ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಮಾಡಿಕೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ(ಡೈರಿ)ಭಾರೀ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಗ್ರಾಮಸ್ಥರು ಹಾಗೂ ಹಾಲು ಉತ್ಪಾದಕರು ಡೈರಿಗೆ ಬೀಗ ಜಡಿದು ತೀವ್ರ ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ.
ಮಾಡಿಕೇರಿ ಹಾಲಿನ ಡೈರಿಯ ಕಾರ್ಯದರ್ಶಿ ರಾಜೇಶ್ ಎಂಬುವರು ಈ ಹಿಂದೆ ಹಾಲಿಗೆ ನೀರು ಬೆರೆಸಿ ಗ್ರಾಹಕರಿಗೆ ಹಾಗೂ ಸಂಘಕ್ಕೆ ವಂಚನೆ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಅವ್ಯವಹಾರದ ಹಿನ್ನೆಲೆಯಲ್ಲಿ ಅವರನ್ನು ಕಾರ್ಯದರ್ಶಿ ಹುದ್ದೆಯಿಂದ ಅಮಾನತು ಮಾಡಲಾಗಿತ್ತು.
ಅಮಾನತಿನಲ್ಲಿದ್ದ ರಾಜೇಶ್ ಅವರಿಗೆ ಆಡಳಿತ ಮಂಡಳಿಯು ಮತ್ತೆ ಅಧಿಕಾರ ನೀಡಿದ್ದು ಗ್ರಾಮಸ್ಥರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಅವ್ಯವಹಾರದ ಆರೋಪ ಹೊತ್ತಿರುವ ವ್ಯಕ್ತಿಗೆ ಪುನಃ ಜವಾಬ್ದಾರಿ ಹಸ್ತಾಂತರಿಸಿರುವುದನ್ನು ವಿರೋಧಿಸಿ, ಆಡಳಿತ ಮಂಡಳಿಯ ನಿರ್ಧಾರವನ್ನು ಖಂಡಿಸಿ ಗ್ರಾಮಸ್ಥರು ಡೈರಿಯ ಬಾಗಿಲಿಗೆ ಬೀಗ ಹಾಕಿ ಧರಣಿ ಕುಳಿತರು.
ಆರೋಪಿ ಕಾರ್ಯದರ್ಶಿ ರಾಜೇಶ್ ಅವರನ್ನು ಕೂಡಲೇ ಹುದ್ದೆಯಿಂದ ಶಾಶ್ವತವಾಗಿ ತೆರವುಗೊಳಿಸಬೇಕು.ಅವ್ಯವಹಾರ ನಡೆಸಿದವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ರಾಜೇಶ್ ಅವರನ್ನು ಹುದ್ದೆಯಿಂದ ತೆಗೆದುಹಾಕಿ ತಮಗೆ ಸೂಕ್ತ ನ್ಯಾಯ ಒದಗಿಸುವವರೆಗೂ ಡೈರಿಗೆ ಯಾವುದೇ ಕಾರಣಕ್ಕೂ ಹಾಲು ಸರಬರಾಜು ಮಾಡುವುದಿಲ್ಲ ಎಂದು ಹಾಲು ಉತ್ಪಾದಕರು ಪಟ್ಟು ಹಿಡಿದಿದ್ದಾರೆ.
ಇದನ್ನು ಓದಿದ್ದೀರಾ..?ಕೋಲಾರ | ವಾಲ್ಮೀಕಿ, ಅಂಬೇಡ್ಕರ್ ನಮ್ಮ ನಿಜವಾದ ಹೀರೋಗಳು: ಶಾಸಕ ಕೊತ್ತೂರು ಮಂಜುನಾಥ್
ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಮೇಲಾಧಿಕಾರಿಗಳು ತಕ್ಷಣವೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಹೇಳಿದರು.
ಚಿಂತಾಮಣಿ | ಮಾಡಿಕೇರಿ ಹಾಲು ಉತ್ಪಾದಕರ ಸಂಘದಲ್ಲಿ ಭಾರೀ ಅವ್ಯವಹಾರ : ಡೈರಿಗೆ ಬೀಗ ಜಡಿದು ಗ್ರಾಮಸ್ಥರ ಪ್ರತಿಭಟನೆ
ಪೋಸ್ಟ್ ಹಂಚಿಕೊಳ್ಳಿ:




