ಯೆನೆಪೋಯ (ಡೀಮ್ಡ್ ಟು ಬಿ ಯೂನಿವರ್ಸಿಟಿ)ಯ ಆರೋಗ್ಯ ಸೇವಾ ಉಪಕ್ರಮವಾದ ‘ಯೆನೆಪೊಯ ಕೇರ್’ ವತಿಯಿಂದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ 24 ಗಂಟೆಯೂ ಕಾರ್ಯನಿರ್ವಹಿಸುವ ತುರ್ತು ವೈದ್ಯಕೀಯ ಚಿಕಿತ್ಸಾ ಘಟಕವನ್ನು (Emergency Medical Room – EMR) ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಉದ್ಘಾಟಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, ರೈಲು ನಿಲ್ದಾಣದಲ್ಲಿ ಇಂತಹ ತುರ್ತು ವೈದ್ಯಕೀಯ ಸೌಲಭ್ಯ ಆರಂಭಿಸಿರುವ ಯೆನೆಪೊಯ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. “ಪ್ರಯಾಣದ ವೇಳೆ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾಗುವ ಸಾಧ್ಯತೆಯಿದ್ದರೆ ಪ್ರಯಾಣಿಕರು ಮುಂಚಿತವಾಗಿ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಬಹುದು. ಇದರಿಂದ ಅವರು ನಿಲ್ದಾಣಕ್ಕೆ ಆಗಮಿಸುವ ಸಂದರ್ಭದಲ್ಲಿ ಅಗತ್ಯ ವೈದ್ಯಕೀಯ ವ್ಯವಸ್ಥೆ ಕಲ್ಪಿಸಲು ಅನುಕೂಲವಾಗಲಿದೆ” ಎಂದರು.
“ರೈಲು ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ತುರ್ತು ಆರೋಗ್ಯ ಸಮಸ್ಯೆಗಳು ಎದುರಾದಾಗ ತಕ್ಷಣ ವೈದ್ಯಕೀಯ ನೆರವು ಒದಗಿಸುವುದು ಈ ಘಟಕದ ಮುಖ್ಯ ಉದ್ದೇಶವಾಗಿದೆ. ಈ ತುರ್ತು ವೈದ್ಯಕೀಯ ಘಟಕವು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಇಲ್ಲಿ ತರಬೇತಿ ಪಡೆದ ನರ್ಸಿಂಗ್ ಸಿಬ್ಬಂದಿ ಲಭ್ಯವಿರಲಿದ್ದಾರೆ. ವೈದ್ಯಕೀಯ ಸಲಹೆ ಹಾಗೂ ಔಷಧಿ ಸೂಚನೆಗಳಿಗಾಗಿ ಟೆಲಿ ಕನ್ಸಲ್ಟೇಶನ್ ಮತ್ತು ವಿಡಿಯೋ ಕಾಲ್ ಮೂಲಕ ವೈದ್ಯರ ಸೇವೆಯನ್ನೂ ಒದಗಿಸಲಾಗುತ್ತದೆ” ಎಂದು ಯೆನೆಪೋಯ ವೈದ್ಯಾಧಿಕಾರಿ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್, ಯೆನೆಪೊಯ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಯೆನೆಪೊಯ ಅಬ್ದುಲ್ಲ ಕುಂಞಿ, ಸಹ ಕುಲಾಧಿಪತಿ ಡಾ. ಎಂ. ವಿಜಯಕುಮಾರ್, ಕುಲಪತಿ ಡಾ. ಕೆ.ಎಸ್. ಗಂಗಾಧರ ಸೋಮಯಾಜಿ ಸೇರಿದಂತೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.





