ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿಯ ಚಿತ್ರದುರ್ಗದ ಹಿರಿಯೂರು ತಾಲೂಕು ಸಮಿತಿ ವತಿಯಿಂದ ನವೆಂಬರ್ 16, 2026ರಂದು ಹಿರಿಯೂರು ನಗರದ ಅಂಬೇಡ್ಕರ್ ಸರ್ಕಲ್‌ನ 5ನೇ ವಾರ್ಡ್, ಕೋರ್ಟ್ ಪಕ್ಕದ ನಿವಾಸಿಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
“ಕೋರ್ಟ್ ಪಕ್ಕದ ಪ್ರದೇಶದ ನಿವಾಸಿಗಳಿಗೆ ನಗರಸಭೆಯಿಂದ ಎರಡು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಆದರೆ, ನಿಗದಿತ ಸಮಯದಲ್ಲಿ ನೀರು ಬಾರದೆ ಇರುವುದರಿಂದ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಸಂಬಂಧಪಟ್ಟ ನಗರಸಭೆ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.
“ನೀರು ಪ್ರತಿಯೊಬ್ಬರಿಗೂ ಅತ್ಯಗತ್ಯ. ಬೆಳಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವವರೆಗೂ ದೈನಂದಿನ ಚಟುವಟಿಕೆಗಳಿಗೆ ನೀರು ಬೇಕೇಬೇಕು. ಇಂತಹ ಅಗತ್ಯ ಸೇವೆಯಲ್ಲಿ ಸಮರ್ಪಕ ಪೂರೈಕೆಗೆ ಅಡ್ಡಿಯಾಗುತ್ತಿರುವುದು ನಿವಾಸಿಗಳಿಗೆ ಸಂಕಷ್ಟ ತಂದಿದೆ. ವಾಣಿವಿಲಾಸ ಸಾಗರದಲ್ಲಿ ಸಾಕಷ್ಟು ನೀರಿನ ಲಭ್ಯತೆಯಿದ್ದರೂ, ಅದರ ಸಮೀಪದಲ್ಲಿರುವ ಹಿರಿಯೂರು ನಗರದಲ್ಲಿ ನೀರಿನ ಸಮಸ್ಯೆ ಎದುರಾಗಿರುವುದು ವಿಪರ್ಯಾಸ” ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.
“ನಗರಸಭೆಯ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ವಾಟರ್‌ಮನ್‌ಗಳ ಕರ್ತವ್ಯಲೋಪದಿಂದ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಅಲ್ಲದೆ, ಕೆಲವರು ನಗರಸಭೆಗೆ ನೀರಿನ ಕಂದಾಯ ಪಾವತಿಸದೆ ಅಕ್ರಮವಾಗಿ ನಳದ ಸಂಪರ್ಕ ಪಡೆದುಕೊಂಡಿದ್ದಾರೆ” ಎಂಬ ಆರೋಪವೂ ಕೇಳಿಬಂದಿದೆ.
“ಪ್ರಸ್ತುತ ವಾರ್ಡ್‌ನಲ್ಲಿ ಸಂಜೆ ವೇಳೆಯಲ್ಲಿ ನೀರು ಬಿಡಲಾಗುತ್ತಿದೆ. ಆದರೆ, ಸುತ್ತಮುತ್ತಲಿನ ಜಮೀನುಗಳಲ್ಲಿ ಗಿಡಗಂಟೆಗಳು ಹೆಚ್ಚಾಗಿರುವುದರಿಂದ ಸೊಳ್ಳೆಗಳು ಹಾಗೂ ಹಾವುಗಳಂತಹ ವಿಷಜಂತುಗಳ ಅಪಾಯವಿದೆ. ಹೀಗಾಗಿ ಸಂಜೆ ಬದಲಿಗೆ ಬೆಳಗಿನ ಜಾವ ನೀರು ಪೂರೈಸುವುದು ಸೂಕ್ತ” ಎಂದು ನಿವಾಸಿಗಳು ಒತ್ತಾಯಿಸಿದರು.
“ಇತರ ವಾರ್ಡ್‌ಗಳಲ್ಲಿ ಬೆಳಗ್ಗೆ 6 ಗಂಟೆಗೆ ನೀರು ಬಿಡಲಾಗುತ್ತಿದ್ದರೂ, ನಮ್ಮ ವಾರ್ಡ್‌ನಲ್ಲಿ ಹಲವು ವರ್ಷಗಳಿಂದ ಸಂಜೆ ವೇಳೆಯೇ ನೀರು ಪೂರೈಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಗಂಟೆಗಟ್ಟಲೆ ಕಾಯ್ದರೂ ನೀರು ಬರುತ್ತಿಲ್ಲ. ಅಧಿಕಾರಿಗಳು ಈ ಪ್ರದೇಶದ ನಿವಾಸಿಗಳ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಹಿಂದುಳಿದವರು, ಅಲ್ಪಸಂಖ್ಯಾತರು, ಕೆಳಮಧ್ಯಮ ವರ್ಗದವರು ಹಾಗೂ ಬಡವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಈ ಪ್ರದೇಶಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು” ಎಂದು ಆಗ್ರಹಿಸಿದರು.
ನೀರಿನ ಪೂರೈಕೆಯ ಸಮಯವನ್ನು ಬದಲಾಯಿಸಿ ಬೆಳಗಿನ ವೇಳೆಯಲ್ಲಿ ಸಾಕಷ್ಟು ಪ್ರಮಾಣದ ನೀರು ಬಿಡುವಂತೆ ನಗರಸಭೆಯ ವ್ಯವಸ್ಥಾಪಕರಾದ ನಿರಂಜನಿ ಎಚ್. ಅವರಿಗೆ ಸಮಿತಿಯ ಪದಾಧಿಕಾರಿಗಳು ಹಾಗೂ ನಿವಾಸಿಗಳು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ರಾಮಚಂದ್ರ ಕೆ., ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಆರ್., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲೇಶ್, ಉಪಾಧ್ಯಕ್ಷ ಕೆಂಚಪ್ಪ, ಹಿರಿಯೂರು ತಾಲೂಕು ಅಧ್ಯಕ್ಷ ಓಂಕಾರಮೂರ್ತಿ ಕೆ. ದೊಡ್ಡಘಟ್ಟ, ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಕಾರ್ಯಾಧ್ಯಕ್ಷ ಖಾಲಿದ್, ಗೌರವಾಧ್ಯಕ್ಷ ರಫೀಕ್ ಉಲ್ಲಾ, ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಫ್ರುಲ್ಲಾ, ತಾಲೂಕು ಉಪಾಧ್ಯಕ್ಷ ಫಕ್ರುದ್ದೀನ್, ತಾಲೂಕು ಕಾರ್ಯದರ್ಶಿ ಜಬಿವುಲ್ಲಾ ಹಾಗೂ ಜಿಲಾನ್ ಉಪಸ್ಥಿತರಿದ್ದರು.
ಸ್ಥಳೀಯ ನಿವಾಸಿಗಳಾದ ರಾಘವೇಂದ್ರ, ವಿ. ಸರಸ್ವತಿ, ಓಬಳೇಶ್, ಲಿಂಗರಾಜ್, ಲಕ್ಷ್ಮೀದೇವಿ, ಕಲ್ಯಾಣಮ್ಮ, ಕೆಂಚಮ್ಮ, ಅಲಿಮಾಭಿ ಬೇಬಿ, ಹೇಮಲತಾ, ಮಹಾದೇವಿ, ದಾದಾಪೀರ್, ಕೃಷ್ಣನಾಯ್ಕ, ತಿಮ್ಮರಾಜ್, ಟಿ.ಕೆ. ನಯಾಜ್ ಸೇರಿದಂತೆ ಹಲವು ನಿವಾಸಿಗಳು, ಸಾರ್ವಜನಿಕರು ಹಾಗೂ ಪತ್ರಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.



