ಯುವಕನೊಬ್ಬ ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
ಮೃತನ ಸಾವಿನ ಹಿಂದೆ ಅನುಮಾನವಿದೆ ಎಂದು ತಾಯಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೃತ ಯುವಕನನ್ನು ಮೂರ್ತಿ ಎಲ್. (25) ಎಂದು ಗುರುತಿಸಲಾಗಿದೆ. ಆತ ಬಾರ್ ಬೆಂಡಿಂಗ್ ಕೆಲಸ ಮಾಡಿಕೊಂಡಿದ್ದನು.
ಮೂರ್ತಿಗೆ ಮನೆಯ ಸಮೀಪ ವಾಸಿಸುತ್ತಿದ್ದ ವಿವಾಹಿತ ಮಹಿಳೆಯೊಂದಿಗೆ ಕಳೆದ ಒಂದು ವರ್ಷದಿಂದ ಕಳ್ಳಸಂಬಂಧವಿತ್ತು ಎನ್ನಲಾಗಿದೆ. ಈ ಸಂಬಂಧದ ಕುರಿತು ತಾಯಿ ಹಾಗೂ ಸಂಬಂಧಿಕರು ಹಲವು ಬಾರಿ ಇಬ್ಬರಿಗೂ ಬುದ್ಧಿವಾದ ಹೇಳಿದ್ದರು. ಅಲ್ಲದೆ ಮಹಿಳಾ ಪೊಲೀಸ್ ಠಾಣೆಯಲ್ಲೂ ದೂರು ನೀಡಲಾಗಿದ್ದು, ಪೊಲೀಸರಿಂದಲೂ ಎಚ್ಚರಿಕೆ ನೀಡಲಾಗಿತ್ತು ಎಂದು ತಿಳಿದುಬಂದಿದೆ.
ಬುಧವಾರ ರಾತ್ರಿ ಮೂರ್ತಿ ಮನೆಯೊಳಗೆ ಚಿಲಕ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಳಿಕ ಮನೆಗೆ ಬಂದ ತಾಯಿ ಗುರಮ್ಮ ಬಾಗಿಲಿನ ಸಂದಿನಿಂದ ಇಣುಕಿ ನೋಡಿದಾಗ ಮೂರ್ತಿಯ ಕಾಲುಗಳು ನೇತಾಡುತ್ತಿರುವುದು ಕಂಡುಬಂದಿದೆ. ತಕ್ಷಣ ಅಕ್ಕನ ಮಕ್ಕಳ ಸಹಾಯದಿಂದ ಬಾಗಿಲು ಒಡೆದು ಸೀರೆಯನ್ನು ಕತ್ತರಿಸಿ ಆಸ್ಪತ್ರೆಗೆ ಕರೆದೊಯ್ದರೂ, ಆತ ಆಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ | ಜೂಜಾಟ:12 ಜನರನ್ನು ಬಂಧಿಸಿದ ಪೊಲೀಸರು
ಮಗನ ಸಾವಿನ ನಿಖರ ಕಾರಣ ತಿಳಿಯದ ಹಿನ್ನೆಲೆಯಲ್ಲಿ ತಾಯಿ ಗುರಮ್ಮ ನೀಡಿದ ದೂರಿನ ಮೇರೆಗೆ ನಗರ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.




