ಕಲ್ಲುವಳ್ಳಿ ಭಾಗದ ರೈತರು ಗಾಯತ್ರಿ ಅಣೆಕಟ್ಟೆ ಒಳಗೊಂಡು 17 ಕೆರೆಗಳಿಗೆ ವಾಣಿವಿಲಾಸ ಅಣೆಕಟ್ಟೆಯಿಂದ ನೀರು ತುಂಬಿಸುವಂತೆ ಒತ್ತಾಯಿಸಿ ಸೂರಪ್ಪನಹಟ್ಟಿಯಿಂದ ದಿಂಡಾವರ, ಮಾಳಗೊಂಡನಹಳ್ಳಿ ಮುಖಾಂತರ ಬೈಕ್ ರಾಲಿಯಲ್ಲಿ ನಗರ ಪ್ರವೇಶಿಸಿದರು. ರಂಜಿತ್ ಹೋಟೆಲ್ ವೃತ್ತದಿಂದ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿಗೆ ಬಂದು ಪ್ರತಿಭಟನೆ ನಡೆಸಿದರು. ನಂತರ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.ಕಲ್ಲುವಳ್ಳಿ ಭಾಗದ 6 ಗ್ರಾಮ ಪಂಚಾಯಿತಿಗಳ ಸುಮಾರು 160 ಹಳ್ಳಿಗಳಿಗೆ ನೀರಾವರಿ ವಿಚಾರದಲ್ಲಿ ಸರ್ಕಾರಗಳು ಮಾಡಿರುವ ಅನ್ಯಾಯವನ್ನು ಖಂಡಿಸಿ ಸಾವಿರಾರು ಜನ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.
ಕೆರೆಗಳಿಗೆ ನೀರು ಹರಿಸದಿದ್ದರೆ ಹಿರಿಯೂರು ಉಪಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದರು. ಕಲ್ಲುವಳ್ಳಿ ಭಾಗ ಬರದ ನಾಡು ಎಂದು ಕುಖ್ಯಾತಿ ಪಡೆದಿದೆ. ಜವನಗೊಂಡನಹಳ್ಳಿ, ಯಲ್ಲದಕೆರೆ, ಉಡುವಳ್ಳಿ, ದಿಂಡಾವರ, ಗೌಡನಹಳ್ಳಿ, ಕರಿಯಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 80 ಸಾವಿರ ಜನಸಂಖ್ಯೆ ಇದ್ದು, 6 ಲಕ್ಷಕ್ಕೂ ಹೆಚ್ಚು ಜಾನುವಾರುಗಳನ್ನು ಸಾಕುತ್ತ ಬದುಕು ನಡೆಸುತ್ತಿದ್ದಾರೆ. ಈಚಿನ ವರ್ಷಗಳಲ್ಲಿ ಮಳೆಯ ಕೊರತೆಯಿಂದ ಕೆರೆಗಳಿಗೆ ನೀರು ಬರದಂತಾಗಿ ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ಸಾವಿರ ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಜನ- ಜಾನುವಾರುಗಳಿಗೆ ಕುಡಿಯಲಿಕ್ಕೂ ನೀರು ದೊರೆಯುತ್ತಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆಸಿದ್ದ ನೂರಾರು ಎಕರೆ ಅಡಿಕೆ, ತೆಂಗಿನ ತೋಟಗಳು ಒಣಗಿ ಹೋಗಿವೆ. ಇಷ್ಟಾದರೂ ಅಧಿಕಾರಸ್ಥರಿಗೆ ನಮ್ಮ ಸಂಕಷ್ಟಗಳು ಅರ್ಥವಾಗಿಲ್ಲ’ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
‘ಸಚಿವರಾಗಿದ್ದ ಡಿ. ಸುಧಾಕರ್ ಅವರು ಎರಡು ತಿಂಗಳ ಹಿಂದೆ ಕಲ್ಲುವಳ್ಳಿ ಭಾಗದ ಕೆರೆಗಳಿಗೆ ವಾಣಿವಿಲಾಸದಿಂದ ನೀರಿನ ಹಂಚಿಕೆ ಮಾಡಿಸಿ ₹ 265 ಕೋಟಿ ವೆಚ್ಚದ ಕಾಮಗಾರಿಗೆ ಸರ್ವೆ ಮಾಡಿಸಿದ್ದರು. ಸಂಪುಟದಲ್ಲಿ ಅನುಮೋದನೆ ಪಡೆಯುವ ಹದಲ್ಲಿರುವಾಗ ದುರಾದೃಷ್ಟವಶಾತ್ ನಿಧನ ಹೊಂದಿದರು. ಸುಧಕಾರ್ ಆರಂಭಿಸಿರುವ ಯೋಜನೆಯನ್ನು ಈಗಿನ ಸರ್ಕಾರ ತಕ್ಷಣ ಜಾರಿಗೆ ತರುವ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದರು.
ಒಂದು ತಿಂಗಳ ಒಳಗೆ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರು ಬಂದು ಭೂಮಿ ಪೂಜೆ ನೆರವೇರಿಸಬೇಕು. ಇಲ್ಲವಾದಲ್ಲಿ ಹಂತ ಹಂತವಾಗಿ ಹೋರಾಟ ತೀವ್ರಗೊಳಿಸುತ್ತೇವೆ’ ಎಂದು ಮುಖಂಡರು ಎಚ್ಚರಿಕೆ ನೀಡಿದರು.
ದಿಂಡಾವರ ಚಂದ್ರಗಿರಿ, ಕೆ.ಕೆ. ಹಟ್ಟಿ ಜಯಪ್ರಕಾಶ್, ನೀರಾವರಿ ಹೋರಾಟಗಾರ ಕಸವನಹಳ್ಳಿ ರಮೇಶ್, ಗೋವಿಂದರಾಜ್, ರಾಜು, ರವಿ, ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಎನ್.ಆರ್. ಲಕ್ಷ್ಮೀಕಾಂತ್, ಬೇತೂರು ಪಾಳ್ಯ ರಾಜು, ಜೆಜಿ ಹಳ್ಳಿ ಮಂಜಣ್ಣ, ಎಂ. ಜಯಣ್ಣ, ರವೀಂದ್ರಪ್ಪ, ಡಿ.ಯಶೋಧರ, ಸತೀಶ್ ಗೌಡ, ಹನುಮಂತರಾಯಪ್ಪ, ಮಂಜುನಾಥ್, ಕೆಜಿಎಚ್ ಗೌಡ, ಸಿ.ಬಿ. ಪಾಪಣ್ಣ, ಕೆ. ಅಭಿನಂದನ್, ಲಕ್ಷ್ಮಣ್ ಹೂಗಾರ್, ಕೆ. ಟಿ. ರುದ್ರಮುನಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.




