿಬ್ಬಂದಿ ಮೇಲೆ ದಾಳಿ ಮಾಡಿರಲಿಲ್ಲ. ಪ್ರತಿದಾಳಿಯ ನೆಪದಲ್ಲಿ ಅವರನ್ನು ಗುಂಡಿಟ್ಟು ಕೊಂದಿದ್ದಾರೆ. ಈ ಕುರಿತು ತನಿಖೆ ನಡೆಯಬೇಕು” ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮೃತರ ಶವಗಳನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಘಟನೆಯ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.




