ದೇಶದ ಪ್ರಜಾತಂತ್ರದ ಅಡಿಪಾಯವನ್ನು ದುರ್ಬಲಗೊಳಿಸುವ ಹಾಗೂ ಸಂವಿಧಾನದ ಆಶಯಗಳಿಗೆ ವಿರೋಧಿಯಾಗಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ತಕ್ಷಣ ತಡೆಹಿಡಿದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಸ್ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸಿ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ‘ಪ್ರಸ್ತುತ ಜಾರಿಯಲ್ಲಿರುವ ಎಸ್ಐಆರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆ ಕಂಡುಬರುತ್ತಿದ್ದು, ಲಕ್ಷಾಂತರ ಅರ್ಹಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗುವ ಅಪಾಯ ಎದುರಿಸುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು. “ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಕರಡು ಪಟ್ಟಿಯನ್ನು ಬಹಿರಂಗಪಡಿಸಿ, ಸಾರ್ವಜನಿಕರ ಸಮ್ಮುಖದಲ್ಲಿ ತಿದ್ದುಪಡಿ ಪ್ರಕ್ರಿಯೆ ನಡೆಸಬೇಕು. ಸಂಪೂರ್ಣ ಪರಿಷ್ಕರಣೆ ಪ್ರಕ್ರಿಯೆಗೆ ಕನಿಷ್ಠ ಒಂದು ವರ್ಷದ ಅವಧಿ ನಿಗದಿಪಡಿಸಿ, ಪರಿಶೀಲನೆ ಮತ್ತು ಆಕ್ಷೇಪಣೆ ಸಲ್ಲಿಕೆಗೆ ಸಮರ್ಪಕ ಸಮಯಾವಕಾಶ ಕಲ್ಪಿಸಬೇಕು”. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪ್ರತ್ಯೇಕವಾಗಿ ವೈಜ್ಞಾನಿಕ ಮತ್ತು ಜನಸ್ನೇಹಿ ಮಾದರಿಯಲ್ಲಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸಬೇಕು. ಗ್ರಾಮಸಭೆ ಮತ್ತು ವಾರ್ಡ್ ಸಭೆಗಳ ಮೂಲಕ ಮತದಾರರ ಪಟ್ಟಿಯನ್ನು ಪರಿಶೀಲಿಸಿ, ರಾಜ್ಯದ ಸಮಗ್ರ ಮತದಾರರ ದಾಖಲೆ ರೂಪಿಸಬೇಕು” ಎಂದು ಪ್ರತಿಭಾಟನಕಾರರು ಒತ್ತಾಯಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಯುವಕ ನೇಣು ಬಿಗಿದುಕೊಂಡು ಸಾವು
“ಪರಿಶೀಲನೆಗೊಂಡ ಮತದಾರರಿಗೆ ಸ್ಮಾರ್ಟ್ ಕಾರ್ಡ್ ವಿತರಿಸುವುದು, ದಾಖಲೆಗಳಿಲ್ಲದವರಿಗೆ ತಕ್ಷಣ ವಾಸ ದೃಢೀಕರಣ ಪತ್ರ ನೀಡುವುದು ಹಾಗೂ ಪ್ರತಿ ಗ್ರಾಮ ಪಂಚಾಯಿತಿ ಮತ್ತು ವಾರ್ಡ್ನಲ್ಲಿ “ಮತದಾರರ ನೆರವು ಕೇಂದ್ರ”ಗಳನ್ನು ತೆರೆಯಬೇಕು. ಜನರಿಗೆ ಅಗತ್ಯ ದಾಖಲೆಗಳನ್ನು ತ್ವರಿತವಾಗಿ ಒದಗಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ರಾಜ್ಯದ ಯಾವುದೇ ಅರ್ಹ ಮತದಾರ ತನ್ನ ಮೂಲಭೂತ ಪ್ರಜಾತಾಂತ್ರಿಕ ಹಕ್ಕನ್ನು ಕಳೆದುಕೊಳ್ಳದಂತೆ ಸರ್ಕಾರ ಜವಾಬ್ದಾರಿಯುತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.




