ಏಕಾಏಕಿ ಕಾಡಾನೆ ದಾಳಿ ನಡೆಸಿದ ಪರಿಣಾಮ ಅರಣ್ಯ ವೀಕ್ಷಕ ಮೃತಪಟ್ಟಿರುವ ಘಟನೆ ಚಾಮರಾಜನಗೆ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮದ ಪೊನ್ನಾಚಿ ಅರಣ್ಯ ವಲಯದ ಹುಣಸೆಬಯಲು ಅರಣ್ಯ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ನಿವಾಸಿ ಮಹಾದೇವಸ್ವಾಮಿ(48) ಮೃತ ದುರ್ದೈವಿ. ಇವರು ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಸುಮಾರು 15 ವರ್ಷಗಳಿಂದಲೂ ಅರಣ್ಯ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೆಂದು ತಿಳಿದುಬಂದಿದ್ದು, ಮಹಾದೇವಸ್ವಾಮಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ.
ಇದನ್ನೂ ಓದಿದ್ದೀರಾ? ಗದಗ | ಅಕ್ರಮವಾಗಿ ಮರಳು ಸಾಗಾಟ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಭೀಮ ಶಕ್ತಿ ಸಂಘಟನೆ ಆಗ್ರಹ
ಎಂದಿನಂತೆ ಶನಿವಾರ ರಾತ್ರಿ ಹುಣಸೆಬಯಲು ಅರಣ್ಯ ಪ್ರದೇಶದ ಕಳ್ಳ ಬೇಟೆ ತಡೆ ಶಿಬಿರದಲ್ಲಿದ್ದ ವೇಳೆ ಆನೆ ಶಬ್ದ ಕೇಳಿ ಹೊರಬಂದಾಗ ದಿಢೀರನೇ ಕಾಡಾನೆ ಎದುರಾಗಿ ದಾಳಿ ಮಾಡಿದೆ. ಮಹಾದೇವಸ್ವಾಮಿ ಕಾಡಾನೆ ಪ್ರಹಾರದಿಂದ ತಪ್ಪಿಸಿಕೊಳ್ಳಲಾಗದೇ ತೀವ್ರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಕೂಡಲೇ ಇತರ ಸಿಬ್ಬಂದಿ ಅವರನ್ನು ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆತಂದರಾದರೂ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆಂದು ವೈದ್ಯರು ದೃಢಪಡಿಸಿರುವುದಾಗಿ ತಿಳಿದುಬಂದಿದೆ.
ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮೃತ ಮಹಾದೇವಸ್ವಾಮಿ ಕುಟುಂಬಕ್ಕೆ ಸೂಕ್ತ ಪರಿಹಾರ, ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.




