ಶಿಥಿಲಗೊಂಡ ಸರ್ಕಾರಿ ಶಾಲಾ ಕಟ್ಟಡವನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಬೇಕು, ಶಿಕ್ಷಕರ ಕೊರತೆ ನೀಗಿಸಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಜೋಧ್ವಾಸ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಇದೀಗ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದ ರಾಜಸ್ಥಾನ ಸರ್ಕಾರ, ಶಿಥಿಲ ಕಟ್ಟಡವನ್ನು ರಿಪೇರಿ ಮಾಡಿಸುವುದರ ಜತೆಗೆ ರಸ್ತೆ ದುರಸ್ತಿ ಮಾಡಿಸಿಕೊಡಲು ಒಪ್ಪಿಕೊಂಡಿದೆ.
ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳಿದ್ದ ಕಾಕ್ರೋಚ್ ಜನತಾ ಪಾರ್ಟಿ (CJP)ಯ ಸಹ ಸಂಚಾಲಕ ಆಶುತೋಷ್ ರಂಕಾ ಮತ್ತು ಥಾನಾಗಾಜಿ ಠಾಣೆಯ ಎಸ್‌ಎಚ್‌ಒ ಮಹಾವೀರ್ ಸಿಂಗ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಪರಿಸ್ಥಿತಿ ಬಿಗಡಾಯಿಸಿದ್ದಾಗಿ ವರದಿಯಾಗಿದೆ.
ಜೋಧ್ವಾಸ್ ಸರ್ಕಾರಿ ಶಾಲೆಯ ಹಳೆಯ ಕಟ್ಟಡದ ಮೇಲ್ಛಾವಣಿಯ ಸ್ಲ್ಯಾಬ್ ಬುಧವಾರ ಏಕಾಏಕಿ ಕುಸಿದಿತ್ತು. ಘಟನೆಯಲ್ಲಿ ಯಾವುದೇ ವಿದ್ಯಾರ್ಥಿಗೆ ಗಾಯವಾಗದಿದ್ದರೂ, ಶಿಥಿಲ ಕಟ್ಟಡದಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕ ಹೆಚ್ಚಿಸಿತ್ತು. ಇದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಶಾಲೆಯ ನಾಲ್ಕು ಕೊಠಡಿಗಳ ಹಳೆಯ ಕಟ್ಟಡವನ್ನು ಕಳೆದ ವರ್ಷವೇ ಶಿಥಿಲ ಕಟ್ಟಡ ಎಂದು ಘೋಷಿಸಿ ಬಂದ್ ಮಾಡಲಾಗಿತ್ತು. ಹೀಗಾಗಿ ಶಾಲೆ ಈಗ ಕೇವಲ ಮೂರು ಕೊಠಡಿಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕೊಠಡಿಗಳ ಪೈಕಿ ಕೆಲವು ಸಿಬ್ಬಂದಿ ಕೊಠಡಿ ಹಾಗೂ ಪ್ರಾಂಶುಪಾಲರ ಕೊಠಡಿಯಾಗಿ ಬಳಕೆಯಾಗುತ್ತಿವೆ. ಮಳೆಗಾಲದಲ್ಲಿ ತರಗತಿ ಕೊಠಡಿಗಳಲ್ಲಿ ನೀರು ಸೋರಿಕೆಯಾಗುತ್ತದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಆಶುತೋಷ್ ರಂಕಾ, ವಿದ್ಯಾರ್ಥಿಗಳ ಬೇಡಿಕೆಗಳನ್ನು ಆಡಳಿತ ತಕ್ಷಣವೇ ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ವೇಳೆ ಪೊಲೀಸ್ ಅಧಿಕಾರಿಯೊಂದಿಗೆ ವಾಗ್ವಾದ ನಡೆದಿದೆ. ರಂಕಾ ಅವರು ಅಧಿಕಾರಿಗೆ ‘ನನ್ನೊಂದಿಗೆ ರಾಜಕೀಯ ಆಡಬೇಡಿ’ ಎಂದು ಎಚ್ಚರಿಕೆ ನೀಡಿದ್ದು, ಬಳಿಕ ಮಾತಿನ ಚಕಮಕಿ ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿದೆ. ಈ ಗಲಾಟೆಯಲ್ಲಿ ಯುವಕನೊಬ್ಬನ ಅಂಗಿ ಹರಿದಿರುವುದಾಗಿ ವರದಿಯಾಗಿದೆ.
ರಾಜಸ್ಥಾನದಲ್ಲಿ ಶಿಥಿಲಗೊಂಡಿರುವ ಶಾಲಾ ಕಟ್ಟಡಗಳ ಕುರಿತು ರಂಕಾ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯಾದ್ಯಂತ 84 ಸಾವಿರ ತರಗತಿ ಕೊಠಡಿಗಳು ಶಿಥಿಲ ಸ್ಥಿತಿಯಲ್ಲಿದ್ದು, 15 ಲಕ್ಷಕ್ಕೂ ಹೆಚ್ಚು ಮಕ್ಕಳ ಭವಿಷ್ಯ ಅಪಾಯದಲ್ಲಿದೆ. ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಸುಮಾರು ₹20,000 ಕೋಟಿ ಅಗತ್ಯವಿದೆ ಎಂದು ರಾಜ್ಯ ಶಿಕ್ಷಣ ಸಚಿವ ಮದನ್ ದಿಲಾವರ್ ಹೇಳಿರುವುದನ್ನು ಉಲ್ಲೇಖಿಸಿದ ರಂಕಾ, ಸರ್ಕಾರ ಇದುವರೆಗೆ ₹500 ಕೋಟಿ ಮಾತ್ರ ಬಿಡುಗಡೆ ಮಾಡಿದೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಮಧ್ಯಪ್ರದೇಶ | ಬಿಜೆಪಿ ʼಡಬಲ್ ಎಂಜಿನ್ʼ ಬೂಟಾಟಿಕೆ ಬಯಲು; ಶೋಚನೀಯ ಸ್ಥಿತಿಯಲ್ಲಿ ಸರ್ಕಾರಿ ಶಾಲೆಗಳು
ಶಿಥಿಲ ಶಾಲಾ ಕಟ್ಟಡಗಳನ್ನು ಮೂರು ತಿಂಗಳೊಳಗೆ ದುರಸ್ತಿ ಮಾಡದಿದ್ದರೆ ಸ್ವಾತಂತ್ರ್ಯ ನಂತರ ರಾಜಸ್ಥಾನ ಕಂಡ ಅತಿದೊಡ್ಡ ಪ್ರತಿಭಟನೆ ನಡೆಸುವುದಾಗಿ ರಂಕಾ ಎಚ್ಚರಿಕೆ ನೀಡಿದ್ದರು. ಮಕ್ಕಳ ಜೀವವನ್ನು ಅಪಾಯಕ್ಕೆ ಸಿಲುಕಿಸುವ ಇಂತಹ ಕಟ್ಟಡಗಳಲ್ಲಿ ಶಿಕ್ಷಣ ಮುಂದುವರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು.
ಪ್ರತಿಭಟನೆ ಮತ್ತು ಮಾತುಕತೆಯ ಬಳಿಕ ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಗಳಿಗೆ ಆಡಳಿತ ಒಪ್ಪಿಗೆ ನೀಡಿದೆ. ಶಿಥಿಲ ಕಟ್ಟಡವನ್ನು ತೆರವುಗೊಳಿಸುವುದು, ಶಿಕ್ಷಕರನ್ನು ಶೀಘ್ರ ನೇಮಕ ಮಾಡುವುದು, ಮೂರು ತಿಂಗಳೊಳಗೆ ಹೊಸ ಶಾಲಾ ಕಟ್ಟಡ ನಿರ್ಮಾಣ ಆರಂಭಿಸುವುದು, ಶಾಲೆಗೆ ಸಂಪರ್ಕ ಕಲ್ಪಿಸುವ ಹಾನಿಗೊಳಗಾದ ಸೇತುವೆ ದುರಸ್ತಿ, ಹಾಲಿ ಆರು ತರಗತಿ ಕೊಠಡಿಗಳನ್ನು ಒಂದು ವಾರದೊಳಗೆ ದುರಸ್ತಿ ಮಾಡುವುದು ಹಾಗೂ ಆಟದ ಮೈದಾನಕ್ಕೆ ಸ್ಥಳ ಒದಗಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಜಿಲ್ಲಾ ಶಿಕ್ಷಣಾಧಿಕಾರಿ ಮನೋಜ್ ಶರ್ಮಾ ಶಿಕ್ಷಕರ ಕೊರತೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಥಾನಾಗಾಜಿ ಅಭಿವೃದ್ಧಿ ಅಧಿಕಾರಿ ವಿಕಾಸ್ ಕುಮಾರ್ ಕೂಡ ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಗಳನ್ನು ಆಡಳಿತ ಒಪ್ಪಿಕೊಂಡಿರುವುದನ್ನು ದೃಢಪಡಿಸಿದ್ದಾರೆ.
ಈ ಘಟನೆಯ ಮೂಲಕ ರಾಜಸ್ಥಾನದ ಸರ್ಕಾರಿ ಶಾಲೆಗಳ ಮೂಲಸೌಕರ್ಯ, ಶಿಥಿಲ ಕಟ್ಟಡಗಳು ಹಾಗೂ ಶಿಕ್ಷಕರ ಕೊರತೆ ಮತ್ತೆ ಚರ್ಚೆಗೆ ಬಂದಿದೆ. ಶಾಲಾ ಕಟ್ಟಡ ಕುಸಿದ ನಂತರ ಪ್ರತಿಭಟನೆ ನಡೆಸುವ ಬದಲು, ಅಪಾಯದ ಸ್ಥಿತಿ ನಿರ್ಮಾಣವಾಗುವ ಮೊದಲೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂಬ ಸಂದೇಶ ರವಾನಿಸಿದೆ.




