16 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ನಡೆದ ಭೀಕರ ಅಮಾನುಷ ಕೃತ್ಯವೊಂದು ದೆಹಲಿಯ ಶಹೀನ್ ಬಾಗ್‌ನಲ್ಲಿ ಬೆಳಕಿಗೆ ಬಂದಿದೆ. ಮನೆಯೊಂದರಲ್ಲಿ ಮನೆ ಕೆಲಸದಾಕೆಯಾಗಿ ದುಡಿಯುತ್ತಿದ್ದ ಸಂತ್ರಸ್ತ ಬಾಲಕಿಯನ್ನು ರಕ್ಷಿಸಲಾಗಿದೆ. ಆಕೆಗೆ ಮನೆ ಮಾಲೀಕರು ದಿನಕ್ಕೆ 20 ಗಂಟೆಗಳ ಕಾಲ ಕೆಲಸ ಮಾಡುವಂತೆ ಪೀಡಿಸುತ್ತಿದ್ದರು, ಬಿಸಿ ಐರನ್ ಬಾಕ್ಸ್ ಮತ್ತು ಕಾದ ಕಬ್ಬಿಣದಿಂದ ಮೈಯಲ್ಲೆಲ್ಲ ಸುಟ್ಟಿದ್ದರು ಹಾಗೂ ಅನ್ನ-ನೀರು ನೀಡದೆ ಚಿತ್ರಹಿಂಸೆ ನೀಡಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ.
ಅಬುಲ್ ಫಜಲ್ ಎನ್‌ಕ್ಲೇವ್-II ನಿವಾಸಿಯಾದ ಸದಾಫ್ ಎಂಬ ಮಹಿಳೆಯ ಮನೆಯಲ್ಲಿ ಶಹೀನ್ ಬಾಗ್ ಶ್ರಮ್ ವಿಹಾರ್ ಜುಗ್ಗಿಯ ನಿವಾಸಿಯಾದ ಸಂತ್ರಸ್ತ ಬಾಲಕಿಯನ್ನು ಕೆಲಸಕ್ಕೆ ಸೇರಿಸಲಾಗಿತ್ತು. ಸುಮಾರು ಒಂದು ವರ್ಷದಿಂದ ಬಾಲಕಿಯನ್ನು ಆಕೆಯ ಹೆತ್ತವರಿಂದ ಸಂಪೂರ್ಣವಾಗಿ ದೂರವಿಡಲಾಗಿತ್ತು ಎಂದು ತಿಳಿದುಬಂದಿದೆ.
ಬಾಲಕಿ ನೀಡಿರುವ ಹೇಳಿಕೆಯ ಪ್ರಕಾರ, ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 2 ಗಂಟೆಯವರೆಗೆ ಆಕೆಯಿಂದ ನಿರಂತರವಾಗಿ ಕಸ ಗುಡಿಸುವುದು, ಪಾತ್ರೆ ತೊಳೆಯುವುದು, ನೆಲ ಒರೆಸುವುದು ಸೇರಿದಂತೆ ಮನೆಯ ಎಲ್ಲ ಕೆಲಸಗಳನ್ನು ಮಾಡಿಸಲಾಗುತ್ತಿತ್ತು. ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಕೇವಲ ಒಂದು ಕಪ್ ಚಹಾ ನೀಡಲಾಗುತ್ತಿತ್ತು ಮತ್ತು ಹೆಚ್ಚಾಗಿ ತಂಗಳು ಅಡುಗೆಯನ್ನೇ ಉಣ್ಣಲು ಕೊಡಲಾಗುತ್ತಿತ್ತು.
ಮಾಲಕಿ ಸದಾಫ್ ಸಣ್ಣಪುಟ್ಟ ತಪ್ಪುಗಳಿಗೂ ಕಾದ ಐರನ್ ಬಾಕ್ಸ್ ಮತ್ತು ಬಿಸಿ ಮಾಡಿದ ಕತ್ತಿಯಿಂದ ಬಾಲಕಿಯ ಬೆನ್ನು, ಕೈಗಳು ಸೇರಿದಂತೆ ನಾನಾ ಭಾಗಗಳಿಗೆ ತೀವ್ರವಾಗಿ ಸುಡುತ್ತಿದ್ದಳು. ಒಮ್ಮೆ ಬಾಲಕಿಗೆ ಮೂರು ದಿನಗಳ ಕಾಲ ಸತತವಾಗಿ ಅನ್ನ-ನೀರು ನೀಡದೆ ಹಸಿವಿನಿಂದ ಬಳಲಿಸಲಾಗಿತ್ತು. ಹಲ್ಲೆಯಿಂದ ಗಾಯಗಳಾದಾಗ ಆಕೆಯನ್ನು ವೈದ್ಯರ ಬಳಿ ಕರೆದೊಯ್ಯುವ ಬದಲಿಗೆ ಕೇವಲ ಮೆಡಿಕಲ್ ಸ್ಟೋರ್‌ನಿಂದ ತಂದ ಔಷಧಗಳನ್ನು ನೀಡಲಾಗುತ್ತಿತ್ತು ಎಂದು ವರದಿಯಾಗಿದೆ.
‘ಅಸೋಸಿಯೇಷನ್ ಫಾರ್ ವಾಲೆಂಟರಿ ಆಕ್ಷನ್’ ಎಂಬ ಎನ್‌ಜಿಒ ಸಂಸ್ಥೆಯು ನೀಡಿದ ದೂರಿನ ಆಧಾರದ ಮೇಲೆ, ಕಲ್ಕಾಜಿ ಉಪ ವಿಭಾಗಾಧಿಕಾರಿ (SDM) ಅವರ ನಿರ್ದೇಶನದಂತೆ ನವೆಂಬರ್ 3 ಮತ್ತು 4 ರಂದು ದೆಹಲಿ ಪೊಲೀಸ್, ಕಾರ್ಮಿಕ ಇಲಾಖೆ ಹಾಗೂ ಎನ್‌ಜಿಒ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಬಾಲಕಿಯನ್ನು ರಕ್ಷಿಸಿವೆ.
ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ, ಆಕೆಯ ಬೆನ್ನಿನಾದ್ಯಂತ ಸುಟ್ಟ ಗಾಯದ ಕಲೆಗಳು ಮತ್ತು ತಲೆಯ ಭಾಗದಲ್ಲಿ ಗಾಯಗಳು ಕಂಡುಬಂದಿವೆ. ಬಾಲಕಿಯನ್ನು ಹೆತ್ತವರೊಂದಿಗೆ ಮಾತನಾಡಲು ವರ್ಷಕ್ಕೆ ಕೇವಲ ಎರಡರಿಂದ ಮೂರು ಬಾರಿ ಮಾತ್ರ ಫೋನ್‌ನಲ್ಲಿ ಅವಕಾಶ ನೀಡಲಾಗುತ್ತಿತ್ತು. ಆದರೆ, ಆ ಸಂದರ್ಭದಲ್ಲೂ ಆಕೆಯ ದೇಹದಲ್ಲಿದ್ದ ಗಾಯಗಳು ಹೆತ್ತವರ ಕಣ್ಣಿಗೆ ಬೀಳದಿರಲಿ ಎಂದು ಆಕೆಯ ಮುಖಕ್ಕೆ ಬಟ್ಟೆ ಮುಚ್ಚಲಾಗುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಲೇಖನ ಓದಿದ್ದೀರಾ?: ಸುಪ್ರೀಂ ಆದೇಶವಿದ್ದರೂ ರಂಗೋಲಿ ಕೆಳಗೆ ತೂರುವ ಪೊಲೀಸರು: ಬಂಧಿತರ ಮೂಲಭೂತ ಹಕ್ಕುಗಳ ಮೇಲೇಕೆ ತೂಗುಕತ್ತಿ?
ಅಧಿಕಾರಿಗಳ ಮುಂದೆ ಬಾಯಿಬಿಟ್ಟರೆ ಜೀವ ಸಹಿತ ಉಳಿಸುವುದಿಲ್ಲವೆಂದು ಮಾಲೀಕರು ಬೆದರಿಕೆ ಹಾಕಿದ್ದರಿಂದ ಆರಂಭದಲ್ಲಿ ಬಾಲಕಿ ತೀವ್ರ ಭಯದಲ್ಲಿದ್ದರು. ನಂತರ ಬಾಲ ಮಂಡಳಿ (CWC) ಮುಂದೆ ಆಕೆ ತನಗಾದ ಸತತ ದೌರ್ಜನ್ಯವನ್ನು ಕಣ್ಣೀರಿಡುತ್ತಾ ವಿವರಿಸಿದ್ದಾಳೆ. ಮ್ಯಾಜಿಸ್ಟ್ರೇಟ್ ಮುಂದೆ ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಸದ್ಯ ಆಕೆಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಬಾಲಕಾರ್ಮಿಕ ಕಾಯ್ದೆ-1986 ಮತ್ತು ಬಾಲನ್ಯಾಯ (ಮಕ್ಕಳ ರಕ್ಷಣೆ ಮತ್ತು ಪಾಲನೆ) ಕಾಯ್ದೆ-2015ರ ಅಡಿಯಲ್ಲಿ ದೂರು ದಾಖಲಿಸಲು ಶಹೀನ್ ಬಾಗ್ ಠಾಣೆಗೆ ಎಸ್‌ಡಿಎಮ್ ಆದೇಶಿಸಿದ್ದಾರೆ.
ತನಗೆ ಹಿಂಸೆ ನೀಡಿದವರಿಗೆ ಕಠಿಣ ಶಿಕ್ಷೆಯಾಗಬೇಕು. ತಾನು ಮತ್ತೆ ಶಾಲೆಗೆ ಹೋಗಿ ಶಿಕ್ಷಕಿಯಾಗಬೇಕು ಎಂಬ ಆಶಯವನ್ನು ಬಾಲಕಿ ಸಿಡಬ್ಲ್ಯೂಸಿ ಮುಂದೆ ವ್ಯಕ್ತಪಡಿಸಿದ್ದಾರೆ.



