ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸವಣಾಲು ಗ್ರಾಮದ ಹಿತ್ತಿಲಪೇಲದಲ್ಲಿ ನದಿ ದಾಟದಂತೆ ಬ್ಯಾನರ್ ಅಳವಡಿಸಿರುವುದು ಮೂಲನಿವಾಸಿ ಮಲೆಕುಡಿಯ ಕುಟುಂಬಗಳಿಗೆ ದಿಗ್ಬಂಧನ ವಿಧಿಸಿದಂತಾಗಿದೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ಘಟಕದ ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ್ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಿತ್ತಿಲಪೇಲದಲ್ಲಿ ಸುಮಾರು ಎರಡು ಶತಮಾನಗಳಿಂದ 9 ಆದಿವಾಸಿ ಮಲೆಕುಡಿಯ ಕುಟುಂಬಗಳು ವಾಸಿಸುತ್ತಿದ್ದು, ಕೃಷಿಯನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿವೆ. ಆದರೆ ಇಂದಿಗೂ ರಸ್ತೆ, ಸೇತುವೆ, ವಿದ್ಯುತ್ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳು ಈ ಕುಟುಂಬಗಳಿಗೆ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಜೂನ್ 15ರಂದು ಇದೇ ಪ್ರದೇಶದಲ್ಲಿ ಇಬ್ಬರು ಯುವಕರು ದ್ವಿಚಕ್ರ ವಾಹನ ಸಮೇತ ನದಿಯ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಘಟನೆಯ ಬಳಿಕ ತಾಲೂಕು ಹಾಗೂ ಜಿಲ್ಲಾ ಆಡಳಿತದ ಅಧಿಕಾರಿಗಳು, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಸೇರಿದಂತೆ ಹಲವರು ಸ್ಥಳಕ್ಕೆ ಭೇಟಿ ನೀಡಿ ಶಾಶ್ವತ ಸೇತುವೆ ನಿರ್ಮಿಸುವ ಭರವಸೆ ನೀಡಿದ್ದರು. ಆದರೆ ಒಂದು ವರ್ಷ ಕಳೆದರೂ ಸೇತುವೆ ನಿರ್ಮಾಣಕ್ಕೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ದೂರಿದ್ದಾರೆ.
ಪ್ರಸ್ತುತ ಭಾರೀ ಮಳೆಯಿಂದ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿರುವ ಹಿನ್ನೆಲೆಯಲ್ಲಿ “ನದಿ ತುಂಬಿ ಹರಿಯುತ್ತದೆ, ನದಿ ದಾಟುವುದು ನಿಷೇಧಿಸಲಾಗಿದೆ” ಎಂಬ ಬ್ಯಾನರ್ ಅಳವಡಿಸಲಾಗಿದೆ. ಆದರೆ ಇದೇ ನದಿ ದಾಟಿಯೇ ಕೂಲಿ ಕೆಲಸಕ್ಕೆ ತೆರಳುವುದು, ದಿನನಿತ್ಯದ ಅಗತ್ಯ ವಸ್ತುಗಳನ್ನು ತರುವುದು ಮತ್ತು ಹೊರಜಗತ್ತಿನೊಂದಿಗೆ ಸಂಪರ್ಕ ಸಾಧಿಸುವುದು ಈ ಕುಟುಂಬಗಳಿಗೆ ಅನಿವಾರ್ಯವಾಗಿದೆ. ಪರ್ಯಾಯ ವ್ಯವಸ್ಥೆ ಮಾಡದೆ ನದಿ ದಾಟಬಾರದು ಎಂದು ಸೂಚಿಸುವುದು ಆದಿವಾಸಿಗಳ ಬದುಕನ್ನೇ ಸಂಕಷ್ಟಕ್ಕೆ ತಳ್ಳಿದಂತಾಗಿದೆ ಎಂದು ಜಯಾನಂದ ಪಿಲಿಕಲ್ ಆರೋಪಿಸಿದ್ದಾರೆ.
ಸ್ವಾತಂತ್ರ್ಯಕ್ಕೆ 79 ವರ್ಷಗಳಾದರೂ ಆದಿವಾಸಿಗಳಿಗೆ ಕನಿಷ್ಠ ಮೂಲಸೌಕರ್ಯ ಒದಗಿಸಲು ವಿಫಲವಾದ ಆಡಳಿತ ವ್ಯವಸ್ಥೆ ಈಗ ನದಿ ದಾಟದಂತೆ ಬ್ಯಾನರ್ ಹಾಕುವ ಮೂಲಕ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ. ಜನಪ್ರತಿನಿಧಿಗಳು ಆದಿವಾಸಿಗಳನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಂಡಿದ್ದು, ಅಭಿವೃದ್ಧಿಯ ಭರವಸೆಗಳನ್ನು ಈಡೇರಿಸಿಲ್ಲ ಎಂದು ಅವರು ಟೀಕಿಸಿದ್ದಾರೆ.
ನದಿ ದಾಟಬಾರದು ಎಂದು ಸೂಚನೆ ನೀಡಿರುವ ಅಧಿಕಾರಿಗಳು, ಈ ಕುಟುಂಬಗಳು ದಿನನಿತ್ಯದ ಬದುಕನ್ನು ಹೇಗೆ ಸಾಗಿಸಬೇಕು ಎಂಬುದಕ್ಕೂ ಉತ್ತರ ನೀಡಬೇಕು. ಸರ್ಕಾರ ತಕ್ಷಣ ಶಾಶ್ವತ ಸೇತುವೆ ನಿರ್ಮಾಣಕ್ಕೆ ಮುಂದಾಗದಿದ್ದರೆ ಆದಿವಾಸಿ ಸಮುದಾಯದ ಪರವಾಗಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಜಯಾನಂದ ಪಿಲಿಕಲ್ ಎಚ್ಚರಿಕೆ ನೀಡಿದ್ದಾರೆ.





