ರೈತರು ಆತ್ಮಹತ್ಯೆ ಮಾಡಿಕೊಂಡರೆ ಅವರ ಅಂತ್ಯಕ್ರಿಯೆಯಲ್ಲಿ ಯಾರೂ ಪಾಲ್ಗೊಳ್ಳಬಾರದು, ಮೃತದೇಹಗಳನ್ನು ಪ್ರಾಣಿಗಳು ತಿನ್ನುವಂತಹ ಪರಿಸ್ಥಿತಿ ನಿರ್ಮಾಣವಾದರೆ ಇತರರು ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ಹಿಂದೆ ಸರಿಯಬಹುದು ಎಂದು ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಮಂಗಳವಾರ ಮಹಾರಾಷ್ಟ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರೈತರ ಆತ್ಮಹತ್ಯೆ ಕುರಿತಾದ ಪ್ರಶ್ನೆಗೆ ಉತ್ತರಿಸುವಾಗ ಬುಲ್ಡಾನಾ ಕ್ಷೇತ್ರದ ಶಾಸಕರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ರೈತರು ಕಷ್ಟದಲ್ಲಿದ್ದಾಗ ಆತ್ಮಹತ್ಯೆಗೆ ಶರಣಾಗಿ ಕುಟುಂಬವನ್ನು ಅನಾಥವಾಗಿಸುವ ಬದಲು ಸರ್ಕಾರ, ಶಾಸಕರು ಅಥವಾ ಸಂಸದರನ್ನು ಸಂಪರ್ಕಿಸಿ ಸಹಾಯ ಪಡೆಯಬೇಕು ಎಂದು ಗಾಯಕ್ವಾಡ್ ಅವರು ಸಲಹೆ ನೀಡಿದರು. “ನಿಮಗೆ (ರೈತರಿಗೆ) ಸಮಸ್ಯೆಗಳಿದ್ದರೆ, ಸರ್ಕಾರಕ್ಕೆ, ನಿಮ್ಮ ಶಾಸಕರಿಗೆ ಅಥವಾ ಸಂಸದರಿಗೆ ಪತ್ರ ಬರೆಯಿರಿ. ಇಲ್ಲವಾದರೆ, ನಿಮ್ಮ ಕಷ್ಟಗಳನ್ನು ನನಗೆ ತಿಳಿಸಿ, ಎಲ್ಲರೂ ನಿಮಗೆ ಸಹಾಯ ಮಾಡುತ್ತಾರೆ. ಆದರೆ, ನಿಮ್ಮ ಪ್ರಾಣವನ್ನು ನೀವೇ ಕಳೆದುಕೊಂಡು ಮಕ್ಕಳನ್ನು ಅಸಹಾಯಕರನ್ನಾಗಿ ಮಾಡುವುದು ಒಂದು ರೀತಿಯಲ್ಲಿ ಅವರಿಗೆ ನೀಡುವ ಶಿಕ್ಷೆಯಾಗಿದೆ” ಎಂದು ಅವರು ಹೇಳಿದರು.
“ನೀವು ನಿಮ್ಮ ಹೆಂಡತಿಯೊಂದಿಗೆ ಸಪ್ತಪದಿ ತುಳಿಯುತ್ತೀರಿ, ಏಳು ಜನ್ಮಗಳ ಕಾಲ ಅವಳೊಂದಿಗೆ ಇರುವುದಾಗಿ ಹಾಗೂ ಮಕ್ಕಳನ್ನು ನೋಡಿಕೊಳ್ಳುವುದಾಗಿ ಭರವಸೆ ನೀಡುತ್ತೀರಿ. ಆದರೆ, ಹೀಗೆ ಅರ್ಧದಲ್ಲೇ ನಿಮ್ಮ ಪ್ರಾಣವನ್ನು ಕೊನೆಗೊಳಿಸಿದರೆ ಆ ಭರವಸೆಗಳ ಗತಿಯೇನು?” ಎಂದು ಶಾಸಕರು ಪ್ರಶ್ನಿಸಿದರು.
ಯಾರಾದರೂ ಆತ್ಮಹತ್ಯೆ ಮಾಡಿಕೊಂಡರೆ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಬಾರದು ಎಂದು ತಮ್ಮ ಭಾಷಣಗಳಲ್ಲಿ ಪದೇ ಪದೇ ಹೇಳುತ್ತಿರುವುದಾಗಿ ಶಿವಸೇನಾ ಶಾಸಕರು ತಿಳಿಸಿದರು. “ತಮ್ಮ ಮೃತದೇಹಗಳನ್ನು ಪ್ರಾಣಿಗಳು ತಿನ್ನಬಹುದು ಹಾಗೂ ತಮ್ಮ ದೇಹದ ಅವಶೇಷಗಳ ಗತಿಯೇನಾಗುತ್ತದೆ ಎಂಬುದನ್ನು ಅರಿತುಕೊಂಡಾಗ ಮಾತ್ರ ಜನರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಿಲ್ಲಿಸುತ್ತಾರೆ” ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.
ಸಂಜಯ್ ಗಾಯಕ್ವಾಡ್ ಅವರು ಈ ಹಿಂದೆಯೂ ಹಲವಾರು ವಿವಾದಗಳಲ್ಲಿ ಸಿಲುಕಿದ್ದರು. 2024ರಲ್ಲಿ ಹುಲಿಯ ಹಲ್ಲನ್ನು ಕುತ್ತಿಗೆಗೆ ಧರಿಸಿ, 1987ರಲ್ಲಿ ತಾನು ಹುಲಿಯನ್ನು ಬೇಟೆಯಾಡಿದ್ದಾಗಿ ಹೇಳಿಕೊಂಡಿದ್ದರು. 2025ರಲ್ಲಿ ಹಳಸಿದ ಆಹಾರ ಬಡಿಸಿದ್ದಾರೆಂದು ಮುಂಬೈನ ಶಾಸಕರ ಹಾಸ್ಟೆಲ್‌ನ ಕ್ಯಾಂಟೀನ್ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದರು. ಭಾರತದಲ್ಲಿ ಪ್ರತಿ ಗಂಟೆಗೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂದು ವರದಿಗಳು ತಿಳಿಸುತ್ತವೆ.




