ತಾಲ್ಲೂಕಿನ ತಿಮ್ಮರಾವುತನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಮ ಬೆಳಕು ಸಂಸ್ಥೆ ವತಿಯಿಂದ ಆಯೋಜಿಸಿದ್ದ ಇಂಗ್ಲಿಷ್–ಕನ್ನಡ ನಿಘಂಟು (ಡಿಕ್ಷನರಿ) ವಿತರಣಾ ಕಾರ್ಯಕ್ರಮ ನಡೆಯಿತು. ಪ್ರಯತ್ನ ಮತ್ತು ನಿರಂತರ ಅಭ್ಯಾಸ ಇದ್ದರೆ ಸಾಧಿಸಲಾಗದಂತಹದ್ದು ಯಾವುದೂ ಇಲ್ಲ. ಇಂಗ್ಲಿಷ್ ಭಾಷೆಯ ಕಲಿಕೆಯೂ ಸುಲಭವಾಗಿದ್ದು, ಪ್ರತಿದಿನ ಸತತವಾಗಿ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕವಿ, ಚಿಂತಕ ಹಾಗೂ ಗ್ರಾಮ ಬೆಳಕು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗೋಪಿನಾಥ್ ಕರವಿ ಹೇಳಿದರು.
ಸಮಾಜದಿಂದ ಪಡೆದಿರುವ ಅವಕಾಶಗಳು ಮತ್ತು ಸೌಲಭ್ಯಗಳಿಗೆ ಪ್ರತಿಯಾಗಿ ಸಮಾಜಕ್ಕೆ ಇನ್ನಷ್ಟು ಕೊಡುಗೆ ನೀಡುವ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಜ್ಞಾನ ಮತ್ತು ಸೇವಾ ಮನೋಭಾವದಲ್ಲಿ ಶ್ರೀಮಂತರಾಗಿ, ತಾವು ಕಲಿತದ್ದನ್ನು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಜಾಗತಿಕ ಸಂಪರ್ಕ ಭಾಷೆಯಾದ ಇಂಗ್ಲಿಷ್‌ನಲ್ಲಿ ಪ್ರಾವೀಣ್ಯತೆ ಗಳಿಸಲು ಪ್ರತಿದಿನ ಕನಿಷ್ಠ ಐದು ಹೊಸ ಪದಗಳನ್ನು ಕಲಿತು ಅವುಗಳನ್ನು ಬಳಕೆಗೆ ತರುವ ಅಭ್ಯಾಸ ರೂಢಿಸಿಕೊಳ್ಳಬೇಕು. ನಿರಂತರ ಅಭ್ಯಾಸದಿಂದ ಇಂಗ್ಲಿಷ್ ಭಾಷೆಯಲ್ಲಿ ಉತ್ತಮ ಹಿಡಿತ ಸಾಧಿಸಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯ ಮಂಜುನಾಥ್, ಕರವಿರೆಡ್ಡಿಹಳ್ಳಿಯಲ್ಲಿ ಜನಿಸಿ ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಗೋಪಿನಾಥ್ ಕರವಿ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ತಾವು ಹುಟ್ಟಿದ ಊರಿನ ಹೆಸರನ್ನು ತಮ್ಮ ಹೆಸರಿನೊಂದಿಗೆ ಸೇರಿಸಿಕೊಂಡಿರುವುದು ತಮ್ಮ ನೆಲದ ಮೇಲಿನ ಅಭಿಮಾನವನ್ನು ಪ್ರತಿಬಿಂಬಿಸುತ್ತದೆ. ಅದೇ ರೀತಿ ಗ್ರಾಮ ಬೆಳಕು ಸಂಸ್ಥೆಯ ಮೂಲಕ ಶಿಕ್ಷಣ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ..? ಚಿಂತಾಮಣಿ | ಓವರ್ ಟೇಕ್ ಮಾಡಲು ಹೋಗಿ ಮರಕ್ಕೆ ಗುದ್ದಿದ ಪೆಟ್ರೋಲ್ ತುಂಬಿದ ಲಾರಿ.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಮಂಜುಕನ್ನಿಕಾ, ರೋಟರಿ ಲೇಕ್‌ಸೈಡ್ ಅಧ್ಯಕ್ಷ ರವಿ, ಕಾರ್ಯದರ್ಶಿ ಶಶಿಕುಮಾರ್, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮುಳಬಾಗಿಲು | ಪ್ರಯತ್ನ ಮತ್ತು ನಿರಂತರ ಅಭ್ಯಾಸವೇ ಯಶಸ್ಸಿನ ಮಂತ್ರ: ಗೋಪಿನಾಥ್ ಕರವಿ
ಪೋಸ್ಟ್ ಹಂಚಿಕೊಳ್ಳಿ:




