ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯಾವುದೇ ನಿರ್ದಿಷ್ಟ ಕ್ಷೇತ್ರವನ್ನು ಪರಿಶಿಷ್ಟ ಜಾತಿ (SC) ಅಥವಾ ಪರಿಶಿಷ್ಟ ಪಂಗಡಕ್ಕೆ (ST) ಮೀಸಲಿಡಬೇಕೆಂದು ಕೇಳುವ ಹಕ್ಕು ಯಾವುದೇ ಮತದಾರರಿಗಾಗಲಿ ಅಥವಾ ಅಭ್ಯರ್ಥಿಗಾಗಲಿ ಇರುವುದಿಲ್ಲ. ಮೀಸಲು ಕ್ಷೇತ್ರಗಳ ಸರದಿ ಬದಲಾವಣೆಯ ವಿಧಾನ ಮತ್ತು ಕಾಲಮಿತಿಯನ್ನು ನಿರ್ಧರಿಸುವ ಸಂಪೂರ್ಣ ವಿವೇಚನಾಧಿಕಾರ ರಾಜ್ಯ ಸರ್ಕಾರಕ್ಕಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಮಹಾರಾಷ್ಟ್ರದ ಜಿಲ್ಲಾ ಪರಿಷತ್ ಮತ್ತು ಪಂಚಾಯತ್ ಸಮಿತಿ ಚುನಾವಣೆಗಳಲ್ಲಿ ಮೀಸಲಾತಿ ಸರದಿ ಪದ್ಧತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಕರಣದ ಹಿನ್ನೆಲೆ ಏನು?
ಮಹಾರಾಷ್ಟ್ರ ಸರ್ಕಾರವು 1996ರ ಹಳೆಯ ನಿಯಮಗಳನ್ನು ಬದಲಾಯಿಸಿ, ಹೊಸದಾಗಿ ‘ಮಹಾರಾಷ್ಟ್ರ ಜಿಲ್ಲಾ ಪರಿಷತ್ ಮತ್ತು ಪಂಚಾಯತ್ ಸಮಿತಿಗಳ (ಸ್ಥಾನಗಳ ಮೀಸಲಾತಿ ವಿಧಾನ ಮತ್ತು ಸರದಿ) ನಿಯಮಗಳು, 2025’ ಅನ್ನು ಜಾರಿಗೆ ತಂದಿತ್ತು. ಇದರ ನಿಯಮ 12ರ ಪ್ರಕಾರ, 2025ರ ತಿದ್ದುಪಡಿಯ ನಂತರ ನಡೆಯುವ ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಮೀಸಲಾತಿ ಸರದಿಯ ‘ಮೊದಲ ಚುನಾವಣೆ’ ಎಂದು ಪರಿಗಣಿಸಿ ಹೊಸದಾಗಿ ಸರದಿ ಪ್ರಕ್ರಿಯೆಯನ್ನು ಆರಂಭಿಸಲು ನಿರ್ಧರಿಸಲಾಗಿತ್ತು.
ಇದನ್ನು ಪ್ರಶ್ನಿಸಿ ಸೌ. ರೂಪಾಲಿ ಇಂದ್ರಭೂಷಣ್ ಸೋಂಡೆ ಎಂಬುವವರು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ ಮೆಟ್ಟಿಲೇರಿದ್ದರು. ಆದರೆ, 2025ರ ಸೆಪ್ಟೆಂಬರ್‌ನಲ್ಲಿ ಹೈಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿತ್ತು. ರಾಜ್ಯ ಸರ್ಕಾರವು ಮೊದಲ ಬಾರಿಗೆ ಕ್ಷೇತ್ರಗಳ ಭೌಗೋಳಿಕ ಗಡಿಗಳನ್ನು ಬದಲಾಯಿಸಿರುವುದರಿಂದ ಮತ್ತು ಜನಸಂಖ್ಯೆಯ ಅನುಪಾತದಲ್ಲಿ ಬದಲಾವಣೆಯಾಗಿರುವುದರಿಂದ ಮೀಸಲಾತಿ ಬದಲಾಗುವುದು ಸಹಜ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಪಿನ್ ಸಾಂಘಿ, “ನಿಯಮ 12 ಮೀಸಲಾತಿ ಸರದಿಯ ಮೂಲ ಉದ್ದೇಶವನ್ನೇ ಭ್ರಮೆಯನ್ನಾಗಿಸಿದೆ. ನನ್ನ ಕಕ್ಷಿದಾರರು ಪ್ರತಿನಿಧಿಸುವ ಕ್ಷೇತ್ರದಲ್ಲಿ ಎಸ್‌ಸಿ/ಎಸ್‌ಟಿ ಜನಸಂಖ್ಯೆ ಕಡಿಮೆ ಇರುವುದರಿಂದ ಇದುವರೆಗೂ ಆ ಕ್ಷೇತ್ರಕ್ಕೆ ಮೀಸಲಾತಿ ಸಿಕ್ಕಿಲ್ಲ. ಈಗ ಸರದಿಯ ಪ್ರಕಾರ ಆ ಕ್ಷೇತ್ರಕ್ಕೆ ಮೀಸಲಾತಿ ಸಿಗುವ ಸಮಯ ಬಂದಾಗ, ಸರ್ಕಾರವು ಪ್ರಕ್ರಿಯೆಯನ್ನು ಮೊದಲಿನಿಂದ ಆರಂಭಿಸುವುದಾಗಿ ಹೇಳುತ್ತಿದೆ. ಪದೇ ಪದೇ ಕಟ್-ಆಫ್ ದಿನಾಂಕವನ್ನು ಬದಲಾಯಿಸಿದರೆ ಕಡಿಮೆ ಜನಸಂಖ್ಯೆ ಇರುವ ಕ್ಷೇತ್ರಗಳಿಗೆ ಎಂದಿಗೂ ಮೀಸಲಾತಿ ಸಿಗುವುದಿಲ್ಲ. ಇದು ಸಂವಿಧಾನದ 14ನೇ ವಿಧಿಯ (ಸಮಾನತೆಯ ಹಕ್ಕು) ಉಲ್ಲಂಘನೆಯಾಗಿದೆ” ಎಂದು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ, “ನಿಮ್ಮ ಕ್ಷೇತ್ರವನ್ನು ಮೀಸಲಿಡಲೇಬೇಕು ಎಂಬ ಹಕ್ಕು ನಿಮಗಿದೆಯೇ? ಖಂಡಿತ ಇಲ್ಲ. ಕಟ್-ಆಫ್ ದಿನಾಂಕವನ್ನು ಬದಲಾಯಿಸುವ ಅಧಿಕಾರ ಸರ್ಕಾರಕ್ಕೆ ಯಾವಾಗಲೂ ಇರುತ್ತದೆ” ಎಂದು ಮಾರ್ಮಿಕವಾಗಿ ನುಡಿದರು.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ಸಂವಿಧಾನ (ವಿಧಿ 243) ಮತ್ತು ಚುನಾವಣಾ ನಿಯಮಗಳು ಸ್ಥಳೀಯ ಸಂಸ್ಥೆಯ ಒಟ್ಟು ಜನಸಂಖ್ಯೆಯಲ್ಲಿ ಎಸ್‌ಸಿ/ಎಸ್‌ಟಿ ಜನಸಂಖ್ಯೆಯ ಅನುಪಾತಕ್ಕೆ ತಕ್ಕಂತೆ ಮೀಸಲಾತಿ ನೀಡುವುದನ್ನು ಮತ್ತು ಜನಸಂಖ್ಯೆಯ ಇಳಿಕೆ ಕ್ರಮದಲ್ಲಿ ಸರದಿ ಪದ್ಧತಿ ಅನುಸರಿಸುವುದನ್ನು ಕಡ್ಡಾಯಗೊಳಿಸಿವೆ.
ಮೀಸಲಾತಿ ಮತ್ತು ಸರದಿಯನ್ನು ಯಾವ ರೀತಿಯಲ್ಲಿ ಹಾಗೂ ಯಾವ ಕಾಲಮಿತಿಯಲ್ಲಿ ಜಾರಿಗೊಳಿಸಬೇಕು ಎಂಬುದು ಸಂಪೂರ್ಣವಾಗಿ ರಾಜ್ಯ ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ.
2025ರ ತಿದ್ದುಪಡಿಯ ನಂತರದ ಚುನಾವಣೆಯನ್ನು ಸರದಿಯ ಆರಂಭಿಕ ಹಂತವಾಗಿ ನಿಗದಿಪಡಿಸಿರುವ ನಿಯಮ 12, ಮೀಸಲಾತಿ ಅಥವಾ ಸರದಿ ತತ್ವಗಳಿಗೆ ವಿರುದ್ಧವಾಗಿಲ್ಲ.
ಇನ್ನು ಅರ್ಜಿಯನ್ನು ವಜಾಗೊಳಿಸಿದ ಪೀಠವು, ಮೀಸಲಾತಿ ಸರದಿ ಯೋಜನೆಯನ್ನು ಮರುಪರಿಶೀಲಿಸುವಂತೆ ಅರ್ಜಿದಾರರು ಕಾನೂನಿನ ಪ್ರಕಾರ ಸರ್ಕಾರಕ್ಕೆ ಮನವಿ ಸಲ್ಲಿಸಲು ಈ ಆದೇಶ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಚುನಾವಣಾ ಕ್ಷೇತ್ರಗಳ ಮೀಸಲಾತಿ ಸರದಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕಠಿಣ ನಿಲುವು ತಳೆಯುತ್ತಿರುವುದು ಇದೇ ಮೊದಲೇನಲ್ಲ. ಕಳೆದ ನವೆಂಬರ್ 4ರಂದು ಸಹ, ಹಲವು ದಶಕಗಳಿಂದ ಕೆಲವು ವಿಧಾನಸಭಾ ಕ್ಷೇತ್ರಗಳನ್ನು ಯಾವುದೇ ಸರದಿ ಬದಲಾವಣೆಯಿಲ್ಲದೆ ನಿರಂತರವಾಗಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ ಎಂದು ಆಕ್ಷೇಪಿಸಿ ಸಲ್ಲಿಸಲಾಗಿದ್ದ ಮತ್ತೊಂದು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.



