ಶಿರ್ಲಾಲು ಗ್ರಾಮದಲ್ಲಿ ಎಸ್‌ಐಆರ್ (Special Intensive Revision) ಕಾರ್ಯದ ನಿಮಿತ್ತ ಮನೆಗೆ ತೆರಳಿದ್ದ ದಲಿತ ಸಮುದಾಯದ ಬಿಎಲ್ಒ ಅವರಿಗೆ ಜಾತಿ ನಿಂದನೆ ಮಾಡಿ ಮನೆಯೊಳಗೆ ಪ್ರವೇಶ ನಿರಾಕರಿಸಿದ ಆರೋಪದಡಿ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಬಿಎಲ್ಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಜುಲೈ 6ರಂದು ಬೆಳಿಗ್ಗೆ 11:30ಕ್ಕೆ ಎಎಲ್ಒ ಮಾಧವ ಅವರೊಂದಿಗೆ ಶಿರ್ಲಾಲು ಗ್ರಾಮದ ಪಲ್ಲದೋಡಿ ಕಾಳಿಕಾಂಬ ನಿವಾಸಿ ಯಶೋಧ ಆಚಾರಿ ಅವರ ಮನೆಗೆ ಎಸ್‌ಐಆರ್ ಕಾರ್ಯಕ್ಕಾಗಿ ತೆರಳಿದ್ದರು.
ಈ ವೇಳೆ, “ನೀನು ಅಲ್ಲಿಯೇ ನಿಲ್ಲು, ನಿಮ್ಮ ಜಾತಿಯವರು ಇಲ್ಲಿಗೆ ಬರುವುದಿಲ್ಲ” ಎಂದು ಹೇಳಿ ಮನೆಯ ಸಿಟ್‌ಔಟ್‌ಗೆ ಪ್ರವೇಶ ನೀಡದೆ ಮೆಟ್ಟಿಲು ಬಳಿಯೇ ನಿಲ್ಲಿಸಿ ಅವಮಾನಿಸಿ ಜಾತಿ ನಿಂದನೆ ಮಾಡಲಾಗಿದೆ ಎಂದು ಬಿಎಲ್ಒ ಅವರು ಜುಲೈ 7ರಂದು ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಯಶೋಧ ಆಚಾರಿ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ-2015ರ ಕಲಂ 3(1)(r) ಹಾಗೂ 3(2)(va) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.





