ಕನ್ನಡ ರಾಜ್ಯೋತ್ಸವದ ಸಂಭ್ರಮದ ಬೆನ್ನಲ್ಲೇ ಸಾಣೇಹಳ್ಳಿಯಲ್ಲಿ ಆರು ದಿನಗಳ ರಾಷ್ಟ್ರೀಯ ನಾಟಕೋತ್ಸವದ ರಂಗವೈಭವ ಅನಾವರಣಗೊಳ್ಳಲಿದೆ. ನ.1ರಿಂದ 6ರವರೆಗೆ ನಡೆಯಲಿರುವ ಈ ನಾಟಕೋತ್ಸವಕ್ಕೆ ಸಿದ್ಧತೆಗಳು ಬಿರುಸಿನಿಂದ ಸಾಗಿದ್ದು, ನಾಡಿನ ವಿವಿಧ ಭಾಗಗಳಿಂದ ಆಗಮಿಸುವ ಕಲಾವಿದರು, ರಂಗಾಸಕ್ತರು ಹಾಗೂ ಸಾರ್ವಜನಿಕರನ್ನು ಸ್ವಾಗತಿಸಲು ಸಾಣೇಹಳ್ಳಿ ಸಜ್ಜಾಗಿದೆ.
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆಯಲಿರುವ ನಾಟಕೋತ್ಸವದಲ್ಲಿ ಹಲವು ಗಣ್ಯರು, ಜನಪ್ರತಿನಿಧಿಗಳು, ವಿವಿಧ ಮಠಗಳ ಮಠಾಧೀಶರು ಹಾಗೂ ಭಕ್ತರು ಪಾಲ್ಗೊಳ್ಳಲಿದ್ದಾರೆ. ಈ ಬಾರಿ ‘ಗುರುವಾದಡೂ ಕಾಯಕದಿಂದಲೇ ಜೀವನ್ಮುಕ್ತಿ’ ಎಂಬ ಘೋಷವಾಕ್ಯದೊಂದಿಗೆ ಉತ್ಸವ ಆಯೋಜಿಸಲಾಗಿದೆ.
ನಾಟಕೋತ್ಸವದ ಅಂಗವಾಗಿ ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಶಿವಕುಮಾರ ರಂಗಮಂದಿರದಲ್ಲಿ ವಿವಿಧ ವಿಷಯಗಳ ಕುರಿತು ಚಿಂತನ ಕಾರ್ಯಕ್ರಮ ನಡೆಯಲಿದೆ. ಶಿವಸಂಚಾರದ ಮೂರು ನಾಟಕಗಳು ಸೇರಿದಂತೆ ಒಟ್ಟು ಆರು ನಾಟಕಗಳು ಬಯಲು ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿವೆ.

ಧಾರ್ಮಿಕ, ಸಾಂಸ್ಕೃತಿಕ ಹಾಗೂ ನೈತಿಕ ಜಾಗೃತಿ ಮೂಡಿಸುವುದರ ಜೊತೆಗೆ ಸಮಾಜದಲ್ಲಿ ಮೌಲ್ಯಾಧಾರಿತ ಚಿಂತನೆ ಬೆಳೆಸುವುದು ನಾಟಕೋತ್ಸವದ ಪ್ರಮುಖ ಉದ್ದೇಶವಾಗಿದೆ. ಈ ಬಾರಿ ಯುವಜನರಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ‘ಮಧ್ಯಮುಕ್ತ ನಾಡು’ ಎಂಬ ಗೋಷ್ಠಿಯನ್ನೂ ಆಯೋಜಿಸಲಾಗಿದೆ.
ಮಕ್ಕಳಲ್ಲಿ ಚಿಂತನೆ ಮತ್ತು ಅರಿವು ಬೆಳೆಸಲು ಸಾಮೂಹಿಕ ಪ್ರಾರ್ಥನೆ ಹಾಗೂ ಶಿವಮಂತ್ರ ಲೇಖನದಂತಹ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ನ.4ರಂದು ಬೆಳಿಗ್ಗೆ 11ಕ್ಕೆ ಎಸ್.ಎಸ್. ಒಳಾಂಗಣ ರಂಗಮಂದಿರದಲ್ಲಿ ‘ಹೈನುಗಾರಿಕೆ’ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಅಂದು ಬೆಳಿಗ್ಗೆ 8.30ರಿಂದ 11ರವರೆಗೆ ಸಾಣೇಹಳ್ಳಿಯ ಎಸ್.ಡಿ. ಸಿದ್ದರಾಮಯ್ಯ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಪಶುಗಳ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ಆಯೋಜಿಸಲಾಗಿದೆ.

ನಾಟಕೋತ್ಸವದ ಕೊನೆಯ ದಿನವಾದ ನ.6ರಂದು ಸಂಜೆ 5ಕ್ಕೆ ‘ಗುರುಭವನ’ ಉದ್ಘಾಟನೆಯಾಗಲಿದೆ. ಸಂಜೆ 6ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನಾಟಕಕಾರ, ಲಾವಣಿಕಾರ ಹಾಗೂ ನಿವೃತ್ತ ಪ್ರಾಚಾರ್ಯ ಬಿ.ಆರ್. ಪೋಲಿಸ್ ಪಾಟೀಲ ಅವರಿಗೆ ‘ಶ್ರೀ ಶಿವಕುಮಾರ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.
ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಹೆಸರಿನಲ್ಲಿ ನೀಡಲಾಗುವ ಈ ಪ್ರಶಸ್ತಿಯು ₹50,000 ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.
ಸಾಣೇಹಳ್ಳಿಯ ನಾಟಕೋತ್ಸವದ ಹಿಂದೆ ದಶಕಗಳ ರಂಗಭೂಮಿಯ ಇತಿಹಾಸವಿದೆ. 1987ರಲ್ಲಿ ಆರಂಭವಾದ ಶಿವಕುಮಾರ ಕಲಾಸಂಘವು ಸ್ಥಳೀಯ ಕಲಾವಿದರ ಮೂಲಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿತು. ಬಳಿಕ ಸಿ.ಜಿ. ಕೃಷ್ಣಸ್ವಾಮಿ ಅವರ ಪ್ರಯತ್ನದಿಂದ ಶಿವಸಂಚಾರವಾಗಿ ಬೆಳೆದು, ನಾಡಿನಾದ್ಯಂತ ನಾಟಕ ಪ್ರದರ್ಶನ ನೀಡುವ ಮೂಲಕ ಜನಪ್ರಿಯತೆ ಗಳಿಸಿತು.
ಕಾಲಕ್ರಮೇಣ ಸಾಣೇಹಳ್ಳಿಯಲ್ಲಿ ಒಳಾಂಗಣ ಹಾಗೂ ಬಯಲು ರಂಗಮಂದಿರಗಳು ನಿರ್ಮಾಣಗೊಂಡವು. ಭಕ್ತರು ಮತ್ತು ಸಾರ್ವಜನಿಕರ ಸಹಕಾರದಿಂದ ನಾಟಕೋತ್ಸವ ವ್ಯವಸ್ಥಿತವಾಗಿ ಬೆಳೆಯಲು ಸಾಧ್ಯವಾಯಿತು.

“ಈ ಬಾರಿ ಬರಗಾಲದ ಹಿನ್ನೆಲೆಯಲ್ಲಿ ನಾಟಕೋತ್ಸವವನ್ನು ಸರಳವಾಗಿ ಆಯೋಜಿಸಲಾಗುತ್ತಿದೆ. ಆದರೂ ರಂಗಭೂಮಿಯ ಮೇಲಿನ ಪ್ರೀತಿ ಮತ್ತು ಉತ್ಸವದ ಮೇಲಿನ ಅಭಿಮಾನದಿಂದಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. 10 ಸಾವಿರಕ್ಕೂ ಅಧಿಕ ಜನರು ನಾಟಕೋತ್ಸವದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ನಾಡಹಬ್ಬದಂತೆ ಸಾಣೇಹಳ್ಳಿ ಸಂಭ್ರಮಿಸಲಿದೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಕಲೆಯ ಮೂಲಕ ಸಮಾಜದಲ್ಲಿ ಅರಿವು ಮೂಡಿಸುವ, ಚಿಂತನೆಗೆ ಪ್ರೇರೇಪಿಸುವ ಹಾಗೂ ರಂಗಭೂಮಿಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಆಶಯದೊಂದಿಗೆ ಸಾಣೇಹಳ್ಳಿಯ ರಾಷ್ಟ್ರೀಯ ನಾಟಕೋತ್ಸವ ಮತ್ತೊಮ್ಮೆ ರಂಗಾಸಕ್ತರನ್ನು ಒಂದೆಡೆ ಸೇರಿಸಲಿದೆ.




