ಕಳೆದ 17 ವರ್ಷಗಳ ಅವಧಿಯಲ್ಲಿ (2009 ರಿಂದ 2026ರವರೆಗೆ) ಭಾರತದಾದ್ಯಂತ ಒಟ್ಟು 1,765 ಆನೆಗಳು ಅಸಹಜ ಕಾರಣಗಳಿಂದ ಸಾವನ್ನಪ್ಪಿರುವ ಆಘಾತಕಾರಿ ಸತ್ಯವು ಇದೀಗ ಬಹಿರಂಗವಾಗಿದೆ. ನೋಯ್ಡಾ ಮೂಲದ ಪರಿಸರವಾದಿ ಅಮಿತ್ ಗುಪ್ತಾ ಅವರು ಸಲ್ಲಿಸಿದ್ದ ಮಾಹಿತಿ ಹಕ್ಕು (ಆರ್ಟಿಐ) ಅರ್ಜಿಗೆ ಕೇಂದ್ರ ಪರಿಸರ ಸಚಿವಾಲಯವು ನೀಡಿರುವ ಉತ್ತರದಲ್ಲಿ ಈ ಕಳವಳಕಾರಿ ದತ್ತಾಂಶಗಳು ಲಭ್ಯವಾಗಿವೆ. ಈ ಅವಧಿಯಲ್ಲಿ ಗಂಧದ ಗುಡಿ ಕರ್ನಾಟಕ ರಾಜ್ಯವೊಂದರಲ್ಲೇ 223 ಆನೆಗಳು ಪ್ರಾಣ ಕಳೆದುಕೊಂಡಿವೆ.
ಎಲ್ಲಾ ಕಾರಣಗಳನ್ನು ಒಳಗೊಂಡಂತೆ ರಾಜ್ಯವಾರು ಒಟ್ಟು ಸಾವಿನ ಅಂಕಿ-ಅಂಶಗಳನ್ನು ಗಮನಿಸಿದರೆ, ಒಡಿಶಾ ರಾಜ್ಯವು ಅತಿ ಹೆಚ್ಚು ಅಂದರೆ 371 ಆನೆಗಳ ಸಾವಿಗೆ ಸಾಕ್ಷಿಯಾಗಿದೆ. ಇದರ ಬೆನ್ನಲ್ಲೇ ಅಸ್ಸಾಂನಲ್ಲಿ 356 ಆನೆಗಳು ಮೃತಪಟ್ಟಿದ್ದರೆ, ಕರ್ನಾಟಕವು 223 ಆನೆಗಳ ಸಾವಿನೊಂದಿಗೆ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ಇದು ದಕ್ಷಿಣ ಭಾರತದ ಪ್ರಮುಖ ಆನೆಗಳ ನೆಲೆಬೀಡಾದ ಕರ್ನಾಟಕಕ್ಕೆ ಎಚ್ಚರಿಕೆಯ ಗಂಟೆಯಾಗಿದೆ.
ಆನೆಗಳ ಈ ಅಸಹಜ ಸಾವಿಗೆ ಪ್ರಮುಖವಾಗಿ ವಿದ್ಯುದಾಘಾತ, ರೈಲು ಡಿಕ್ಕಿ, ಅಕ್ರಮ ಬೇಟೆ ಮತ್ತು ವಿಷಪ್ರಾಶನಗಳು ಕಾರಣವಾಗಿವೆ. ಈ ಪೈಕಿ ವಿದ್ಯುದಾಘಾತವು ಗಜಕುಲದ ಪಾಲಿಗೆ ಅತಿದೊಡ್ಡ ಯಮನಾಗಿ ಪರಿಣಮಿಸಿದ್ದು, ಒಟ್ಟು ಸಾವಿನ ಶೇಕಡಾ 67ಕ್ಕೂ ಅಧಿಕ ಭಾಗ ಕೇವಲ ವಿದ್ಯುತ್ ಸ್ಪರ್ಶದಿಂದಲೇ ಸಂಭವಿಸಿದೆ. ದತ್ತಾಂಶಗಳ ಪ್ರಕಾರ, ವಿದ್ಯುದಾಘಾತದಿಂದಲೇ ಬರೋಬ್ಬರಿ 1,185 ಆನೆಗಳು ಮೃತಪಟ್ಟಿವೆ. ವಿದ್ಯುದಾಘಾತದಿಂದ ಅತಿ ಹೆಚ್ಚು ಸಾವು ಕಂಡ ರಾಜ್ಯಗಳ ಪೈಕಿ ಒಡಿಶಾ (238 ಆನೆಗಳು) ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ (195 ಆನೆಗಳು) ಎರಡನೇ ಸ್ಥಾನದಲ್ಲಿ ಹಾಗೂ ಅಸ್ಸಾಂ (191 ಆನೆಗಳು) ಮೂರನೇ ಸ್ಥಾನದಲ್ಲಿವೆ.
ಇನ್ನುಳಿದಂತೆ, ಬೇಟೆಗಾರಿಕೆಯಿಂದ 222 ಆನೆಗಳು ಹತ್ಯೆಯಾಗಿದ್ದು, ವಿದ್ಯುದಾಘಾತದಿಂದ ಸಂಭವಿಸಿದ ಸಾವುಗಳ ಸಂಖ್ಯೆಯು ಬೇಟೆಗಾರಿಕೆಯಿಂದಾದ ಸಾವುಗಳಿಗಿಂತ ಐದಕ್ಕೂ ಹೆಚ್ಚು ಪಟ್ಟು ದೊಡ್ಡದಾಗಿದೆ. ಇದೇ ಅವಧಿಯಲ್ಲಿ ರೈಲು ಡಿಕ್ಕಿಯಿಂದ 277 ಆನೆಗಳು ಸಾವನ್ನಪ್ಪಿವೆ. ರೈಲು ಅಪಘಾತಗಳಲ್ಲಿ ಅಸ್ಸಾಂ (90 ಆನೆಗಳು) ಮುಂಚೂಣಿಯಲ್ಲಿದ್ದರೆ, ಪಶ್ಚಿಮ ಬಂಗಾಳ (68) ಹಾಗೂ ಒಡಿಶಾ (45) ನಂತರದ ಸ್ಥಾನಗಳಲ್ಲಿವೆ. ಇನ್ನು, ವಿಷಪ್ರಾಶನಕ್ಕೆ ತುತ್ತಾಗಿ 81 ಆನೆಗಳು ತಮ್ಮ ಪ್ರಾಣವನ್ನು ಕಳೆದುಕೊಂಡಿವೆ.
ಈ ದಾರುಣ ಸಾವುಗಳ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಆರ್ಟಿಐ ಅರ್ಜಿದಾರ ಅಮಿತ್ ಗುಪ್ತಾ, “ವಿದ್ಯುದಾಘಾತದಿಂದ ಸಂಭವಿಸುವ ಸಾವುಗಳು ಕೇವಲ ಆಕಸ್ಮಿಕವಲ್ಲ, ಇದು ಸ್ಪಷ್ಟ ನಿರ್ಲಕ್ಷ್ಯವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆನೆಗಳ ಕಾರಿಡಾರ್ಗಳಲ್ಲಿ ಅಕ್ರಮವಾಗಿ ಅಳವಡಿಸಿರುವ ವಿದ್ಯುತ್ ಬೇಲಿಗಳು, ಜೋತುಬಿದ್ದಿರುವ ಮತ್ತು ನಿರೋಧಕ ಕವಚವಿಲ್ಲದ (uninsulated lines) ವಿದ್ಯುತ್ ತಂತಿಗಳೇ ಇದಕ್ಕೆ ಕಾರಣವಾಗಿದ್ದು, ಈ ಕೂಡಲೇ ಇದನ್ನು ತಡೆಗಟ್ಟಿ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಅವರು ಒತ್ತಾಯಿಸಿದ್ದಾರೆ.
ಸಚಿವಾಲಯವು ಆರ್ಟಿಐ ಉತ್ತರದಲ್ಲಿ ಈ ಬಗ್ಗೆ ಮೌನ ವಹಿಸಿದ್ದರೂ, ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ನೀಡಿದ ಮಾಹಿತಿಯ ಪ್ರಕಾರ, ವಿದ್ಯುದಾಘಾತದಿಂದ ಆಗುವ ಸಾವುಗಳು “ಆಕಸ್ಮಿಕ ಹಾಗೂ ಉದ್ದೇಶಪೂರ್ವಕ” ಎರಡೂ ಸ್ವರೂಪದ್ದಾಗಿವೆ. ಕಾಡುಹಂದಿ ಮತ್ತು ಇತರ ಪ್ರಾಣಿಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ಅಕ್ರಮವಾಗಿ ವಿದ್ಯುತ್ ಹರಿಯುವ ತಂತಿಗಳನ್ನು ಅಳವಡಿಸುತ್ತಾರೆ. ಇದು ಬೆಳೆ ಮೇಯಲು ಬರುವ ಆನೆಗಳ ದಾರುಣ ಅಂತ್ಯಕ್ಕೆ ಕಾರಣವಾಗುತ್ತಿದೆ.
ಆದಾಗ್ಯೂ, ಮಾನವ-ಆನೆ ಸಂಘರ್ಷವನ್ನು (HEC) ತಗ್ಗಿಸಲು ಸಚಿವಾಲಯವು ಹಲವು ಮಹತ್ವದ ಹೆಜ್ಜೆಗಳನ್ನು ಇಡುತ್ತಿದೆ ಎಂದು ಅಧಿಕಾರಿ ವಿವರಿಸಿದ್ದಾರೆ. ಆನೆಗಳು ರೈಲು ಹಳಿ ದಾಟುವ ಸೂಕ್ಷ್ಮ ಪ್ರದೇಶಗಳ ಸಮೀಕ್ಷೆ ನಡೆಸಲಾಗುತ್ತಿದ್ದು, ಸಂಘರ್ಷ ತಗ್ಗಿಸಲು ಸ್ಥಳೀಯ ಭಾಷೆಗಳಲ್ಲೂ ಮಾರ್ಗದರ್ಶಿ ಸೂತ್ರಗಳನ್ನು (Field guide) ಸಿದ್ಧಪಡಿಸಲಾಗಿದೆ. ಅಲ್ಲದೆ, ಆನೆಗಳ ಸಂಚಾರದ ಕಾರಿಡಾರ್ಗಳ ಗುರುತಿಸುವಿಕೆ ಮತ್ತು ದೃಢೀಕರಣ ಕಾರ್ಯವೂ ನಡೆಯುತ್ತಿದೆ.
ಮಾನವ ಮತ್ತು ಆನೆಗಳ ನಡುವಿನ ಸಂಘರ್ಷದ ಸ್ವರೂಪ, ಪ್ರವೃತ್ತಿ ಮತ್ತು ಕಾರಣಗಳನ್ನು ಅರಿಯಲು ಎಂಟು ಸೂಕ್ಷ್ಮ ರಾಜ್ಯಗಳಲ್ಲಿ ದೀರ್ಘಕಾಲೀನ ಅಧ್ಯಯನವನ್ನು ಹಮ್ಮಿಕೊಳ್ಳಲಾಗಿದೆ. ಅಸ್ಸಾಂ, ಛತ್ತೀಸ್ಗಢ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ (ಹಂತ II ರ ಅಡಿ) ಈ ಅಧ್ಯಯನ ನಡೆಯಲಿದ್ದು, ಸಂಘರ್ಷ ನಿಯಂತ್ರಣದತ್ತ ಪ್ರಮುಖವಾಗಿ ಗಮನಹರಿಸುವ ‘ಪ್ರಾದೇಶಿಕ ಕ್ರಿಯಾ ಯೋಜನೆ’ಗಳನ್ನು (Regional Action Plans) ಸಿದ್ಧಪಡಿಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.



