ವಿಶ್ವದಲ್ಲೇ ಅತಿ ಹೆಚ್ಚು, ಅಂದರೆ 32 ಡಿಗ್ರಿಗಳನ್ನು ಪಡೆದಿದ್ದ ಬಾಬಾ ಸಾಹೇಬರ ಸಾಧನೆ ಅಸಾಮಾನ್ಯವಾದದ್ದು. ಅವರು ಕೇವಲ ಪದವಿಗಳನ್ನು ಪಡೆದು ಸುಮ್ಮನಾಗದೆ, ಆ ಜ್ಞಾನದ ಮೂಲಕ ದೇಶಕ್ಕೆ ಅತ್ಯುನ್ನತವಾದ ‘ಸಂವಿಧಾನ’ ಎಂಬ ವ್ಯವಸ್ಥೆ ನೀಡಿದರು. ಅಸಮಾನತೆಯ ವಿರುದ್ಧ ಹೋರಾಡಿ, ಸಮಾನತೆಯ ಬದುಕನ್ನು ಕಟ್ಟಿಕೊಟ್ಟ ಅವರು ಅಜರಾಮರ. ಅವರ ಹೋರಾಟ, ಆರ್ಥಿಕ ಚಿಂತನೆಗಳು ಹಾಗೂ ಕಾರ್ಮಿಕ ಕಾನೂನುಗಳು ಎಲ್ಲರಿಗೂ ಆದರ್ಶಪ್ರಾಯವಾಗಿವೆ ಎಂದು ಪ್ರಜ್ಞಾವಂತರ ವೇದಿಕೆಯ ಸಂಚಾಲಕ ಸಿ.ಎಸ್. ವೆಂಕಟೇಶ್ ಕರೆ ಕೊಟ್ಟರು.
ಶ್ರೀರಂಗಪಟ್ಟಣದ ಪ್ರಜ್ಞಾವಂತರ ವೇದಿಕೆ ವತಿಯಿಂದ ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಬಾಬಾ ಸಾಹೇಬರ ಮೌಲ್ಯಗಳನ್ನು ಇಂದಿನ ಸಮಾಜ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆಯ ಕುರಿತು ಮಾತನಾಡಿದರು.
“ಇಂದು ನಾವು ಅಂಬೇಡ್ಕರ್ ಅವರನ್ನು ಕೇವಲ ಪೂಜೆಗೆ ಸೀಮಿತಗೊಳಿಸುತ್ತಿದ್ದೇವೆ. ಅವರ ಭಾವಚಿತ್ರಕ್ಕೆ ಪೂಜೆ ಮಾಡುವುದಕ್ಕಿಂತ, ಅವರು ಹಾಕಿಕೊಟ್ಟ ವಿಚಾರಧಾರೆಗಳ ಹಾದಿಯಲ್ಲಿ ನಡೆಯುವುದು ಬಹುಮುಖ್ಯ. ಇತ್ತೀಚಿನ ದಿನಗಳಲ್ಲೂ ಕೆಲವೆಡೆ ಶೂದ್ರರನ್ನು ಮುಟ್ಟಿಸಿಕೊಳ್ಳದಿರುವುದು, ಅಸ್ಪೃಶ್ಯತೆ ಆಚರಿಸುತ್ತಿರುವ ಘಟನೆಗಳು ಕೇಳಿಬರುತ್ತಿರುವುದು ಅತ್ಯಂತ ನೋವಿನ ಸಂಗತಿ. ಜಾತಿ, ಧರ್ಮ, ಲಿಂಗ ಭೇದ ಮರೆತು ನಾವೆಲ್ಲರೂ ವಿಶ್ವಮಾನವರಾಗಿ, ಭಾರತೀಯರಾಗಿ ಬದುಕಬೇಕು” ಎಂದು ತಿಳಿಸಿದರು.
ಇದನ್ನೂ ಓದಿ: ಶ್ರೀರಂಗಪಟ್ಟಣ | ವೈಜ್ಞಾನಿಕ ರೂಢಿಗಳಿಂದ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ: ಅಗಲೆ ಯಾದವ್
ಮತದಾನದ ಹಕ್ಕಿನ ಕುರಿತು ಎಚ್ಚರಿಸಿದ ಅವರು, “ಅಂಬೇಡ್ಕರ್ ಅವರು ನೀಡಿದ ಮತದಾನದ ಹಕ್ಕಿನಿಂದಾಗಿಯೇ ನಾವಿಂದು ಪ್ರಭುಗಳಾಗಿದ್ದೇವೆ. ಮಹಿಳೆಯರಿಗೂ ಸಮಾನ ಹಕ್ಕು ಸಿಕ್ಕಿದೆ. ಆದರೆ ಇಂದು ಜನರು ತಮ್ಮ ಮತವನ್ನು ಬಂಡವಾಳಶಾಹಿಗಳಿಗೆ ಮಾರಿಕೊಳ್ಳುತ್ತಿರುವುದು ವಿಪರ್ಯಾಸ. ನಮ್ಮ ಮತವನ್ನು ಮಾರಿಕೊಂಡರೆ ನಾವು ಭಿಕಾರಿಗಳಾಗುತ್ತೇವೆ. ಅಂಬೇಡ್ಕರ್ ಅವರ ಮೇಲೆ ನಿಜವಾದ ಪ್ರೀತಿ, ಗೌರವ ಇದ್ದರೆ ಉತ್ತಮ ಅಭ್ಯರ್ಥಿಗಳನ್ನು ಆರಿಸಬೇಕು. ಯೋಗ್ಯರಿಗೆ ಮತ ಹಾಕದಿದ್ದರೆ ನಾವು ಮತ್ತೆ ಗುಲಾಮರಾಗಿ ಬದುಕಬೇಕಾಗುತ್ತದೆ ಹಾಗೂ ಅದು ಬಾಬಾ ಸಾಹೇಬರಿಗೆ ನಾವು ಮಾಡುವ ದೊಡ್ಡ ದ್ರೋಹ” ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಪ್ರಿಯಾ ರಮೇಶ್, ಮುಸ್ಲಿಂ ಸೌಹಾರ್ದ ವೇದಿಕೆಯ ಅಧ್ಯಕ್ಷ ಅಪ್ಸರ್ ಖಾನ್, ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಜಯಶಂಕರ್, ಪ್ರಮುಖರಾದ ಗಂಜಾಂ ಆಯುಬ್, ಚಿಕ್ಕತಮೇಗೌಡ, ಗಾಂಧಿನಗರ ಕುಮಾರ್, ಸುರೇಶ್ ಸೇರಿದಂತೆ ಮುಂತಾದವರು ಭಾಗವಹಿಸಿ ನಮನ ಸಲ್ಲಿಸಿದರು.





