ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ, ಗಾನ ಕೋಗಿಲೆ, ‘ಜಾನಕಿಯಮ್ಮ’ ಎಂದೇ ಪ್ರಸಿದ್ಧರಾದ ಎಸ್ ಜಾನಕಿ ಅವರು 11 ಜುಲೈ, ಶನಿವಾರ ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 88 ವರ್ಷವಾಗಿತ್ತು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ನಿಧನದ ಸುದ್ದಿಯನ್ನು ಮೊಮ್ಮಗಳು ಅಪ್ಸರಾ ವೈದ್ಯುಲ ಪೋಸ್ಟ್ ಮೂಲಕ ಖಚಿತಪಡಿಸಿದ್ದು, “ಶಾಂತಿಯುತವಾಗಿ ಇಹಲೋಕ ತ್ಯಜಿಸಿದರು” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಎಂ ಎಸ್ ಉಮೇಶ್- ಹತ್ತು ಕಟ್ಟುವ ಜೊತೆಗೆ ಮುತ್ತು ಕಟ್ಟಿದ ಕಲಾವಿದ
“ನನ್ನ ಪ್ರೀತಿಯ ಅಜ್ಜಿ ಹಾಗೂ ಖ್ಯಾತ ಗಾಯಕಿ ಎಸ್ ಜಾನಕಿ ಅವರು ಇಂದು ನಮ್ಮನ್ನು ಅಗಲಿದ್ದಾರೆ ಎಂಬ ಸುದ್ದಿಯನ್ನು ಅತ್ಯಂತ ಆಳವಾದ ದುಃಖದೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಕುಟುಂಬದವರ ಪ್ರೀತಿಯ ಮಡಿಲಲ್ಲಿ ಅವರು ಶಾಂತಿಯುತವಾಗಿ ಕೊನೆಯುಸಿರೆಳೆದರು” ಎಂದು ಅಪ್ಸರಾ ಬರೆದುಕೊಂಡಿದ್ದಾರೆ.
ಹಾಗೆಯೇ, “ಇಡೀ ಜಗತ್ತಿಗೆ ಅವರು ಅಸಂಖ್ಯಾತ ನೆನಪುಗಳನ್ನು ನೀಡಿರುವ ಅತ್ಯಂತ ಶ್ರೇಷ್ಠ ಧ್ವನಿ ಅವರದ್ದು. ಆದರೆ ನಮಗೆ ಅವರು ಪ್ರೀತಿ, ವಿನಮ್ರತೆ, ದಯೆ ಮತ್ತು ಕರುಣೆಯ ಸಾಕಾರ ಮೂರ್ತಿಯಾಗಿದ್ದ ಅಜ್ಜಿಯಾಗಿದ್ದರು. ಅವರ ಗುಣಗಳು ನಮ್ಮೊಂದಿಗೆ ಸದಾ ಉಳಿಯಲಿವೆ” ಎಂದು ಅಜ್ಜಿಯೊಂದಿಗಿನ ಒಡನಾಟವನ್ನು ನೆನೆದಿದ್ದಾರೆ.
ಆರು ದಶಕಗಳ ಸಂಗೀತ ಪಯಣ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರಿನಲ್ಲಿ ಜನಿಸಿದ ಎಸ್. ಜಾನಕಿ ಅವರು ತಮ್ಮ ಮೂರನೇ ವಯಸ್ಸಿನಲ್ಲೇ ಸಂಗೀತ ಕಲಿಯಲು ಆರಂಭಿಸಿದ್ದರು. 1957ರಲ್ಲಿ ತಮಿಳು ಚಿತ್ರದ ಮೂಲಕ ಹಿನ್ನೆಲೆ ಗಾಯನ ಆರಂಭಿಸಿದ ಜಾನಕಿಯಮ್ಮ, ಸುಮಾರು ಆರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗವನ್ನು ಆಳಿದವರು.
ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಭಾರತದ 20ಕ್ಕೂ ಹೆಚ್ಚು ಭಾಷೆಗಳಲ್ಲಿ 48,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ‘ಎಕ್ಸ್‌ಪ್ರೆಶನ್ ಕ್ವೀನ್’ (ಭಾವಪ್ರಧಾನ ಗಾಯಕಿ) ಎಂದೇ ಹೆಸರುವಾಸಿಯಾಗಿದ್ದರು. ‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ‘ಬಿಸಿಲಾದರೇನು ಮಳೆಯಾದರೇನು’ ಎಂಬ ಜನಪ್ರಿಯ ಹಾಡುಗಳಿಗೆ ಧ್ವನಿಯಾದವರು. ಮೈಸೂರು ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.
ತಮ್ಮ ಗಾನ ಸುಧೆಗೆ ಅವರು 4 ರಾಷ್ಟ್ರ ಪ್ರಶಸ್ತಿಗಳು ಹಾಗೂ ವಿವಿಧ ರಾಜ್ಯ ಸರ್ಕಾರಗಳ ಅಸಂಖ್ಯಾತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. ಈ ಹಿಂದೆ ಕೇಂದ್ರ ಸರ್ಕಾರ ಅವರಿಗೆ ‘ಪದ್ಮಭೂಷಣ’ ಪ್ರಶಸ್ತಿ ಘೋಷಿಸಿದಾಗ, ದಕ್ಷಿಣ ಭಾರತದ ಕಲಾವಿದರನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸುತ್ತದೆ ಎಂದು ವಿರೋಧಿಸಿ ಆ ಪ್ರಶಸ್ತಿಯನ್ನು ನಿರಾಕರಿಸುವ ಮೂಲಕ ತಮ್ಮ ಸ್ವಾಭಿಮಾನವನ್ನು ಮೆರೆದಿದ್ದರು.




