ಚಿಂತಾಮಣಿ ತಾಲೂಕಿನ ಕೆಂಚನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು,ಹಲವು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಅಂತರ ಜಿಲ್ಲಾ ಮನೆಗಳ್ಳನೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಚೇಳೂರು ತಾಲೂಕಿನ ಕದರೇನಹಳ್ಳಿ ಗ್ರಾಮದ ನಿವಾಸಿ ಪ್ರಶಾಂತ್ ಕೆ.ಆರ್ (26) ಎಂದು ಗುರುತಿಸಲಾಗಿದೆ. ಈತ ವೃತ್ತಿಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದನು.ಜುಲೈ 9ರಂದು ಸಂಜೆ 7 ಗಂಟೆ ಸುಮಾರಿಗೆ ಚಿಂತಾಮಣಿ ನಗರದ ಬಂಗಾರದ ಅಂಗಡಿಯೊಂದರ ಮುಂಭಾಗದಲ್ಲಿ ಈತ ಅನುಮಾನಾಸ್ಪದವಾಗಿ ಓಡಾಡುತ್ತಿದ್ದನು.ಇದನ್ನು ಗಮನಿಸಿದ ಕೆಂಚಾರಹಳ್ಳಿ ಠಾಣೆಯ ಹೆಡ್ ಕಾನ್‌ಸ್ಟೇಬಲ್‌ಗಳಾದ ವಿಶ್ವನಾಥ್,ವಿಜಯ್ ಕುಮಾರ್ ಹಾಗೂ ಕಾನ್‌ಸ್ಟೇಬಲ್ ನಾರಾಯಣ ಕೆ.ಆರ್ ತಕ್ಷಣವೇ ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ಪೊಲೀಸ್ ವಿಚಾರಣೆ ವೇಳೆ ಆರೋಪಿ ತಾನು ಮಾಡಿದ ಕಳ್ಳತನದ ಕೃತ್ಯಗಳನ್ನು ಒಪ್ಪಿಕೊಂಡಿದ್ದಾನೆ. ಸುಮಾರು ಒಂದು ವರ್ಷದ ಹಿಂದೆ ಕೊನೇಪಲ್ಲಿ ಗ್ರಾಮದ ಲಕ್ಷ್ಮೀಪತಿ ಎಂಬುವರ ಮನೆಯಲ್ಲಿ 66 ಗ್ರಾಂ ಚಿನ್ನದ ವಡವೆಗಳನ್ನು ಕದ್ದಿರುವುದಾಗಿ ತಿಳಿಸಿದ್ದಾನೆ. ಸುಮಾರು ಐದು ತಿಂಗಳ ಹಿಂದೆ ಅನಪಲ್ಲಿ ಗ್ರಾಮದ ವಿನೋದಮ್ಮ ಎಂಬುವರ ಮನೆಯಲ್ಲಿ 20 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ಬಾಯಿಬಿಟ್ಟಿದ್ದಾನೆ. ಪೊಲೀಸರು ಆರೋಪಿಯಿಂದ ಕದ್ದ ಮಾಲನ್ನು ವಶಪಡಿಸಿಕೊಂಡು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧಿತ ಆರೋಪಿ ಪ್ರಶಾಂತ್ ಕೇವಲ ಚಿಕ್ಕಬಳ್ಳಾಪುರ ಜಿಲ್ಲೆಯಷ್ಟೇ ಅಲ್ಲದೆ,ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಬೆಂಗಳೂರು ನಗರದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವ ಅಂತರ ಜಿಲ್ಲಾ ಮನೆಗಳ್ಳನಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ..? ಮುಳಬಾಗಿಲು | ಪ್ರಯತ್ನ ಮತ್ತು ನಿರಂತರ ಅಭ್ಯಾಸವೇ ಯಶಸ್ಸಿನ ಮಂತ್ರ: ಗೋಪಿನಾಥ್ ಕರವಿ
ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕುಶಾಲ್ ಚೌಕ್ಸಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಗನ್ನಾಥ್ ರೈ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.ಕೆಂಚಾರಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಜಿ.ಸಿ. ನಾರಾಯಣಸ್ವಾಮಿ, ಸಬ್ ಇನ್ಸ್‌ಪೆಕ್ಟರ್ ಶ್ಯಾಮಲಾ,ಪ್ರೊಫೆಷನರಿ ಪಿಎಸ್ಐ ಶರಣಗೌಡ ಎಸ್. ಮೂಲಿಮನಿ ಮತ್ತು ಸಿಬ್ಬಂದಿ ಒಳಗೊಂಡ ಯಶಸ್ವಿ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಅಭಿನಂದಿಸಿದ್ದಾರೆ




