ಚಿಕ್ಕಬಳ್ಳಾಪುರದ ನಂದಿ ಹಿಲ್ಸ್‌ನಲ್ಲಿ ನಡೆದ ಮಾನ್ಸೂನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ 31 ವರ್ಷದ ಟೆಕ್ಕಿ ಓಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಓಟಗಾರ ಅಮನ್ ದೀಪ್ ಸಿಂಗ್ ಜಗಡೆ ಹೃದಯಾಘಾತದಿಂದ ದುರಂತ ಅಂತ್ಯಕ್ಕೀಡಾದ ಪಂಜಾಬ್ ಮೂಲದ ಟೆಕ್ಕಿ ಎಂದು ವರದಿಗಳು ತಿಳಿಸಿವೆ.
ನಂದಿ ಹಿಲ್ಸ್‌ನಲ್ಲಿ 10 ಕಿ.ಮೀ. ಮತ್ತು 21 ಕಿ.ಮೀ. ವಿಭಾಗಗಳಲ್ಲಿ ಆಯೋಜಿಸಲಾಗಿದ್ದ ಮ್ಯಾರಥಾನ್‌ನಲ್ಲಿ ಅಮನ್ ದೀಪ್ ಸಿಂಗ್ 21 ಕಿ.ಮೀ. ಓಟದಲ್ಲಿ ಭಾಗವಹಿಸಿದ್ದರು. ನಂದಿಗಿರಿಧಾಮದ ಬೆಟ್ಟದ ಮೇಲೆ ಓಡುತ್ತಿದ್ದಾಗ ಅರ್ಧ ದೂರ ಕ್ರಮಿಸಿದ ಬಳಿಕ ದಿಢೀರ್ ನೆಲಕ್ಕೆ ಕುಸಿದಿದ್ದಾರೆ. ಮ್ಯಾರಥಾನ್ ವಾಲಂಟಿಯರ್‌ಗಳು ತಕ್ಷಣವೇ ಅವರನ್ನು ಮುದ್ದೇನಹಳ್ಳಿಯ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಮನ್ ಉಸಿರು ಚೆಲ್ಲಿದ್ದಾರೆ. ಹೃದಯಾಘಾತವೇ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ. ನಿಖರ ಕಾರಣ ಮರಣೋತ್ತರ ಪರೀಕ್ಷೆಯ ಬಳಿಕ ಸ್ಪಷ್ಟವಾಗಲಿದೆ.

‘ದೇವರು ನನ್ನ ಜೊತೆಗೆ ಇದ್ದಾನೆ’: ಮೃತ ದುರ್ದೈವಿ ಅಮನ್ ದೀಪ್ ಸಿಂಗ್, ಮ್ಯಾರಥಾನ್ ಆರಂಭವಾಗುವ ಮುನ್ನ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ “21 ಕಿ.ಮೀ. ಓಟದಲ್ಲಿ ದೇವರು ಜೊತೆಗಿದ್ದಾನೆ” ಎಂದು ಬರೆದುಕೊಂಡಿದ್ದರು. ಅವರು ಪಂಜಾಬ್ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರು. ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಸದ್ಯ ಮೃತದೇಹವನ್ನು ಆಸ್ಪತ್ರೆಯಲ್ಲಿರಿಸಲಾಗಿದ್ದು, ಬೆಂಗಳೂರಿನಲ್ಲಿರುವ ಅವರ ಪತ್ನಿಯ ಆಗಮನಕ್ಕಾಗಿ ಪೊಲೀಸರು ಕಾಯುತ್ತಿದ್ದಾರೆ.
ಈ ಬಾರಿಯ ಮಾನ್ಸೂನ್ ಮ್ಯಾರಥಾನ್‌ನಲ್ಲಿ 10 ಕಿ.ಮೀ. ಮತ್ತು 21 ಕಿ.ಮೀ. ವಿಭಾಗಗಳಲ್ಲಿ ಒಟ್ಟು 4,500ಕ್ಕೂ ಹೆಚ್ಚು ಓಟಗಾರರು ಭಾಗವಹಿಸಿದ್ದರು. ಕರ್ನಾಟಕ ಸರ್ಕಾರ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದ ಸಹಯೋಗದಲ್ಲಿ ಆಯೋಜಿಸಲಾಗಿತ್ತು




