ಚಳ್ಳಕೆರೆ ತಾಲ್ಲೂಕಿನ ಪಿ. ಮಹದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡೇಹುಡೆ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದ ಸುಮಾರು 90 ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ, ಹಕ್ಕುಪತ್ರ ಹಾಗೂ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕಳೆದ ಸುಮಾರು 30 ವರ್ಷಗಳಿಂದ ಮನೆ ನಿವೇಶನಕ್ಕಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಶಾಶ್ವತ ಪರಿಹಾರ ದೊರೆತಿಲ್ಲ. 2020ರಲ್ಲಿಯೂ ಮನವಿ ಸಲ್ಲಿಸಲಾಗಿತ್ತು. ಆದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಗ್ರಾಮದ ಸರ್ವೆ ನಂ. 66ರ 33 ಎಕರೆ 14 ಗುಂಟೆ ಖರಾಬು ಭೂಮಿಯಲ್ಲಿ ಸುಮಾರು 90 ಕುಟುಂಬಗಳು ಕಳೆದ 6–7 ವರ್ಷಗಳಿಂದ ತಮ್ಮ ಸ್ವಂತ ಶ್ರಮ ಮತ್ತು ವೆಚ್ಚದಲ್ಲಿ ಜಾಗವನ್ನು ಸಮತಟ್ಟು ಮಾಡಿಕೊಂಡಿವೆ. ಈ ಪೈಕಿ ಸುಮಾರು 20 ಕುಟುಂಬಗಳು ಗುಡಿಸಲು ಹಾಗೂ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದರೂ, ಇದುವರೆಗೆ ನಿಯಮಾನುಸಾರ ನಿವೇಶನ ಗುರುತಿಸಿ ಹಕ್ಕುಪತ್ರ ನೀಡಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ವಾಸಿಸುತ್ತಿರುವ ಕುಟುಂಬಗಳಿಗೆ ಕುಡಿಯುವ ನೀರು, ವಿದ್ಯುತ್, ರಸ್ತೆ, ಬೀದಿ ದೀಪ, ಚರಂಡಿ ಮತ್ತು ಸ್ವಚ್ಛತೆಯಂತಹ ಮೂಲಭೂತ ಸೌಲಭ್ಯಗಳು ಸಮರ್ಪಕವಾಗಿ ಲಭ್ಯವಿಲ್ಲ. ಇದರಿಂದ ಮಹಿಳೆಯರು, ಮಕ್ಕಳು ಹಾಗೂ ವಯೋವೃದ್ಧರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರೇಷನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿರುವ 18 ಕುಟುಂಬಗಳಿಗೂ ಕಾರ್ಡ್ ದೊರೆತಿಲ್ಲ; ಇದರಿಂದ ಸರ್ಕಾರದ ವಿವಿಧ ಸೌಲಭ್ಯಗಳಿಂದ ಅವರು ವಂಚಿತರಾಗುವಂತಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಪಿಡಿಒ ವಿರುದ್ಧ ಅಸಮಾಧಾನ: ನಿವೇಶನ, ಹಕ್ಕುಪತ್ರ ಮತ್ತು ಮೂಲಸೌಕರ್ಯಕ್ಕಾಗಿ ಹಲವು ಬಾರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು (ಪಿಡಿಒ) ಸಂಪರ್ಕಿಸಿದರೂ, ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಪಿಡಿಒ ಕಾರ್ಯವೈಖರಿ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪ್ರಮುಖ ಬೇಡಿಕೆಗಳು:
ಸರ್ವೆ ನಂ. 66ರ ಕಾನೂನು ಮತ್ತು ಕಂದಾಯ ಸ್ಥಿತಿ ಪರಿಶೀಲಿಸಿ, ಸ್ಥಳ ಪರಿಶೀಲನೆ ನಡೆಸುವುದು
ಅಲ್ಲಿ ವಾಸಿಸುತ್ತಿರುವ ಸುಮಾರು 20 ಕುಟುಂಬಗಳಿಗೆ ನಿಯಮಾನುಸಾರ ನಿವೇಶನ ಗುರುತಿಸಿ ಹಕ್ಕುಪತ್ರ ನೀಡುವುದು
ನಿವೇಶನ ರಹಿತ 90 ಕುಟುಂಬಗಳ ಸಮಗ್ರ ಸಮೀಕ್ಷೆ ನಡೆಸಿ, ಅರ್ಹರಿಗೆ ನಿವೇಶನ ಒದಗಿಸುವುದು
30 ವರ್ಷಗಳ ಹಾಗೂ 2020ರ ಮನವಿಗಳನ್ನು ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸುವುದು
ಕುಡಿಯುವ ನೀರು, ವಿದ್ಯುತ್, ರಸ್ತೆ, ಬೀದಿ ದೀಪ, ಚರಂಡಿ, ಸ್ವಚ್ಛತಾ ಸೌಲಭ್ಯಗಳನ್ನು ತುರ್ತಾಗಿ ಒದಗಿಸುವುದು
ಸರ್ಕಾರದ ವಸತಿ ಯೋಜನೆಗಳಡಿ ಮನೆ ನಿರ್ಮಾಣಕ್ಕೆ ನೆರವು ನೀಡುವುದು
ರೇಷನ್ ಕಾರ್ಡ್ ಇಲ್ಲದ 18 ಕುಟುಂಬಗಳಿಗೆ ಕಾರ್ಡ್ ಒದಗಿಸುವುದು
ಪಿಡಿಒ ಕಾರ್ಯವೈಖರಿ ಕುರಿತು ಕ್ರಮ ಕೈಗೊಳ್ಳುವುದು
ಸುಮಾರು ಮೂರು ದಶಕಗಳಿಂದ ನಿವೇಶನಕ್ಕಾಗಿ ಕಾಯುತ್ತಿರುವ ಬಡ ದಲಿತ ಕುಟುಂಬಗಳ ಸಮಸ್ಯೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು.
ಸ್ಥಳ ಪರಿಶೀಲನೆ ನಡೆಸಿ ಕುಟುಂಬಗಳ ನೈಜ ಪರಿಸ್ಥಿತಿ ದಾಖಲಿಸಿ, ಅರ್ಹರಿಗೆ ನಿವೇಶನ, ಹಕ್ಕುಪತ್ರ, ಮನೆ ಹಾಗೂ ಮೂಲಸೌಕರ್ಯ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.






