ಸಿಯಾಂಗ್ ಮೇಲ್ದಂಡೆ ವಿವಿಧೋದ್ದೇಶ ಯೋಜನೆಯ (SUMP) ವಿರುದ್ಧದ ಪ್ರತಿಭಟನೆಗಳು ಮುಂದುವರಿಯಲಿವೆ ಎಂದು ಸುಮಾರು ಒಂದು ತಿಂಗಳ ಬಂಧನದ ಬಳಿಕ ಬಿಡುಗಡೆಯಾಗಿರುವ ಹೋರಾಟಗಾರ ಅಡುಮ್ ತಯೋಂಗ್ ಸ್ಪಷ್ಟಪಡಿಸಿದ್ದಾರೆ. ಈ ಯೋಜನೆಯು ಸಿಯಾಂಗ್ ಕಣಿವೆಯ ನಿವಾಸಿಗಳ ಅಸ್ತಿತ್ವಕ್ಕೆ ಕುತ್ತು ತರಲಿದೆ ಎಂದು ಅವರು ಪುನರುಚ್ಚರಿಸಿದ್ದಾರೆ. ಮತ್ತೊಂದೆಡೆ, ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಬಂಧನ ಅನಿವಾರ್ಯವಾಗಿತ್ತು ಎಂದು ಜಿಲ್ಲಾಡಳಿತ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.
ಅರುಣಾಚಲ ಪ್ರದೇಶ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ (APUAPA) ಅಕ್ಟೋಬರ್ 9ರಂದು ಬಂಧಿತರಾಗಿದ್ದ ನಾಲ್ವರು ಹೋರಾಟಗಾರರನ್ನು ನವೆಂಬರ್ 7ರಂದು ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದವರಲ್ಲಿ ಅಡುಮ್ ತಯೋಂಗ್ ಜತೆಗೆ ಓಮಕ್ ಪರೋನ್, ಒಕುಟ್ ಪಲೋಹ್ ಮತ್ತು ಓಸನ್ ಪರೋನ್ ಸೇರಿದ್ದಾರೆ.
‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯೊಂದಿಗೆ ಮಾತನಾಡಿದ ತಯೋಂಗ್, “ಬಂಧನದ ಆರಂಭದಲ್ಲಿ ನಮಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ವಶಕ್ಕೆ ಪಡೆದ ನಂತರವಷ್ಟೇ ನಮ್ಮ ಮೇಲೆ ಎಪಿಯುಎಪಿಎ (APUAPA) ಕಾಯ್ದೆ ಹೇರಿರುವುದಾಗಿ ತಿಳಿಸಲಾಯಿತು. ಸುಮಾರು ಒಂದು ತಿಂಗಳ ಕಾಲ ನಮ್ಮನ್ನು ಕೊಲೆ ಅಪರಾಧಿಗಳಿರುವ ಜೈಲು ಕೋಣೆಗಳಲ್ಲೇ ಇರಿಸಲಾಗಿತ್ತು. ನಮ್ಮ ಫೋನ್‌ಗಳನ್ನು ಜಪ್ತಿ ಮಾಡಲಾಗಿತ್ತು ಮತ್ತು ಹೊರಗಡೆ ಏನು ನಡೆಯುತ್ತಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. 15 ದಿನಗಳಿಗೊಮ್ಮೆ ಮಾತ್ರ ಕುಟುಂಬಸ್ಥರೊಂದಿಗೆ ಮಾತನಾಡಲು ಅವಕಾಶ ನೀಡಲಾಗುತ್ತಿತ್ತು,” ಎಂದು ಆರೋಪಿಸಿದ್ದಾರೆ. “ನಮ್ಮ ಪ್ರತಿಭಟನೆ ಮುಂದುವರಿಯಲಿದೆ,” ಎಂದು ಅವರು ಘೋಷಿಸಿದ್ದಾರೆ.
ಸಿಯಾಂಗ್ ನದಿ ತೀರದ ನಿವಾಸಿಗಳು 11,200 ಮೆಗಾವ್ಯಾಟ್ ಸಾಮರ್ಥ್ಯದ ಉದ್ದೇಶಿತ SUMP ಯೋಜನೆಯನ್ನು ವಿರೋಧಿಸುತ್ತಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ವಿವಿಧ ಪಾಲುದಾರರನ್ನು ಮಾತುಕತೆಗೆ ಆಹ್ವಾನಿಸಿರುವುದಾಗಿ ರಾಜ್ಯ ಸರ್ಕಾರ ಹೇಳುತ್ತಿದ್ದರೆ, ಮಾತುಕತೆ ಪುನರಾರಂಭಗೊಳ್ಳುವ ಮೊದಲು ಬಂಧಿತ ಎಲ್ಲಾ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು ಎಂದು ‘ಸಿಯಾಂಗ್ ಸ್ಥಳೀಯ ರೈತರ ವೇದಿಕೆ’ (SIFF) ಒತ್ತಾಯಿಸಿದೆ.
ಇಟಾನಗರ ಮೂಲದ ವಕೀಲ ಹಾಗೂ SIFF ವಕ್ತಾರ ಟಾಗೋರಿ ಮಿಜೆ ಮಾತನಾಡಿ, “ಬಿಡುಗಡೆಯಾದ ನಾಲ್ವರು ಗೆಕು ಗ್ರಾಮದವರು. ವಿವಿಧ ಜಿಲ್ಲೆಗಳ ಇನ್ನೂ ಹಲವರ ವಿರುದ್ಧ ಎಫ್‌ಐಆರ್‌ಗಳಿದ್ದು, ಅವರು ಇನ್ನೂ ಬಂಧನದಲ್ಲಿದ್ದಾರೆ. ಪ್ರತಿಭಟನಾಕಾರರು ಮತ್ತು ಹೋರಾಟಗಾರರ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ಬೇಷರತ್ತಾಗಿ ಹಿಂಪಡೆಯಬೇಕು ಹಾಗೂ ರಾಜ್ಯದಲ್ಲಿ ನಿಯೋಜಿಸಲಾಗಿರುವ ಎಲ್ಲಾ ಅರೆಸೇನಾ ಮತ್ತು ಸಶಸ್ತ್ರ ಪಡೆಗಳನ್ನು ಸರ್ಕಾರ ವಾಪಸ್ ಪಡೆಯಬೇಕು,” ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಪ್ಪರ್ ಸಿಯಾಂಗ್ ಜಿಲ್ಲಾಧಿಕಾರಿ ಅಶೋಕ್ ತಾಜೋ, ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಎಪಿಯುಎಪಿಎ ಕಾಯ್ದೆಯನ್ನು ಬಳಸಬೇಕಾಯಿತು ಎಂದಿದ್ದಾರೆ. “APUAPA ಮೂಲತಃ ಮುಂಜಾಗ್ರತಾ ಬಂಧನ ಕಾಯ್ದೆಯಾಗಿದೆ. ಕಳೆದ ಕೆಲವು ವಾರಗಳಿಂದ ಮನೆಗಳ ಮೇಲೆ ದಾಳಿ ಮತ್ತು ವಾಹನಗಳಿಗೆ ಬೆಂಕಿ ಹಚ್ಚುವ ಹಲವು ಘಟನೆಗಳು ನಡೆದಿದ್ದವು. ಪದೇ ಪದೇ ಮನವಿ ಮಾಡಿದರೂ ಕೆಲವರು ಜನರನ್ನು ಪ್ರಚೋದಿಸುತ್ತಿದ್ದರು. ಪರಿಸ್ಥಿತಿ ತೀರಾ ಉದ್ವಿಗ್ನಗೊಂಡಿದ್ದರಿಂದ, ಅದನ್ನು ನಿಯಂತ್ರಿಸಲು ಕೆಲವರನ್ನು ವಶಕ್ಕೆ ಪಡೆಯಬೇಕಾಯಿತು,” ಎಂದು ಅವರು ತಿಳಿಸಿದ್ದಾರೆ.
“ಆರಂಭದಲ್ಲಿ ಅವರನ್ನು ಬಂಧಿಸಲಾಗಿತ್ತಾದರೂ ಈಗ ಬಿಡುಗಡೆ ಮಾಡಲಾಗಿದೆ. ಬಂಧನದ ಪರಿಣಾಮ ಈಗ ಕಾಣಿಸುತ್ತಿದೆ. ಕಳೆದ ಕೆಲವು ದಿನಗಳಿಂದ ಅಂತಹ ಯಾವುದೇ ಹಿಂಸಾಚಾರದ ಘಟನೆಗಳು ವರದಿಯಾಗಿಲ್ಲ. ಕಾನೂನಿನ ಆಳ್ವಿಕೆ ಇದೆ ಎಂಬುದು ಜನರಿಗೆ ಅರಿವಾಗಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಹಾಗೂ ಶಾಂತಿ ನೆಲೆಸುವಂತೆ ಮಾಡುವುದು ನನ್ನ ಕರ್ತವ್ಯ, ಅದನ್ನು ನಾನು ಮಾಡಿದ್ದೇನೆ,” ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಸಿಯಾಂಗ್ ಮೇಲ್ದಂಡೆ ವಿವಿಧೋದ್ದೇಶ ಯೋಜನೆ ಎಂಬುದು ಅರುಣಾಚಲ ಪ್ರದೇಶದ ಸಿಯಾಂಗ್ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಲಾಗಿರುವ ಬೃಹತ್ ಜಲವಿದ್ಯುತ್ ಮತ್ತು ನೀರು ಸಂಗ್ರಹಣಾ ಅಣೆಕಟ್ಟು ಯೋಜನೆಯಾಗಿದೆ. ಸುಮಾರು 11,200 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದೊಂದಿಗೆ, ರಾಷ್ಟ್ರೀಯ ಜಲವಿದ್ಯುತ್ ನಿಗಮ (NHPC) ಈ ಯೋಜನೆಯ ಅನುಷ್ಠಾನದ ಹೊಣೆ ಹೊತ್ತಿದೆ.
ಸಿಯಾಂಗ್ ಕಣಿವೆಯಲ್ಲಿ ವಾಸಿಸುವ ಪ್ರಮುಖ ಬುಡಕಟ್ಟು ಸಮುದಾಯವಾದ ‘ಆದಿ’ ಬುಡಕಟ್ಟು ಜನರು ಮತ್ತು ‘ಸಿಯಾಂಗ್ ಸ್ಥಳೀಯ ರೈತರ ವೇದಿಕೆ’ ಈ ಯೋಜನೆಯನ್ನು ವಿರೋಧಿಸುತ್ತಿವೆ.
ಈ ಬೃಹತ್ ಅಣೆಕಟ್ಟು ನಿರ್ಮಾಣವಾದರೆ ಸಿಯಾಂಗ್ ಕಣಿವೆಯ ಹತ್ತಾರು ಹಳ್ಳಿಗಳು, ಫಲವತ್ತಾದ ಕೃಷಿ ಭೂಮಿ ಮತ್ತು ಪೂರ್ವಜರ ಆಸ್ತಿ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಲಿವೆ. ಇದು ತಮ್ಮ ಅಸ್ತಿತ್ವ ಮತ್ತು ಸಂಸ್ಕೃತಿಯನ್ನೇ ನಾಶಮಾಡುತ್ತದೆ ಎಂಬುದು ಸ್ಥಳೀಯರ ಆತಂಕ.
ಅರುಣಾಚಲ ಪ್ರದೇಶವು ಅತಿ ಹೆಚ್ಚು ಭೂಕಂಪನ ಸಂಭವಿಸುವ ‘ಸೆಸ್ಮಿಕ್ ಝೋನ್-5’ ವ್ಯಾಪ್ತಿಯಲ್ಲಿ ಬರುತ್ತದೆ. ಇಂತಹ ಸೂಕ್ಷ್ಮ ಹಿಮಾಲಯದ ಪ್ರದೇಶದಲ್ಲಿ 280 ಮೀಟರ್ ಎತ್ತರದ ಬೃಹತ್ ಅಣೆಕಟ್ಟು ನಿರ್ಮಿಸಿದರೆ ಭೂಕುಸಿತ, ಹಿಮನದಿ ಸ್ಫೋಟ ಮತ್ತು ಭೂಕಂಪನದಂತಹ ಭೀಕರ ದುರಂತಗಳು ಸಂಭವಿಸಬಹುದು ಎಂದು ಪರಿಸರ ತಜ್ಞರು ಮತ್ತು ಸ್ಥಳೀಯರು ಎಚ್ಚರಿಸಿದ್ದಾರೆ.
ಸಿಯಾಂಗ್ ನದಿಯ ನೈಸರ್ಗಿಕ ಹರಿವಿಗೆ ಅಡ್ಡಿಯಾಗುವುದರಿಂದ ಅಲ್ಲಿನ ಅಪರೂಪದ ಜೀವವೈವಿಧ್ಯ ನಾಶವಾಗುತ್ತದೆ. ಕೃಷಿ ಮತ್ತು ನದಿಯನ್ನೇ ನಂಬಿ ಬದುಕುತ್ತಿರುವ ಸಾವಿರಾರು ಕುಟುಂಬಗಳ ಜೀವನೋಪಾಯ ಕಸಿದುಕೊಂಡಂತಾಗುತ್ತದೆ.
ಯೋಜನೆಯ ಸಮೀಕ್ಷೆ ಮತ್ತು ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ತಮ್ಮ ಸಾಂಪ್ರದಾಯಿಕ ಗ್ರಾಮ ಸಭೆಗಳಾದ ‘ಕೆಬಾಂಗ್’ ಮೂಲಕ ಒಪ್ಪಿಗೆ ಪಡೆದಿಲ್ಲ, ಬದಲಾಗಿ ಪೊಲೀಸ್ ಮತ್ತು ಅರೆಸೇನಾ ಪಡೆಗಳನ್ನು ಬಳಸಿ ಯೋಜನೆಯನ್ನು ಬಲವಂತವಾಗಿ ಹೇರಲಾಗುತ್ತಿದೆ ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ.
ಒಟ್ಟಾರೆಯಾಗಿ, ಸ್ಥಳೀಯ ಬುಡಕಟ್ಟು ಸಮುದಾಯಕ್ಕೆ ಈ ಯೋಜನೆ ‘ತಮ್ಮ ನೆಲ, ಸಂಸ್ಕೃತಿ ಮತ್ತು ಅಸ್ತಿತ್ವದ ಉಳಿವಿನ’ ಪ್ರಶ್ನೆಯಾಗಿ ಪರಿಣಮಿಸಿದೆ.




