ಕರ್ನಾಟಕ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಷ್ಟು ವೇಗವಾಗಿ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುವ ಮತ್ತೊಬ್ಬ ನಾಯಕ ಸಿಗುವುದು ಕಷ್ಟ. ನಿನ್ನೆ ವಿರೋಧಿಸಿದವರನ್ನು ಇಂದು ಸಮರ್ಥಿಸಿಕೊಳ್ಳುವುದು, ಹಿಂದೆ ಜೊತೆಗಿದ್ದವರನ್ನೇ ಇಂದು ದೂರುವುದು, ರಾಜಕೀಯ ಮೈತ್ರಿಗಳನ್ನು ಬದಲಾಯಿಸುವುದು ಅವರ ರಾಜಕೀಯ ಬದುಕಿನಲ್ಲಿ ಹಳೇ ಚಾಳಿಯಂತೆ ರೂಢಿಯಾಗಿದೆ.
ಅಧಿಕಾರಕ್ಕಾಗಿ ಕಾಂಗ್ರೆಸ್ ಜೊತೆಗೂ ಕೈಜೋಡಿಸಿದವರು, ಬಿಜೆಪಿ ಜೊತೆಗೂ ಸರ್ಕಾರ ರಚಿಸಿದವರು, ಜಾತ್ಯತೀತತೆಯ ಹೆಸರಿನಲ್ಲಿ ರಾಜಕೀಯ ಮಾಡುತ್ತಲೇ ಕೋಮುವಾದವನ್ನೂ ಮೈದಳೆದವರು ಇದೇ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ. ಪ್ರಸ್ತುತ, ದೆಹಲಿಯ ಅಧಿಕಾರದ ಸವಲತ್ತು ಅನುಭವಿಸುತ್ತಿರುವ ಕುಮಾರಸ್ವಾಮಿ ಅವರ ಚಿತ್ತ ಮಾತ್ರ ರಾಜ್ಯದ ಮೇಲೆಯೇ ಇದೆ.
ಆದರೆ, ಇತ್ತೀಚಿನ ತಿಂಗಳುಗಳಲ್ಲಿ ಅವರ ಹೇಳಿಕೆಗಳ ಸ್ವರೂಪ ಮತ್ತಷ್ಟು ಬದಲಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಪ್ರತಿದಿನ ಹೊಸ ಆರೋಪ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ವೈಯಕ್ತಿಕ ಟೀಕೆ, ಕಾಂಗ್ರೆಸ್ನ ಒಳಜಗಳಗಳ ಕುರಿತು ಊಹಾಪೋಹ, ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾದ ಅನುಕಂಪ ಹಾಗೂ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಘೋಷಣೆಗಳೊಂದಿಗೆ ಅವರು ರಾಜ್ಯದಲ್ಲಿ ಸದ್ದು-ಸುದ್ದಿ ಮಾಡುತ್ತಲೇ ಇದ್ದಾರೆ. ಆದರೆ, ಅವರ ಮಾತು ಮತ್ತು ನಿಲುವುಗಳು ಅವರ ರಾಜಕೀಯ ವಿಶ್ವಾಸಾರ್ಹತೆಯನ್ನೇ ಪ್ರಶ್ನೆಗೆ ಎಡೆಮಾಡಿದೆ.
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಕುಮಾರಸ್ವಾಮಿ ಅವರ ರಾಜಕಾರಣವು ಅಸ್ಥಿರ ರಾಜಕೀಯ ನಿಲುವುಗಳಿಂದಲೇ ಕೂಡಿದೆ. ಕುಮಾರಸ್ವಾಮಿ ಅವರು ಡೋಲಾಯಮಾನ ನಿಲುವುಗಳು ಆರಂಭವಾದದ್ದು 2006ರಲ್ಲಿ. ಆ ವರ್ಷ, ಕಾಂಗ್ರೆಸ್ ಜೊತೆಗಿನ ಮೈತ್ರಿ ಮುರಿದುಕೊಂಡ ಕುಮಾರಸ್ವಾಮಿ, ಬಿಜೆಪಿ ಜೊತೆಗೂಡಿ 20-20 (20 ತಿಂಗಳ ಅಧಿಕಾರ ಹಂಚಕೆ) ಸರ್ಕಾರ ರಚಿಸಿದರು. ಆದರೆ, ತಾವು ನೀಡಿದ 20 ತಿಂಗಳ ಅಧಿಕಾರ ಹಂಚಿಕೆಯ ಒಪ್ಪಂದವನ್ನು ಪಾಲಿಸದೆ ಸರ್ಕಾರವನ್ನು ಪತನಗೊಳಿಸಿದರು. ಇದು ಅವರ ವಿಶ್ವಾಸಾರ್ಹತೆಯ ಕೊರತೆಗೆ ಬುನಾದಿಯಾಯಿತು.
ಇನ್ನು, 2018ರಲ್ಲಿ ಮತ್ತೆ ಕಾಂಗ್ರೆಸ್ ಜೊತೆ ಮೈತ್ರಿ ಸರ್ಕಾರ ರಚಿಸಿದ ಕುಮಾರಸ್ವಾಮಿ, 2023ರಲ್ಲಿ ಕಾಂಗ್ರೆಸ್ ಭಾರೀ ಬಹುಮತ ಪಡೆದು ಸರ್ಕಾರ ರಚಿಸಿದ ಬಳಿಕ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಹೀಗೆ ಅಧಿಕಾರ ಸಿಗುವ ಸಂದರ್ಭದಲ್ಲಿ ಕಾಂಗ್ರೆಸ್ ಜತೆಗೂ ಕೈಜೋಡಿಸುವುದು, ಅನುಕೂಲಕ್ಕೆ ತಕ್ಕಂತೆ ಸಿದ್ಧಾಂತಗಳನ್ನೂ ಬದಿಗಿಟ್ಟು ಬಿಜೆಪಿ ಜತೆಗೂ ಮೈತ್ರಿ ಮಾಡಿಕೊಳ್ಳುವುದು ಕುಮಾರಸ್ವಾಮಿ/ಜೆಡಿಎಸ್ನ ಅಧಿಕೃತ ಸಿದ್ಧಾಂತವೇ ಆದಂತೆ ತೋರುತ್ತದೆ.
ಜಾತ್ಯತೀತತೆಯ ಬ್ರಾಂಡ್ ಹೆಸರಿನೊಂದಿಗೆ ರಾಜಕೀಯ ಅಸ್ತಿತ್ವ ಕಂಡುಕೊಂಡ ಪಕ್ಷವು, ಇಂದು ಅಧಿಕಾರದ ಲಾಭಕ್ಕಾಗಿ ಕೋಮುವಾದಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಸೇರಿಕೊಂಡಿದೆ. ಈ ಕೃತ್ಯವನ್ನು ತಮ್ಮ ಸಾಂಪ್ರದಾಯಿಕ ಮತದಾರರ ಎದುರು ಸಮರ್ಥಿಸಿಕೊಳ್ಳಲು ಕುಮಾರಸ್ವಾಮಿ ಹೆಣಗುತ್ತಿದ್ದಾರೆ.
ಇನ್ನು, ಇತ್ತೀಚಿನ ತಿಂಗಳುಗಳಲ್ಲಿ ಕುಮಾರಸ್ವಾಮಿ ಅವರ ಹೇಳಿಕೆಗಳು ಮತ್ತು ನಿಲುವುಗಳಲ್ಲಿ ಆಕ್ರಮಣಕಾರಿ ಧೋರಣೆ ಹೆಚ್ಚಾಗಿದೆ. ಇದು ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ಹತಾಶ ಪ್ರಯತ್ನದಂತೆ ಗೋಚರಿಸುತ್ತಿದೆ. ಎರಡು ದಶಕಗಳ ಕಾಲ ತೀವ್ರ ರಾಜಕೀಯ ವೈರಿಗಳಾಗಿದ್ದ, ತಮ್ಮನ್ನು ಪದೇಪದೆ ಟೀಕಿಸುತ್ತಿದ್ದ ಸಿದ್ದರಾಮಯ್ಯ ಅವರ ಕುರಿತು ಇದ್ದಕ್ಕಿದ್ದಂತೆ ಕುಮಾರಸ್ವಾಮಿ ಅವರು ಅನುಕಂಪ ತೋರುತ್ತಿರುವುದು ಅಚ್ಚರಿಯಂತಿದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ಒಳಗಡೆಯೇ ಸಂಚು ನಡೆದಿದೆ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿರುವ ಅವರ ಹಿಂದಿನ ಮರ್ಮವೇನು? ಇದು ಸಿದ್ದರಾಮಯ್ಯರ ಮೇಲಿನ ಅತಿಯಾದ ಕಾಳಜಿಗಿಂತಲೂ, ಒಕ್ಕಲಿಗ ಸಮುದಾಯದ ನಾಯಕ, ತಮ್ಮ ಬದ್ಧಪ್ರತಿಸ್ಪರ್ಧಿ ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ರಾಜಕೀಯವಾಗಿ ಇಕ್ಕಟ್ಟಿಗೆ ಸಿಲುಕಿಸುವ ತಂತ್ರಗಾರಿಕೆಯಷ್ಟೇ ಎಂದು ವಿಶ್ಲೇಷಕರು ಹೇಳುತ್ತಾರೆ.
ಇದೇ ಸಂದರ್ಭದಲ್ಲಿ ಇತ್ತೀಚಿನ ಸ್ಟಿಂಗ್ ಕಾರ್ಯಾಚರಣೆ ವಿವಾದ ಮತ್ತು ಅದಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆಯನ್ನು ಎದುರಿಸುತ್ತಿರುವ ತಮ್ಮ ಪಕ್ಷದ ಕಾರ್ಯಕರ್ತರ ವಿಚಾರದಲ್ಲಿ ಕುಮಾರಸ್ವಾಮಿ ಅನುಸರಿಸುತ್ತಿರುವ ಧೋರಣೆ ಅವರ ದ್ವಿಮುಖ ನೀತಿಯನ್ನು ಬಹಿರಂಗಗೊಳಿಸಿದೆ. ಡಿ.ಕೆ. ಶಿವಕುಮಾರ್ ಅವರನ್ನು ‘ಸ್ಟಿಂಗ್ ಸಾಮ್ರಾಟ್’ ಎಂದು ಜರಿಯುತ್ತಾ ತನಿಖೆಗೆ ಆಗ್ರಹಿಸುವ ಕುಮಾರಸ್ವಾಮಿ, ತಮ್ಮದೇ ಪಕ್ಷದ ಸಾಮಾಜಿಕ ಜಾಲತಾಣ ಕಾರ್ಯಕರ್ತರಿಗೆ ಪೊಲೀಸರು ವಿಚಾರಣಾ ನೋಟಿಸ್ ನೀಡಿದಾಗ ಅದನ್ನು ರಾಜಕೀಯ ಕಿರುಕುಳ ಎಂದು ಬೊಬ್ಬೆಯಿಡುತ್ತಿದ್ದಾರೆ. ಕೊನೆಗೆ, ‘ಕಾರ್ಯಕರ್ತರು ತನಿಖೆಗೆ ಸಹಕರಿಸಬೇಕು’ ಎಂದು ತಮ್ಮ ಹೇಳಿಕೆಯನ್ನೂ ಬದಲಾಯಿಸಿದ್ದಾರೆ.
ಅಂದರೆ, ಆರೋಪ ಎದುರಾಳಿಯ ಮೇಲಿದ್ದಾಗ ನ್ಯಾಯ ಬೇಕು ಎನ್ನುವುದು, ತಮ್ಮವರ ಮೇಲೆ ತನಿಖೆ ಬಂದಾಗ ಅದು ದ್ವೇಷದ ರಾಜಕಾರಣ ಎಂದು ಬಿಂಬಿಸುವುದು ಕುಮಾರಸ್ವಾಮಿ ಅವರ ಧೋರಣೆ. ಇದೆಲ್ಲವೂ ರಾಜಕೀಯ ಅನುಕೂಲವಾದಿತನಕ್ಕೆ ಸಾಕ್ಷಿಯಾಗಿದೆ.
ಇದಷ್ಟೇ ಅಲ್ಲದೆ, ಕುಮಾರಸ್ವಾಮಿ ಅವರ ಅತಿರೇಕದ ಹೇಳಿಕೆಗಳ ಸರಣಿಗೆ ಕೊನೆಯಿಲ್ಲ. ದೆಹಲಿಯಲ್ಲಿ ಕುಮಾರಸ್ವಾಮಿ ನೀಡಿರುವ ಮತ್ತೊಂದು ಹೇಳಿಕೆ, ವ್ಯವಸ್ಥೆಗೆ ಬೆದರಿಕೆ ಹಾಕುವಂತಿದೆ. “ಕಾನೂನುಬಾಹಿರವಾಗಿ ನಡೆದುಕೊಳ್ಳುವ ಪೊಲೀಸ್ ಅಧಿಕಾರಿಗಳ ಹೆಸರುಗಳನ್ನು ಬರೆದಿಟ್ಟುಕೊಳ್ಳಿ. ಇನ್ನೊಂದು ವರ್ಷದಲ್ಲಿ ನಮ್ಮ ಸರ್ಕಾರ ಬರಲಿದೆ, ಆಗ, ಲೆಕ್ಕ ಚುಕ್ತಾ ಮಾಡುತ್ತೇವೆ” ಎಂದು ಬಹಿರಂಗವಾಗಿ ಅವರು ಬೆದರಿಕೆ ಹಾಕಿದ್ದಾರೆ. ಇದು ಒಬ್ಬ ಕೇಂದ್ರ ಸಚಿವರಿಗೆ ಶೋಭೆ ತರುವಂತಹದ್ದಲ್ಲ. ಮಾತ್ರವಲ್ಲ, ಇದು ಸರ್ವಾಧಿಕಾರಿ ಧೋರಣೆಯ ಪ್ರತೀಕವೂ ಕೂಡ.
ಈ ಲೇಖನ ಓದಿದ್ದೀರಾ?: ಗಡಿಯಲ್ಲಿ ಚೀನಾ ಅತಿಕ್ರಮಣ; ಮೌನಕ್ಕೆ ಸರಿದ 56 ಇಂಚಿನ ಎದೆಯ ಮೋದಿ!
ಕೇಂದ್ರ ಸಚಿವರಾಗಿ ಪ್ರಮುಖ ಖಾತೆಯನ್ನು ಹೊಂದಿದ್ದರೂ, ಕುಮಾರಸ್ವಾಮಿ ಅವರ ಇಡೀ ರಾಜಕೀಯ ಗಮನ ಮತ್ತು ಚಟುವಟಿಕೆಗಳು ಕೇವಲ ಕರ್ನಾಟಕದ ಆಡಳಿತವನ್ನು ಟೀಕಿಸುವುದಕ್ಕೇ ಸೀಮಿತವಾಗಿವೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಹೇಗಾದರೂ ಮಾಡಿ ಎನ್ಡಿಎ ಮೈತ್ರಿಕೂಟದ ಮೂಲಕ ರಾಜ್ಯದಲ್ಲಿ ಅಧಿಕಾರ ಹಿಡಿದು ತಾವೇ ಮುಖ್ಯಮಂತ್ರಿಯಾಗಬೇಕು ಎಂಬ ಅತಿರೇಕದ ಮಹತ್ವಾಕಾಂಕ್ಷೆಯೇ ಅವರ ಇತ್ತೀಚಿನ ಎಲ್ಲ ಆಕ್ರಮಣಕಾರಿ ಹೇಳಿಕೆಗಳ ಹಿಂದಿನ ಅಘೋಷಿತ ಅಜೆಂಡಾ.
ಆದರೆ, 2023ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಶಾಸಕರ ಬಲ ಕೇವಲ 19ಕ್ಕೆ ಕುಸಿದಿರುವುದು ಮತ್ತು ಮತ ಬ್ಯಾಂಕ್ ಗಣನೀಯವಾಗಿ ಕುಸಿದಿತ್ತು. ಇನ್ನು, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೃಪಾಕಟಾಕ್ಷದಿಂದ ತಾವು ಗೆದ್ದು, ಕೇಂದ್ರ ಸಚಿವರಾದರೂ, ತಮ್ಮ ರಾಜೀನಾಮೆಯಿಂದ ತೆರವಾದ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ತಮ್ಮ ಪುತ್ರ ನಿಖಿಲ್ನನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದೆಲ್ಲದರ ನಡುವೆ, ಒಕ್ಕಲಿಗ ನಾಯಕನೇ ಆಗಿರುವ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯೂ ಆಗಿದ್ದಾರೆ. ಇದರಿಂದ, ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಮತಗಳು ಕಾಂಗ್ರೆಸ್ನತ್ತ ಹರಿದುಬಿಡುವ, ತಮ್ಮ ನೆಲೆ ಮತ್ತಷ್ಟು ಕುಸಿದು ಹೋಗುವ ಅಂತಕ ಕುಮಾರಸ್ವಾಮಿ ಅವರಲ್ಲಿದೆ. ಈ ಹತಾಷೆಯಿಂದಲೇ ಅವರು ರಾಜ್ಯ ಸರ್ಕಾರದ ಮೇಲೆ ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ.
ಆದರೆ, ಅವರು ಜನಸಾಮಾನ್ಯರ ಮೂಲಭೂತ ಸಮಸ್ಯೆಗಳಾದ ಕೃಷಿ ಬಿಕ್ಕಟ್ಟು, ನಿರುದ್ಯೋಗ, ನೀರಾವರಿ ಹಾಗೂ ಗ್ರಾಮೀಣ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿಲ್ಲ. ಹೋರಾಟ ನಡೆಸುತ್ತಿಲ್ಲ. ಬದಲಾಗಿ, ರಾಜ್ಯ ಸರ್ಕಾರ ಮತ್ತು ಅದರ ಮುಂದಾಳುಗಳ ವಿರುದ್ಧ ದಿನಕ್ಕೊಂದು ಆರೋಪ-ಪ್ರತ್ಯಾರೋಪ ಮಾಡುತ್ತಾ, ಗಣೇಶ ಹಬ್ಬದ ನಂತರ ಬಾಂಬ್ ಸಿಡಿಸ್ತೀನಿ, ಪಿತೃಪಕ್ಷದ ನಂತರ ಪಿಟೀಲು ತರ್ತೀನಿ, ದೀಪಾವಳಿ ನಂತರ ರಾಕೆಟ್ ಹಾರಿಸ್ತೀನಿ ಎನ್ನುತ್ತಲೇ ಕಾಲಹರಣ ಮಾಡುತ್ತಿದ್ದಾರೆ. ಇಂತಹ ವಾಗ್ದಾಳಿಗಳು ತಮ್ಮ ಪಕ್ಷದ ಪುನರುಜ್ಜೀವನಕ್ಕೆ ದಾರಿ ಮಾಡಿಕೊಡುವುದಿಲ್ಲ. ಬದಲಾಗಿ, ಮತದಾರರಿಗೆ ತಮ್ಮ ಮೇಲಿರುವ ವಿಶ್ವಾಸರ್ಹತೆಯೇ ಕುಸಿಯುತ್ತದೆ ಎಂಬ ಕನಿಷ್ಠ ಜ್ಞಾನವೂ ಅವರಿಗೆ ಇದ್ದಂತಿಲ್ಲ.
ತಮ್ಮದು ಜಾತ್ಯತೀತ, ಮಣ್ಣಿನ ಮಕ್ಕಳ ಪಕ್ಷವೆಂದು ಹೇಳಿಕೊಳ್ಳುವ ಕುಮಾರಸ್ವಾಮಿ ಅವರ ನಿಲುವು ಧೋರಣೆಯಲ್ಲಿ ರೈತ ಪರ ಕಾಳಜಿಯೂ ಇಲ್ಲ, ಕೋಮು ಸೌಹಾರ್ದತೆಯ ಸುಳಿವಂತೂ ಇಲ್ಲವೇ ಇಲ್ಲ. ಬದಲಾಗಿ, ಬಿಜೆಪಿ ಹಾದಿಯಲ್ಲಿ ಅಲ್ಪಸಂಖ್ಯಾತರನ್ನು ದೂಷಿಸುವ ಚಾಳಿಯನ್ನು ಮೈಗೂಡಿಸಿಕೊಂಡಿದ್ದಾರೆ.
ಇದನ್ನೂ ಓದಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳ ಡಿಲೀಟ್: ಮೋದಿ ಸರ್ಕಾರದ ವಿರುದ್ಧ ಧ್ರುವ್ ರಾಠಿ ಆಕ್ರೋಶ
ಅಧಿಕಾರ ಸಿಕ್ಕಾಗ ಮೈತ್ರಿಗಳನ್ನು ಮುರಿಯುವುದು, ಅನುಕೂಲಕ್ಕೆ ತಕ್ಕಂತೆ ಹೇಳಿಕೆಗಳನ್ನು ಬದಲಾಯಿಸುವುದು ಹಾಗೂ ಪ್ರತಿದಿನ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸುದ್ದಿಯಲ್ಲಿರಲು ಬಯಸುತ್ತಿರುವ ಕುಮಾರಸ್ವಾಮಿ ಅವರು ರಾಜ್ಯದ ಜನರೆದುರು ತಮ್ಮ ಘನತೆ ಮತ್ತು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿ ಅವರು ತಮ್ಮ ಅತಿರೇಕದ ಹೇಳಿಕೆಗಳ ರಾಜಕಾರಣವನ್ನು ಕೈಬಿಟ್ಟು, ಗಂಭೀರ ಮತ್ತು ತತ್ವಬದ್ಧ ರಾಜಕಾರಣಕ್ಕೆ ಮರಳದಿದ್ದರೆ, ಅದು ಎದುರಾಳಿಗಳಿಗಿಂತ ಹೆಚ್ಚಾಗಿ ಅವರ ಸ್ವಂತ ರಾಜಕೀಯ ಭವಿಷ್ಯಕ್ಕೇ ಮುಳುವಾಗುವುದು ಖಚಿತ!



