ಶಿಡ್ಲಘಟ್ಟ ರಾಷ್ಟ್ರೀಯ ಹೆದ್ದಾರಿಯ ಕೋನಪಲ್ಲಿ ಗೇಟ್ ಬಳಿ ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು,ಈ ದುರಂತದಲ್ಲಿ 27 ವರ್ಷದ ಬಟ್ಟೆ ವ್ಯಾಪಾರಿ ಮಹಿಳೆ ಕೆ.ವಿ.ಭಾಗ್ಯಲಕ್ಷ್ಮಿ ಅವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಚಿಂತಾಮಣಿ ನಗರದ ಕನಂಪಲ್ಲಿ ಬಡಾವಣೆಯ ನಿವಾಸಿಯಾದ ಭಾಗ್ಯಲಕ್ಷ್ಮಿ ಅವರು ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದರು.ಎಂದಿನಂತೆ ವ್ಯಾಪಾರಕ್ಕಾಗಿ ಅಂಬಾಜಿದುರ್ಗ ಹೋಬಳಿಯ ಕೋನಪಲ್ಲಿ ಗ್ರಾಮಕ್ಕೆ ಹೋಗಿ ತಮ್ಮ ವ್ಯಾಪಾರವನ್ನು ಮುಗಿಸಿಕೊಂಡು ಟಿವಿಎಸ್ ದ್ವಿಚಕ್ರ ವಾಹನದಲ್ಲಿ ಕೋನಪಲ್ಲಿ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಚಿಂತಾಮಣಿಯಿಂದ ಶಿಡ್ಲಘಟ್ಟದ ಕಡೆಗೆ ವೇಗವಾಗಿ ಚಲಿಸುತ್ತಿದ್ದ ಲಾರಿಯೊಂದು ಇವರ ದ್ವಿಚಕ್ರ ವಾಹನಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಭಾಗ್ಯಲಕ್ಷ್ಮಿ ಅವರು ರಸ್ತೆಗೆ ಉರುಳಿ ಬಿದ್ದಿದ್ದು,ಚಲಿಸುತ್ತಿದ್ದ ಲಾರಿಯ ಹಿಂಬಾಗದ ಚಕ್ರ ಅವರ ತಲೆಯ ಮೇಲೆ ಹರಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಇದನ್ನು ಓದಿದ್ದೀರಾ..?ಕೋಲಾರ | ನೀಟ್ ಸೋರಿಕೆ ಪ್ರಕರಣ; ಕೇಂದ್ರ ಸಚಿವ ಪ್ರಧಾನ್ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ
ವಿಷಯ ತಿಳಿಯುತ್ತಿದ್ದಂತೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಅಪಘಾತಕ್ಕೆ ಕಾರಣವಾದ ಲಾರಿ ಮತ್ತು ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದ್ದು,ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ.




