ಇಸ್ರೇಲ್‌ನಲ್ಲಿ ಅಕ್ಟೋಬರ್ 27ರಂದು ನಡೆದ ಸಾರ್ವತ್ರಿಕ ಚುನಾವಣೆಯ ನಂತರ ನೂತನ ಸಮ್ಮಿಶ್ರ ಸರ್ಕಾರ ರಚಿಸಲು ವಿಪಕ್ಷದ ನಾಯಕ ಐಸೆನ್‌ಕೋಟ್ ಅವರಿಗೆ ಅಧ್ಯಕ್ಷ ಐಸಾಕ್ ಹರ್ಜೋಗ್ ಆಹ್ವಾನ ನೀಡಿದ್ದಾರೆ. ಅಧ್ಯಕ್ಷರ ಈ ತೀರ್ಮಾನದಿಂದಾಗಿ ನೆತನ್ಯಾಹು ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಐಸೆನ್‌ಕೋಟ್ ಅವರ ಪ್ರಯತ್ನಕ್ಕೆ ದೊಡ್ಡ ಯಶಸ್ಸು ಸಿಕ್ಕಂತಾಗಿದೆ. ಸುದೀರ್ಘ ಆಡಳಿತ ನಡೆಸಿದ್ದ ಬೆಂಜಮಿನ್ ನೆತನ್ಯಾಹು ಅವರಿಗೆ ಭಾರೀ ಹಿನ್ನಡೆಯಲಾಗಿದೆ.
ಅಧ್ಯಕ್ಷರ ಆಹ್ವಾನದ ಬಳಿಕ ತಮ್ಮ ಅಧಿಕೃತ ‘X’ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಐಸೆನ್‌ಕೋಟ್, “ಪ್ರಸ್ತುತ ಪರಿಸ್ಥಿತಿಯಲ್ಲಿ ದೇಶಕ್ಕೆ ರಾಷ್ಟ್ರೀಯ ತುರ್ತು ಸರ್ಕಾರ ರಚನೆಯ ಅಗತ್ಯವಿದೆ. ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ” ಎಂದು ಭರವಸೆ ನೀಡಿದ್ದಾರೆ.
ಆದರೆ, ಐಸೆನ್‌ಕೋಟ್ ಅವರಿಗೆ ಸಮ್ಮಿಶ್ರ ಸರ್ಕಾರ ರಚಿಸಲು ನೀಡಲಾಗಿರುವ ಆರು ವಾರಗಳ ಕಾಲಾವಕಾಶವು ಅತ್ಯಂತ ಸವಾಲಿನಿಂದ ಕೂಡಿದೆ. 2023ರ ಅಕ್ಟೋಬರ್ 7ರಂದು ಹಮಾಸ್ ನಡೆಸಿದ ಭೀಕರ ದಾಳಿ ಮತ್ತು ತದನಂತರ ಕಳೆದ ಮೂರು ವರ್ಷಗಳಿಂದ ಗಾಜಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆತನ್ಯಾಹು ಆಡಳಿತ ನಡೆಸಿರುವ ಕ್ರೌರ್ಯದಿಂದ ಇಸ್ರೇಲ್ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ತೀವ್ರ ವಿಭಜನೆಗೊಂಡಿದೆ.
ಇಂತಹ ಪರಿಸ್ಥಿತಿಯಲ್ಲಿ ನಡೆದ ಚುನಾವಣೆಯಲ್ಲಿ ನೆತನ್ಯಾಹು ಮತ್ತು ಅವರ ಮಿತ್ರಪಕ್ಷಗಳ ಒಕ್ಕೂಟವು ಪಾರ್ಲಿಮೆಂಟ್‌ನಲ್ಲಿ ತಮ್ಮ ಬಹುಮತವನ್ನು ಕಳೆದುಕೊಂಡಿವೆ. ಅದೇ ಸಮಯದಲ್ಲಿ, ಐಸೆನ್‌ಕೋಟ್ ನೇತೃತ್ವದ ಮೈತ್ರಿಕೂಟ ಕೂಡ ಸ್ವತಂತ್ರವಾಗಿ ಆಡಳಿತ ನಡೆಸಲು ಬೇಕಾದಷ್ಟು ಸಂಖ್ಯೆ ಸಿಕ್ಕಿಲ್ಲ. ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಚುನಾವಣೆ ನಂತರ ಅಧ್ಯಕ್ಷರೊಂದಿಗಿನ ಮಾತುಕತೆಯಲ್ಲಿ ಹೆಚ್ಚಿನ ಪ್ರಮುಖ ರಾಜಕೀಯ ಪಕ್ಷಗಳು ಐಸೆನ್‌ಕೋಟ್ ಹೆಸರನ್ನೇ ಸರ್ಕಾರ ರಚನೆಗೆ ಶಿಫಾರಸು ಮಾಡಿವೆ ಆದರೂ, ಪಾರ್ಲಿಮೆಂಟ್‌ನಲ್ಲಿ ಅಗತ್ಯವಿರುವ ಸ್ಪಷ್ಟ ಬಹುಮತವನ್ನು ಕ್ರೋಡೀಕರಿಸುವುದು ಸುಲಭವಲ್ಲ. ಯಾವುದೇ ಸಮ್ಮಿಶ್ರ ಆಡಳಿತ ಅಸ್ತಿತ್ವಕ್ಕೆ ಬರಬೇಕಾದರೂ ರಾಜಕೀಯ ನಾಯಕರು ತಮ್ಮ ಸ್ವಂತ ಮತದಾರರ ವಿರೋಧಕ್ಕೆ ಕಾರಣವಾಗಬಹುದಾದ ಕಠಿಣ ರಾಜಿಸಂಧಾನಗಳಿಗೆ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ಚುನಾವಣೆಯಲ್ಲಿ ಅರಬ್ ನೇತೃತ್ವದ ಪಕ್ಷಗಳು ಸರ್ಕಾರ ರಚನೆಯಲ್ಲಿ ಪ್ರಮುಖ ‘ಕಿಂಗ್ ಮೇಕರ್’ ಪಾತ್ರಕ್ಕೆ ಬಂದುನಿಂತಿವೆ. ಇಸ್ರೇಲ್ ಇತಿಹಾಸದಲ್ಲಿ ಇದುವರೆಗೆ ಕೇವಲ ಒಂದೇ ಒಂದು ಬಾರಿ ಮಾತ್ರ ಅರಬ್ ಪಕ್ಷವೊಂದು ಆಡಳಿತ ಸರ್ಕಾರದ ಭಾಗವಾಗಿತ್ತು. ಮೂರು ವರ್ಷಗಳ ಸುದೀರ್ಘ ಯುದ್ಧದ ನಂತರ ಅರಬ್ ಪಕ್ಷಗಳ ಜೊತೆ ಕೈಜೋಡಿಸುವುದು ಐಸೆನ್‌ಕೋಟ್ ಅವರಿಗೆ ರಾಜಕೀಯವಾಗಿ ವಿರೋಧ ಎದುರಾಗಬಹುದು. ಆದಾಗ್ಯೂ, ನೆತನ್ಯಾಹು ಅವರು ಐಸೆನ್‌ಕೋಟ್ ಮತ್ತು ಅರಬ್ ಪಕ್ಷಗಳ ನಡುವೆ ಯಾವುದೇ ಮೈತ್ರಿ ಏರ್ಪಡದಂತೆ ತಡೆಯಲು ಸಕ್ರಿಯ ರಾಜಕೀಯ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಅರಬ್ ಪಕ್ಷಗಳು ಚುನಾವಣೆಯನ್ನು ಕದ್ದಿವೆ ಎಂದು ಯಾವುದೇ ಆಧಾರವಿಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ನೂತನ ಸರ್ಕಾರ ರಚನೆಗೆ ಮುಖ್ಯವಾಗಿ ಎರಡು ಮಾರ್ಗಗಳಿವೆ ಎಂದು ಹೇಳಲಾಗಿದೆ. ಮೊದಲನೆಯದಾಗಿ, ಐಸೆನ್‌ಕೋಟ್ ಮತ್ತು ನೆತನ್ಯಾಹು ಇಬ್ಬರೂ ಸೇರಿ ಪ್ರಮುಖ ಯಹೂದಿ ಪಕ್ಷಗಳನ್ನೊಳಗೊಂಡ ವಿಶಾಲ ಐಕ್ಯತಾ ಸರ್ಕಾರವನ್ನು ರಚಿಸುವುದು. ಆದರೆ ಇಬ್ಬರ ನಡುವೆ ಮೂಲಭೂತ ವಿಚಾರಗಳಲ್ಲೇ ತೀವ್ರ ಭಿನ್ನಾಭಿಪ್ರಾಯಗಳಿವೆ. ನೆತನ್ಯಾಹು ಅವರು ಧಾರ್ಮಿಕ ಆರ್ಥೊಡಾಕ್ಸ್ ಯುವಜನರಿಗೆ ಸೇನಾ ಸೇವೆಯಿಂದ ವಿನಾಯಿತಿ ನೀಡಬೇಕೆಂಬ ಬೇಡಿಕೆಯನ್ನು ಬೆಂಬಲಿಸುತ್ತಿದ್ದಾರೆ ಮತ್ತು ಅಕ್ಟೋಬರ್ 7ರ ಭದ್ರತಾ ವೈಫಲ್ಯಗಳ ಬಗ್ಗೆ ಅಧಿಕೃತ ತನಿಖೆಯನ್ನು ವಿರೋಧಿಸುತ್ತಿದ್ದಾರೆ. ಐಸೆನ್‌ಕೋಟ್ ಇವೆರಡನ್ನೂ ಬಲವಾಗಿ ಪ್ರತಿಪಾದಿಸುತ್ತಿದ್ದಾರೆ.
ಎರಡನೇ ಮಾರ್ಗವೆಂದರೆ, ಐಸೆನ್‌ಕೋಟ್ ಅವರು ಅರಬ್ ಪಕ್ಷಗಳಿಂದ ಹೊರಗಿನ ಬೆಂಬಲವನ್ನು ಪಡೆದು ‘ಅಲ್ಪಸಂಖ್ಯಾತ ಸರ್ಕಾರ’ವನ್ನು ನಡೆಸುವುದು. ಆದರೆ ಐಸೆನ್‌ಕೋಟ್ ಅವರ ಸ್ವಂತ ಮೈತ್ರಿಕೂಟದ ಕೆಲ ಸದಸ್ಯರೇ ಇಂತಹ ಮೈತ್ರಿಯನ್ನು ಸಂಪೂರ್ಣವಾಗಿ ತಿರಸ್ಕರಿಸುವುದಾಗಿ ತಿಳಿಸಿದ್ದಾರೆ.



