ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಚಿಸಿರುವ ತಜ್ಞರ ಸಮಿತಿಯು ಗುರುವಾರ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಿದೆ.
ನೀತಿ ಆಯೋಗದ ಸದಸ್ಯ ಹಾಗೂ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತ ಸಮಿತಿ ಮುಖ್ಯಸ್ಥ ರಮೇಶ್ ಚಂದ್ರ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ರೈತ ಪ್ರತಿನಿಧಿಗಳು, ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಉದ್ಯಮದ ತಜ್ಞರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಈ ಸಮಿತಿಯು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿರುವ ವರದಿಯ ಆಧಾರದ ಮೇಲೆ ಕಬ್ಬು ಮತ್ತು ಸಕ್ಕರೆ ಬೆಲೆ ನಿರ್ಧಾರವಾಗುವ ಸಾಧ್ಯತೆಯಿದೆ. ಸಭೆಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ರೈತರ ಪರವಾಗಿ ಹಲವು ಪ್ರಮುಖ ಬೇಡಿಕೆಗಳನ್ನು ಮಂಡಿಸಿದರು.
ಕೃಷಿ ಉತ್ಪಾದನಾ ವೆಚ್ಚಗಳಾದ ಕಬ್ಬಿನ ಬೀಜ, ಗೊಬ್ಬರ, ಕೃಷಿ ಕೂಲಿ, ನೀರಾವರಿ, ವಿದ್ಯುತ್, ಡೀಸೆಲ್, ಕಟಾವು ಮತ್ತು ಸಾಗಾಣಿಕೆ ವೆಚ್ಚಗಳು ಗಣನೀಯವಾಗಿ ಏರಿಕೆಯಾಗಿವೆ. ಕರ್ನಾಟಕ ಸರ್ಕಾರದ ಕಬ್ಬು ಅಭಿವೃದ್ಧಿ ಆಯುಕ್ತರ ವರದಿಯಂತೆ ಒಂದು ಟನ್ ಕಬ್ಬು ಬೆಳೆಯಲು ₹4,450 ವೆಚ್ಚವಾಗುತ್ತದೆ. ಆದರೆ, ಪ್ರಸ್ತುತ ರೈತರಿಗೆ ಸಿಗುತ್ತಿರುವ ದರವು ವೆಚ್ಚಕ್ಕೆ ಅನುಗುಣವಾಗಿಲ್ಲ. ಹೀಗಾಗಿ, ಶೇ 10.25ರಷ್ಟು ಸಕ್ಕರೆ ಇಳುವರಿ ಪ್ರಮಾಣಕ್ಕೆ ಕನಿಷ್ಠ ಎಫ್‌ಆರ್‌ಪಿ (FRP) ದರವನ್ನು ಪ್ರತಿ ಟನ್‌ಗೆ ₹4,500 ಕ್ಕೆ ಏರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ದೇಶದಲ್ಲಿ ಶೇ 75ರಷ್ಟು ಸಕ್ಕರೆಯು ಸಿಹಿ ತಿಂಡಿ, ತಂಪು ಪಾನೀಯ ತಯಾರಿಕಾ ಕಂಪನಿಗಳು ಹಾಗೂ ಇತರ ಆಹಾರ ಸಂಸ್ಕರಣಾ ಉದ್ದೇಶಗಳಿಗೆ ವಾಣಿಜ್ಯವಾಗಿ ಬಳಕೆಯಾಗುತ್ತಿದ್ದು, ಕೇವಲ ಶೇ 25ರಷ್ಟು ಮಾತ್ರ ಗೃಹಬಳಕೆಯಾಗುತ್ತಿದೆ. ಆದ್ದರಿಂದ, ಅಡುಗೆ ಅನಿಲದ ಮಾದರಿಯಲ್ಲಿ ವಾಣಿಜ್ಯ ಬಳಕೆಯ ಸಕ್ಕರೆಗೆ ಹೆಚ್ಚಿನ ದರ ನಿಗದಿಪಡಿಸಿ, ಸಾಮಾನ್ಯ ಗ್ರಾಹಕರಿಗೆ ಹಾಲಿ ಇರುವ ದರವನ್ನೇ ಮುಂದುವರಿಸಬೇಕು. ವಾಣಿಜ್ಯ ಸಕ್ಕರೆಯಿಂದ ಬರುವ ಹೆಚ್ಚುವರಿ ಆದಾಯವನ್ನು ರೈತರ ಎಫ್‌ಆರ್‌ಪಿ ಹೆಚ್ಚಿಸಲು ಬಳಸುವ ವ್ಯವಸ್ಥೆಯಾಗಬೇಕು. ಇದರ ಜೊತೆಗೆ, ಸಕ್ಕರೆ ನಿಯಂತ್ರಣ ಕಾಯ್ದೆ 1966ರ ಅನ್ವಯ ಕಬ್ಬಿನ ಉಪ ಉತ್ಪನ್ನಗಳಾದ ಮೊಲಾಸಿಸ್, ಬಗಾಸ್, ಎಥೆನಾಲ್ ಹಾಗೂ ವಿದ್ಯುತ್ ಉತ್ಪಾದನೆಯಿಂದ ಕಾರ್ಖಾನೆಗಳಿಗೆ ಸಿಗುವ ಹೆಚ್ಚುವರಿ ಆದಾಯದಲ್ಲಿ ರೈತರಿಗೆ ಕಡ್ಡಾಯವಾಗಿ ಪಾಲು (ಲಾಭ ಹಂಚಿಕೆ) ನೀಡುವ ಪದ್ಧತಿ ಜಾರಿಯಾಗಬೇಕು ಎಂದು ಆಗ್ರಹಿಸಲಾಗಿದೆ.
ಸಕ್ಕರೆ ಕಾರ್ಖಾನೆಗಳು ಪ್ರಸ್ತುತ ಕಬ್ಬು ಸರಬರಾಜು ಮಾಡಿದ ಎಲ್ಲಾ ರೈತರ ಪ್ರಮಾಣವನ್ನು ಆಧರಿಸಿ ಸರಾಸರಿ ಇಳುವರಿ ಲೆಕ್ಕ ಹಾಕಿ ದರ ನೀಡುತ್ತಿವೆ. ಇದರಿಂದ ಉತ್ತಮ ಗುಣಮಟ್ಟದ ಕಬ್ಬು ಬೆಳೆದ ರೈತರಿಗೆ ಅನ್ಯಾಯವಾಗುತ್ತಿದೆ. ಇದರ ಬದಲು, ಪ್ರತಿ ರೈತನ ಜಮೀನಿನಲ್ಲಿ ಬೆಳೆದ ಕಬ್ಬಿನ ಸಕ್ಕರೆ ಇಳುವರಿಯನ್ನು ವೈಜ್ಞಾನಿಕವಾಗಿ ಪ್ರತ್ಯೇಕವಾಗಿ ಪರೀಕ್ಷಿಸಿ, ಅದರ ಆಧಾರದ ಮೇಲೆಯೇ ಎಫ್‌ಆರ್‌ಪಿ ದರ ನಿಗದಿಪಡಿಸಬೇಕು. ಅಲ್ಲದೆ, ಕಬ್ಬು ಕಟಾವು ಯಂತ್ರಗಳ ಮೂಲಕ ಕಟಾವು ಮಾಡುವಾಗ ‘ವೇಸ್ಟೇಜ್’ ಹೆಸರಿನಲ್ಲಿ ಕಾನೂನುಬಾಹಿರವಾಗಿ ಶೇ 8ರಿಂದ 10ರಷ್ಟು ತೂಕ ಕಡಿತ ಮಾಡುವುದನ್ನು ತಕ್ಷಣವೇ ತಪ್ಪಿಸಬೇಕು. ವೈಜ್ಞಾನಿಕ ಮಾನದಂಡಗಳಿಲ್ಲದೆ ರೈತರನ್ನು ಶೋಷಣೆ ಮಾಡುತ್ತಿರುವ ಇಂತಹ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ವಿವರಿಸಲಾಯಿತು.
ಸರ್ಕಾರ ಘೋಷಿಸುವ ಎಫ್‌ಆರ್‌ಪಿ ದರವು ‘ರೈತರ ಹೊಲದಲ್ಲಿನ ದರ’ ಎಂದು ನಿಗದಿಯಾಗಬೇಕು. ಪ್ರಸ್ತುತ ಕಟಾವು ಮತ್ತು ಸಾಗಾಣಿಕೆ ವೆಚ್ಚದ ಹೆಸರಿನಲ್ಲಿ ರೈತರ ಹಣದಲ್ಲೇ ಹೆಚ್ಚಿನ ಕಡಿತ ಮಾಡಲಾಗುತ್ತಿದ್ದು, ಸರ್ಕಾರ ನಿಗದಿಪಡಿಸಿದ ಹಣ ರೈತರಿಗೆ ಸಂಪೂರ್ಣವಾಗಿ ಸಿಗುತ್ತಿಲ್ಲ. ಈ ಶೋಷಣೆ ತಪ್ಪಿಸಲು ಕಟಾವು ಮತ್ತು ಸಾಗಾಣಿಕೆ ವೆಚ್ಚಗಳನ್ನು ಸಕ್ಕರೆ ಕಾರ್ಖಾನೆಗಳೇ ಭರಿಸುವ ವ್ಯವಸ್ಥೆ ಜಾರಿಗೆ ಬರಬೇಕು. ಇದರ ಜೊತೆಗೆ, ಹವಾಮಾನ ಹಾಗೂ ಮಳೆಯ ವ್ಯತ್ಯಾಸದಿಂದ ಪ್ರತಿ ವರ್ಷ ಕಬ್ಬಿನ ಗುಣಮಟ್ಟ ಮತ್ತು ಇಳುವರಿ ಬದಲಾಗುವುದರಿಂದ, ಹಿಂದಿನ ವರ್ಷದ ಇಳುವರಿಯನ್ನು ಆಧಾರವಾಗಿಟ್ಟುಕೊಂಡು ಪ್ರಸಕ್ತ ವರ್ಷದ ದರ ನಿಗದಿಪಡಿಸುವ ನೀತಿಯನ್ನು ಬದಲಾಯಿಸಬೇಕು. ಆಯಾ ವರ್ಷ ರೈತರು ಪೂರೈಸುವ ಕಬ್ಬಿನ ಇಳುವರಿಯನ್ನೇ ಮಾನದಂಡವಾಗಿ ಪರಿಗಣಿಸಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ.
ಕಾನೂನಿನ ಪ್ರಕಾರ ಕಬ್ಬು ಪೂರೈಸಿದ 14 ದಿನಗಳೊಳಗೆ ರೈತರಿಗೆ ಹಣ ಪಾವತಿಸುವುದು ಕಾರ್ಖಾನೆಗಳ ಜವಾಬ್ದಾರಿಯಾಗಿದೆ. ಆದರೆ, ಹಲವು ಕಾರ್ಖಾನೆಗಳು ಸರ್ಕಾರದ ಆದೇಶವನ್ನು ನಿರ್ಲಕ್ಷಿಸಿ ತಿಂಗಳುಗಟ್ಟಲೆ ಹಣ ಬಾಕಿ ಉಳಿಸಿಕೊಳ್ಳುತ್ತಿವೆ. ಹೀಗಾಗಿ, ಕಬ್ಬು ಪೂರೈಸಿದ 14 ದಿನಗಳೊಳಗೆ ಹಣ ಪಾವತಿಸುವುದನ್ನು ಕಡ್ಡಾಯಗೊಳಿಸಿ, ವಿಳಂಬ ಪಾವತಿಗೆ ಕಾನೂನಿನ ಪ್ರಕಾರ ಬಡ್ಡಿ ವಿಧಿಸಬೇಕು. ನಿರಂತರವಾಗಿ ನಿಯಮ ಉಲ್ಲಂಘಿಸುವ ಕಾರ್ಖಾನೆಗಳ ಪರವಾನಗಿ ಅಮಾನತು ಮಾಡುವುದರ ಜೊತೆಗೆ, ರೈತರ ಬಾಕಿ ಹಣ ವಸೂಲಿಗೆ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಪೂರ್ಣ ಅಧಿಕಾರ ನೀಡಬೇಕು ಎಂದು ಸಂಘವು ಆಗ್ರಹಿಸಿದೆ.
ಕಬ್ಬಿನ ಬೆಳೆ ಆಕಸ್ಮಿಕ ಬೆಂಕಿ ಅನಾಹುತದಿಂದ ಸುಟ್ಟು ಹೋದಾಗ ಕಂದಾಯ ಇಲಾಖೆ ನೀಡುವ ಪರಿಹಾರ ಧನವನ್ನು ವೈಜ್ಞಾನಿಕವಾಗಿ ಏರಿಕೆ ಮಾಡಬೇಕು. ಬೆಂಕಿ ಬಿದ್ದ ಕಬ್ಬನ್ನು ನುರಿಸುವಾಗ ಸಕ್ಕರೆ ಕಾರ್ಖಾನೆಗಳು ಎಫ್‌ಆರ್‌ಪಿ ಹಣದಲ್ಲಿ ಶೇ 25ರಷ್ಟು ಕಡಿತ ಮಾಡುವ ನಿಯಮವನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಜೊತೆಗೆ ಸಕ್ಕರೆಯನ್ನು ಅತ್ಯಗತ್ಯ ವಸ್ತುಗಳ ಕಾಯ್ದೆಯಿಂದ ಕೈಬಿಟ್ಟು ಮುಕ್ತ ಮಾರುಕಟ್ಟೆ ವ್ಯಾಪ್ತಿಗೆ ತರಬೇಕು. ಹೆಚ್ಚುತ್ತಿರುವ ಕೃಷಿ ಉತ್ಪಾದನಾ ವೆಚ್ಚ, ಅಸಮರ್ಪಕ ಬೆಲೆ, ಕಾರ್ಖಾನೆಗಳ ಶೋಷಣೆ, ಬರಗಾಲ ಹಾಗೂ ಸಾಲದ ಹೊರೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಪಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತುರ್ತಾಗಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಕುರುಬೂರು ಶಾಂತಕುಮಾರ್ ಸಮಿತಿಯ ಮುಂದೆ ತಮ್ಮ ಅಹವಾಲು ಸಲ್ಲಿಸಿದ್ದಾರೆ.




