ಕೋಲಾರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ರವರು ಕಾರ್ಮಿಕ ಸಚಿವರಾಗಿದ್ದ ಸಂದರ್ಭದಲ್ಲಿ ಜಾರಿಯಾಗಿದ್ದ ಎಲ್ಲಾ ಕಾರ್ಮಿಕ ಕಾನೂನುಗಳನ್ನು ರದ್ದು ಮಾಡಿದ ಕೇಂದ್ರ ಸರ್ಕಾರವು 1 ಏಪ್ರಿಲ್ 2026 ರಿಂದ ದೇಶದಾದ್ಯಂತ ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿರುವುದು ಖಂಡನೀಯ. ತಕ್ಷಣ ಈ ಹಿಂದೆ ಇದ್ದ ಕಾರ್ಮಿಕ ಕಾನೂನುಗಳನ್ನು ಮರು ಜಾರಿ ಮಾಡಬೇಕೆಂದು ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಆಗ್ರಹಿಸಿದರು.
ವೈಜ್ಞಾನಿಕ ಕನಿಷ್ಟ ವೇತನದ ಜಾರಿಗೆ – ಕಾರ್ಮಿಕ ಹಕ್ಕುಗಳನ್ನು ರಕ್ಷಿಸಲು ಒತ್ತಾಯಿಸಿ ಸಿಐಟಿಯು ಕರೆ ಮೇರೆಗೆ ನಗರದ ನಚಿಕೇತ ನಿಲಯದ ಆವರಣದಲ್ಲಿ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ ಸಹಿ ಸಂಗ್ರಹ ಚಳುವಳಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನ್ವಯ ಮತ್ತು ಸರ್ಕಾರದ ಹಲವು ಸುತ್ತೋಲೆಗಳ ರೀತ್ಯಾ ಪ್ರತಿ 5 ವರ್ಷಕ್ಕೊಮ್ಮೆ ಕನಿಷ್ಠ ವೇತನವನ್ನು ಪರಿಷ್ಕರಣೆ ಮಾಡಬೇಕು. ಆದರೆ ರಾಜ್ಯದಲ್ಲಿ 2017 ರಲ್ಲಿ ಪರಿಷ್ಕರಣೆ ಮಾಡಿದ ನಂತರ ಇಲ್ಲಿಯ ತನಕ ಪರಿಷ್ಕರಣೆ ಮಾಡಿಲ್ಲ. ರಾಜ್ಯದ ಎಲ್ಲಾ ಕಾರ್ಮಿಕರಿಗೂ ಅನ್ವಯ ಆಗುವಂತೆ ತುಟ್ಟಿಭತ್ಯೆಯೊಂದಿಗೆ ವಲಯ 3ರಲ್ಲಿನ ಅಕುಶಲ ಕಾರ್ಮಿಕರಿಗೆ ಮಾಸಿಕ ರೂ. 31,000 ಕನಿಷ್ಠ ವೇತನ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಪ್ರಕಟಿತ ಕನಿಷ್ಠ ವೇತನಕ್ಕಿಂತಲೂ ಕಡಿಮೆ ವೇತನ ಪಡೆಯುವ ಸರ್ಕಾರಿ, ಖಾಸಗಿ ವಲಯಗಳಲ್ಲಿ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ನೌಕರರಿಗೆ ಹಾಗೂ ಎಲ್ಲಾ ಸ್ವರೂಪದ ಖಾಯಮೇತರ ಕಾರ್ಮಿಕರಿಗೆ, ನೌಕರರಿಗೆ ಕನಿಷ್ಠ ವೇತನವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಕಾರ್ಮಿಕ ಸಂಹಿತೆಗಳಿಗೆ, ಕಾರ್ಮಿಕರ ಪರವಾಗಿ ರಾಜ್ಯದ ತಿದ್ದುಪಡಿಗಳನ್ನು ಮಾಡಿದ ನಂತರ ನಿಯಮಾವಳಿಗಳನ್ನು ರೂಪಿಸಿ ಜಾರಿಗೆ ತರಬೇಕು. ಖಾಯಂ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು. ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ..? ನಸೀರ್ ಅಹ್ಮದ್ ರಾಜೀನಾಮೆ ಪಡೆದರೆ ಉಗ್ರ ಹೋರಾಟದ ಎಚ್ಚರಿಕೆ: ಎನ್.ಅಂಬರೀಷ್
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಎನ್.ಎನ್.ಶ್ರೀರಾಮ್, ಸಿಐಟಿಯು ಜಿಲ್ಲಾ ಮುಖಂಡರಾದ ಹೆಚ್.ಬಿ.ಕೃಷ್ಣಪ್ಪ, ಎಂ.ಭೀಮರಾಜ್, ಎಸ್.ಆಶಾ, ರಾಮಚಂದ್ರಪ್ಪ, ವಿಜಯಕುಮಾರ್, ಮೂರ್ತಿ, ರತ್ನಮ್ಮ, ವೆಂಕಟೇಸಪ್ಪ ಮತ್ತಿತರರು ಉಪಸ್ಥಿತರಿದ್ದರು.




