ಮೈಸೂರಿನ ವಿಜಯನಗರದ ವಿ.ಕೆ. ಪಬ್ಲಿಕ್ ಸ್ಕೂಲ್ ನಲ್ಲಿ ಅದಮ್ಯ ರಂಗಶಾಲೆಯ ವತಿಯಿಂದ ಆಯೋಜಿಸಿರುವ ‘ಬಾಲಂಗೋಚಿ’ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದ ಜಾನಪದ ವಿದ್ವಾಂಸ ಡಾ. ಪಿ.ಕೆ. ರಾಜಶೇಖರ್, ‘ಮಕ್ಕಳಲ್ಲಿ ಕಲಿಯುವ ಆಸಕ್ತಿ ಅಪಾರವಾಗಿರುತ್ತದೆ. ಕುತೂಹಲಕಾರಿ ಮನಸ್ಸೂ ಇರುತ್ತದೆ. ಆದ್ದರಿಂದ, ಯಾವುದೇ ವಿಷಯ ಕುರಿತು ಮಕ್ಕಳಿಗೆ ರಂಜನೀಯವಾಗಿ ಕಲಿಸಿದರೆ, ಅವರು ಬಹುಬೇಗನೆ ಗ್ರಹಿಸಿ ಕಲಿಯುತ್ತಾರೆ’ ಎಂದು ಅಭಿಪ್ರಾಯಪಟ್ಟರು.
“ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡುವ ಜೊತೆಗೆ ಉತ್ತಮ ಗುಣಗಳನ್ನು ಕಲಿಯಬೇಕು. ಹೆತ್ತವರಿಗೆ, ಗುರುಗಳಿಗೆ ಗೌರವ ಕೊಡಬೇಕು. ಅವರ ಮಾತುಗಳನ್ನು ಕೇಳಬೇಕು. ನೆರೆಹೊರೆಯವರೊಂದಿಗೆ, ಸ್ನೇಹಿತರೊಂದಿಗೆ ಪ್ರೀತಿ, ವಿಶ್ವಾಸ ಭಾವ ಬೆಳೆಸಿಕೊಳ್ಳಬೇಕು. ಮಕ್ಕಳು ಚಿಕ್ಕವರಾಗಿದ್ದಾಗಲೇ ಎಲ್ಲರ ಜೊತೆಗೆ ಹೊಂದಿಕೊಂಡು ಹೋಗುವ ಸೌಹಾರ್ದ ಗುಣ ಬೆಳೆಸಿಕೊಂಡರೆ, ಉತ್ತಮ ನಾಗರಿಕರಾಗಬಹುದು. ಸಮಾಜಕ್ಕೆ ಸದಾ ಒಳ್ಳೆಯದನ್ನು ಮಾಡಬಹುದು. ಅಗ ಸಮಾಜದ ಉದ್ದಾರ ಸಾಧ್ಯವಾಗುತ್ತದೆ. ಆದ್ದರಿಂದ, ಸೇವಾಗುಣ ಬೆಳೆಸಿಕೊಳ್ಳುವಂತೆ” ಮಕ್ಕಳಿಗೆ ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಮೈಸೂರು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಅಧ್ಯಕ್ಷರಾದ ಡಾ. ಕೆ.ಬಿ. ಲಿಂಗರಾಜು ಮಾತನಾಡಿ, “ಮಕ್ಕಳ ಮನೋವಿಕಾಸಕ್ಕೆ ಬೇಸಿಗೆ ಶಿಬಿರಗಳು ಸಹಕಾರಿಯಾಗಿವೆ. ಅವರಲ್ಲಿನ ಪ್ರತಿಭೆಯನ್ನು ಅಭಿವ್ಯಕ್ತಿಸಲು ವೇದಿಕೆಯ ಕಲ್ಪಿಸುತ್ತವೆ. ಇಂತಹ ಶಿಬಿರಗಳು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲಾ ಮಕ್ಕಳಿಗೂ ಲಭಿಸಬೇಕು. ಇದಕ್ಕೆ ತಾವು ಕೂಡ ಕೈಜೋಡಿಸುವುದಾಗಿ ಭರವಸೆ” ನೀಡಿದರು.
ವಿ.ಕೆ. ಪಬ್ಲಿಕ್ ಸ್ಕೂಲ್ ನ ಕಾರ್ಯದರ್ಶಿ ರವಿಕುಮಾರ್ ಬೆಕ್ಯಾ ಮಾತನಾಡಿ, “ಪಠ್ಯೇತರ ವಿಷಯಗಳಾದ ಹಾಡು, ನಾಟಕ, ಕತೆ, ನೃತ್ಯ, ಸಂಗೀತ ಮೊದಲಾದ ವಿಷಯಗಳನ್ನು ಮಕ್ಕಳು ಕಲಿತು ಪ್ರಕಟಿಸುವುದರಿಂದ ಆತ್ಮವಿಶ್ವಾಸ ಬೆಳೆಯುತ್ತದೆ. ಧೈರ್ಯದ ಮನೋಭಾವ ಮೈಗೂಡುತ್ತದೆ. ಜೀವನವನ್ನು ಆನಂದದಾಯಕವಾಗಿ ಕಳೆಯಲು ಸಾಧ್ಯವಾಗುತ್ತದೆ. ಮನಸ್ಸಿನ ವಿಕಾಸದ ಜೊತೆಗೆ ತಿಳಿವಳಿಕೆ ಹೆಚ್ಚುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಕೊಡಗು | ‘ಶ್ರೀಮತಿ ವಿಜಯಾ ವಿಷ್ಣುಭಟ್ ದತ್ತಿ ಪ್ರಶಸ್ತಿ’ ಸ್ವೀಕರಿಸಿದ ಲೇಖಕಿ ಪ್ರತಿಮಾ ಹರೀಶ್ ರೈ
ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ, ಗೌರವ ಕಾರ್ಯದರ್ಶಿ ಚಂದ್ರು ಮಂಡ್ಯ, ಸಂಪನ್ಮೂಲ ವ್ಯಕ್ತಿಗಳಾದ ವಿನೋದ್ ಮೈಸೂರು, ಸುಪ್ರೀತ್ ಭಾರಧ್ವಜ್, ಅಗಸ್ತ್ಯ ಇಂಟರ್ ನ್ಯಾಷನಲ್ ಫೌಂಡೇಷನ್ನಿನ ಆರ್.ಪಿ. ಸತೀಶ್, ಯುವಕವಿ ಜಿ. ರವೀಂದ್ರ ಕುಮಾರ್ ಕಾರ್ಯಕ್ರಮದಲ್ಲಿ ಇದ್ದರು.




