ಸಕಾಲಕ್ಕೆ ಮಳೆಯಾಗದೆ ಬೆಳೆ ನಷ್ಟ ಉಂಟಾಗಿದ್ದು, ಸಾಲ ತೀರಿಸಲಾಗದೆ ಮನನೊಂದ ಇಬ್ಬರು ರೈತರು ಮೂರು ದಿನಗಳ ಅಂತರದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಡೂರು ತಾಲೂಕಿನಲ್ಲಿ ನಡೆದಿದೆ.
ಮೃತ ವ್ಯಕ್ತಿಗಳು ತಾಲೂಕಿನ ಭೈರಗೊಂಡನಹಳ್ಳಿ ಬಸವರಾಜ್ (44) ಹಾಗೂ ಕೊತ್ತಿಗೆರೆ ಗ್ರಾಮದ ಶಂಕರಯ್ಯ (60) ವಿಷ ಸೇವಿಸಿ ಜೀವ ಕಳೆದುಕೊಂಡಿದ್ದಾರೆ. ಮೃತ ಬಸವರಾಜ್ ಅವರು ತಮ್ಮ 3 ಎಕರೆ ಜಮೀನಿನ ಅಭಿವೃದ್ಧಿಗಾಗಿ ವಿವಿಧ ಖಾಸಗಿ ಫೈನಾನ್ಸ್ ಹಾಗೂ ಕೈಸಾಲ ಸೇರಿ ಒಟ್ಟು 4 ಲಕ್ಷದ 80 ಸಾವಿರ ರೂಪಾಯಿ ಸಾಲ ಮಾಡಿದ್ದರು. ಇತ್ತ ಶಂಕರಯ್ಯ ಅವರು ಸಹ ತಮ್ಮ 3 ಎಕರೆ ಜಮೀನಿನಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಖಾಸಗಿ ಫೈನಾನ್ಸ್ ಮತ್ತು ವಿವಿಧೆಡೆ 4 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದರು ಎನ್ನಲಾಗಿದೆ.
ಇದನ್ನೂ ಓದಿದ್ದೀರಾ?ಹಾಸನ | ರೈತರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಡ
ಈ ಬಾರಿ ಮಳೆರಾಯ ಸಂಪೂರ್ಣ ಕೈಕೊಟ್ಟಿದ್ದರಿಂದ ಕೃಷಿ ಬೆಳೆ ಸಂಪೂರ್ಣ ನಾಶವಾಗಿತ್ತು. ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಕಾರಣ ಇಬ್ಬರೂ ತೀವ್ರ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದರು. ಮೂರು ದಿನಗಳ ಅಂತರದಲ್ಲಿ ಈ ಇಬ್ಬರು ರೈತರು ಆತ್ಮಹತ್ಯೆಯ ಹಾದಿ ಹಿಡಿದಿದ್ದು, ಈ ಸಂಬಂಧ ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.




