ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗವು ನಡೆಸಿದ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯು ಇದೀಗ ಮತ್ತೊಂದು ಸುತ್ತಿನ ತೀವ್ರ ವಿವಾದಕ್ಕೆ ಕಾರಣವಾಗಿದೆ. ನ್ಯಾಯಾಂಗ ಅಧಿಕಾರಿಗಳು ಅರ್ಹರೆಂದು ತೀರ್ಪು ನೀಡಿ ಮತದಾರರ ಪಟ್ಟಿಗೆ ಸೇರಿಸಿದ್ದ ಲಕ್ಷಾಂತರ ಜನರ ಹೆಸರನ್ನು ತೆಗೆದುಹಾಕಲು ಚುನಾವಣಾ ಆಯೋಗವೇ ಮೇಲ್ಮನವಿ ಸಲ್ಲಿಸಿದೆ.
ಬಂಗಾಳದ ಮುರ್ಷಿದಾಬಾದ್, ಶಂಸೆರಗಂಜ್ ಮತ್ತು ಮಾಲ್ಡಾದ ಸುಜಾಪುರ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ ಅಧಿಕಾರಿಗಳು ನಡೆಸಿದ ವಿಚಾರಣೆ ಮತ್ತು ತೀರ್ಪುಗಳು ಹಾಗೂ ಚುನಾವಣಾ ಆಯೋಗದ ಷಡ್ಯಂತ್ರಕ್ಕೆ ಸಂಬಂಧಿಸಿದಂತೆ ‘ಸಿವಿಕ್ ರಿಸರ್ಚ್ ಗ್ರೂಪ್’ ಸಂಗ್ರಹಿಸಿರುವ ದಾಖಲೆಗಳು ಸ್ಫೋಟಕ ಸತ್ಯಗಳನ್ನು ಬಿಚ್ಚಿಟ್ಟಿವೆ.
ಎಸ್‌ಐಆರ್ ಪರಿಷ್ಕರಣೆ ವೇಳೆ ಸಮ್ಸರ್‌ಗಂಜ್‌ನಲ್ಲಿ ನ್ಯಾಯಾಂಗ ಅಧಿಕಾರಿಗಳು 74,775 ಮತದಾರರನ್ನು ಅನರ್ಹರೆಂದು ಘೋಷಿಸಿದ್ದರು. ಆದರೆ, ಸುಜಾಪುರದಲ್ಲಿ ನ್ಯಾಯಾಧೀಶರು ಬಹಳ ಕಡಿಮೆ ಜನರ ಹೆಸರುಗಳನ್ನು ಮಾತ್ರ ಕೈಬಿಟ್ಟಿದ್ದರು. ಆದರೆ, ನ್ಯಾಯಾಧೀಶರು ಯಾರಿಗೆ ‘ಅರ್ಹರು’ ಎಂದು ಕ್ಲೀನ್ ಚಿಟ್ ನೀಡಿ ಮತದಾರರ ಪಟ್ಟಿಗೆ ಮರಳಿ ಸೇರಿಸಿದ್ದರೋ, ಆ ಪೈಕಿ ಸುಜಾಪುರದಲ್ಲಿ ಬರೋಬ್ಬರಿ 61,066 ಮತದಾರರ ಸೇರ್ಪಡೆಯನ್ನು ಪ್ರಶ್ನಿಸಿ ಚುನಾವಣಾ ಆಯೋಗವೇ ಮೇಲ್ಮನವಿ ಸಲ್ಲಿಸಿದೆ. ಇದು ರಾಜ್ಯದಲ್ಲೇ ಅತಿ ಹೆಚ್ಚು ಎನ್ನಲಾಗಿದೆ.
ಶಂಸೆರಗಂಜ್‌ನಲ್ಲೂ ಸಹ ನ್ಯಾಯಾಧೀಶರು ಕ್ಲೀನ್ ಚಿಟ್ ನೀಡಿದ್ದವರಲ್ಲಿ 15,195 ಜನರ (ಶೇ.47.6ರಷ್ಟು) ವಿರುದ್ಧ ಆಯೋಗ ಮೇಲ್ಮನವಿ ಹೂಡಿದೆ. ಅಂದರೆ, ನ್ಯಾಯಾಧೀಶರು ತೆಗೆದುಹಾಕಿದವರಿಗಿಂತ ಆಯೋಗವೇ ಮೇಲ್ಮನವಿ ಮೂಲಕ ಪ್ರಶ್ನಿಸುತ್ತಿರುವವರ ಸಂಖ್ಯೆ ದುಪ್ಪಟ್ಟಾಗಿದೆ. ಈ ಎಲ್ಲ ಮೇಲ್ಮನವಿಗಳು ಬಾಕಿ ಉಳಿದಿದ್ದು, ಒಂದು ವೇಳೆ ಆಯೋಗದ ಈ ಆಕ್ಷೇಪಣೆಗಳು ಗೆದ್ದರೆ, ಆ ಎರಡು ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಿಂದ ಬೃಹತ್ ಪ್ರಮಾಣದ ಮತದಾರರು ನಾಪತ್ತೆಯಾಗಲಿದ್ದಾರೆ. ಸುಜಾಪುರದ ಕಥೆಯಂತೂ ವಿಚಿತ್ರವಾಗಿದ್ದು, ಆಯೋಗದ ಈ ಮೇಲ್ಮನವಿಗಳ ಸಂಖ್ಯೆಯೇ ಅಲ್ಲಿನ ಇಡೀ ಕರಡು ಮತದಾರರ ಪಟ್ಟಿಯ ಕಾಲುಭಾಗದಷ್ಟಿದೆ.
ಇನ್ನು ದಾಖಲೆಗಳ ಪ್ರಕಾರ, ಚುನಾವಣಾ ಆಯೋಗವು ಯಾರ್ಯಾರ ವಿರುದ್ಧ ಮೇಲ್ಮನವಿ ಸಲ್ಲಿಸಿದೆಯೋ, ಆ ಪೈಕಿ ಶಂಸೆರಗಂಜ್‌ನಲ್ಲಿ ಶೇ.99.9 ರಷ್ಟು ಮತ್ತು ಸುಜಾಪುರದಲ್ಲಿ ಶೇ. 99.6 ರಷ್ಟು ಮತದಾರರು ಮುಸ್ಲಿಂ ಸಮುದಾಯದವರು. ಅಲ್ಪಸಂಖ್ಯಾತರು 72%ರಿಂದ 75%ರಷ್ಟು ಇರುವ ಈ ಕ್ಷೇತ್ರಗಳಲ್ಲಿ, ಎಸ್‌ಐಆರ್ ಆರಂಭದ ಹಂತದಿಂದಲೂ ನಿರ್ದಿಷ್ಟ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ತನಿಖೆಗೆ ಒಳಪಟ್ಟಿದ್ದರು ಎಂಬುದು ಗಮನಾರ್ಹ.
ಪ್ರತಿ ಮೇಲ್ಮನವಿಗೂ ಒಂದು ಐಡಿ ಇರುತ್ತದೆ. ನಾಗರಿಕ ಹಕ್ಕು ಕಾರ್ಯಕರ್ತರು ಇವುಗಳನ್ನು ಪರಿಶೀಲಿಸಿದಾಗ ಒಂದು ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಈ ಒಟ್ಟು 76,000ಕ್ಕೂ ಅಧಿಕ ಮೇಲ್ಮನವಿಗಳಲ್ಲಿ 96%ರಷ್ಟು ಅರ್ಜಿಗಳು (ಅಂದರೆ 72,838 ಅರ್ಜಿಗಳು) ಏಪ್ರಿಲ್ 5ರಂದು ಒಂದೇ ನಿರ್ದಿಷ್ಟ ಸಮಯದಲ್ಲಿ ಸೃಷ್ಟಿಯಾಗಿವೆ. ಅಂದರೆ, ಪ್ರತಿಯೊಬ್ಬ ಮತದಾರರ ಪ್ರಕರಣವನ್ನು ಪ್ರತ್ಯೇಕವಾಗಿ ಪರಿಶೀಲಿಸಿ ಅರ್ಜಿ ಹಾಕುವ ಬದಲು, ಬೂತ್‌ವಾರು ಹೆಚ್ಚಿನ ಪ್ರಮಾಣದಲ್ಲಿ ಒಂದೇ ರಾತ್ರಿ ಕಡತಗಳನ್ನು ಸಿದ್ಧಪಡಿಸಿ ಮೇಲ್ಮನವಿ ಸಲ್ಲಿಸಲಾಗಿದೆ. ಅಸೆಂಬ್ಲಿ ಚುನಾವಣೆಗಾಗಿ ಮತದಾರರ ಪಟ್ಟಿ ಲಾಕ್ ಆಗುವುದಕ್ಕೆ ಕೇವಲ ಎರಡು ದಿನಗಳ ಮುಂಚೆ ಈ ಕೃತ್ಯ ನಡೆದಿದೆ ಎಂಬುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಈ ಬೃಹತ್ ಪ್ರಮಾಣದ ಮೇಲ್ಮನವಿಗಳ ಪೈಕಿ ಇಲ್ಲಿವರೆಗೆ ಟ್ರಿಬ್ಯೂನಲ್‌ಗಳು ಇತ್ಯರ್ಥಪಡಿಸಿರುವುದು ಕೇವಲ 105 ಪ್ರಕರಣಗಳನ್ನು ಮಾತ್ರ. ಉಳಿದ ಸಾವಿರಾರು ಅರ್ಜಿಗಳು ನೂರಾರು ಕಿಲೋಮೀಟರ್ ದೂರದ ಕೋಲ್ಕತ್ತಾದ ಟ್ರಿಬ್ಯೂನಲ್‌ನಲ್ಲಿ ವಿಚಾರಣೆಗೆ ಬಾಕಿ ಇವೆ. ಅದರಲ್ಲೂ ವಿಶೇಷವೆಂದರೆ, ಟ್ರಿಬ್ಯೂನಲ್ ನ್ಯಾಯಾಧೀಶರು ಇಸಿಐ ಪೋರ್ಟಲ್‌ನಲ್ಲಿ ಲಾಗಿನ್ ಆಗಲು ಆಧಾರ್ ಕ್ರೀಡೆನ್ಷಿಯಲ್ಸ್ ಬಳಸಲು ನಿರಾಕರಿಸಿದ ಕಾರಣದಿಂದಾಗಿ, ಕಳೆದ ಸೆಪ್ಟೆಂಬರ್‌ನಿಂದ ಇಲ್ಲಿವರೆಗೆ ಯಾವುದೇ ಟ್ರಿಬ್ಯೂನಲ್ ಆದೇಶಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗಿಲ್ಲ. ಪರಿಣಾಮ, ಮತದಾರರ ಭವಿಷ್ಯ ಅನಿಶ್ಚಿತತೆಯಲ್ಲಿ ಸಿಲುಕಿದೆ.
ನವೆಂಬರ್ ವೇಳೆಗೆ ಮುನ್ಸಿಪಲ್ ಚುನಾವಣೆಗಳ ವೇಳಾಪಟ್ಟಿ ಪ್ರಕಟವಾಗುವ ನಿರೀಕ್ಷೆಯಿದೆ. ಈ ಹಂತದಲ್ಲಿ, ಚುನಾವಣಾ ಆಯೋಗವೇ ನ್ಯಾಯಾಲಯದ ಆದೇಶಗಳನ್ನು ಮೀರಿ ಮೇಲ್ಮನವಿಗಳ ಮೂಲಕ ಮತದಾರರನ್ನು ಹೊರಹಾಕಲು ಯತ್ನಿಸುತ್ತಿರುವುದು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೇಲೂ ನೇರ ಪರಿಣಾಮ ಬೀರಲಿದೆ. ಬೂತ್ ಮಟ್ಟದ ಅಧಿಕಾರಿಗಳು (BLO) ಮತ್ತು ನ್ಯಾಯಾಂಗ ಅಧಿಕಾರಿಗಳು ಈಗಾಗಲೇ ಅರ್ಹರೆಂದು ಒಪ್ಪಿಕೊಂಡಿದ್ದರೂ, ಆಯೋಗವು ಯಾವ ಆಧಾರದ ಮೇಲೆ, ಯಾರ ಸೂಚನೆಯ ಮೇರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮೇಲ್ಮನವಿಗಳನ್ನು ಹಾಕಿದೆ ಎಂಬುದಕ್ಕೆ ಇದುವರೆಗೂ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.



