ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅನುದಾನವನ್ನು ದುರ್ಬಳಕೆ ಮಾಡುತ್ತಿರುವ ಸರ್ಕಾರದ ನಡೆ ಖಂಡನೀಯ. ಯಾವುದೇ ಕಾರಣಕ್ಕೂ ಎಸ್‌ಸಿ.ಎಸ್‌ಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಬಾರದು ಎಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಯಾದಗಿರಿಯಲ್ಲಿ ಪ್ರತಿಭಟನೆ ನಡೆಸಿದ ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ರಾಜ್ಯ ಕಾಂಗ್ರೆಸ್ ಸರ್ಕಾರ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಜನತೆಗೆ ನೀಡಿರುವ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಗೊಳಿಸಲು ಎಸ್‌ಸಿ/ಎಸ್‌ಟಿ ಸಮುದಾಯದ ಅಭಿವ್ರದ್ದಿಗಾಗಿ ಮೀಸಲಿರುವ ಗಿರಿಜನ ಉಪಯೋಜನೆಯ ಎಸ್‌ಇಎಸ್‌ಪಿ/ಟಿಎಸ್‌ಪಿ ಅನುದಾನದಲ್ಲಿ 11,000 ಕೋಟಿ ಮೊತ್ತವನ್ನು ಬಳಸಿಕೊಳ್ಳಲು ಮುಂದಾಗಿರುವುದು ದುರಂತ” ಎಂದಿದ್ದಾರೆ.
“ಕಳೆದ ತಿಂಗಳಲ್ಲಿ ಸರ್ಕಾರವೇ ಎಲ್ಲ ಸಚಿವರ ಸಭೆ ಕರೆದು ಎಸ್‌ಸಿ/ಎಸ್‌ಟಿ ಸಮುದಾಯದ ಅಭಿವ್ರದ್ದಿಗಾಗಿ ಮೀಸಲಿರುವ ಗಿರಿಜನ ಉಪಯೋಜನೆಯ ಎಸ್‌ಇಎಸ್‌ಪಿ/ಟಿಎಸ್‌ಪಿ ಅನುದಾನ ಕೇವಲ ದಲಿತ ಜನಾಂಗದ ಅಭಿವ್ರದ್ದಿಗೆ ಮಾತ್ರ ಮೀಸಲಾಗಬೇಕು. ಬೇರೆ ಯೋಜನೆಗಳಿಗೆ ಬಳಕೆಯಾಗಬಾರದೆಂದು 7ಡಿ ಕಾಯ್ದೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಆದರೆ, ಆದೇಶ ಹೊರಡಿಸಿದ ತಿಂಗಳಲ್ಲಿಯೇ ತನ್ನದೇ ಆದೇಶವನ್ನು ಗಾಳಿಗೆ ತೂರಿ ದಲಿತರ ಹಣವನ್ನು ದುರುಪಯೋಗಕ್ಕೆ ಸರ್ಕಾರ ಮುಂದಾಗಿರುವುದು ಸರಿಯಲ್ಲ” ಎಂದು ಕಿಡಿಕಾರಿದ್ದಾರೆ.
“ಕಳೆದ 2018ರಲ್ಲಿಯೂ ಕೂಡಾ ಕಾಂಗ್ರೆಸ್ ರೈತರ ಸಾಲ ಮನ್ನಾ ಮಾಡಲು ಎಸ್‌ಇಎಸ್‌ಪಿ/ಟಿಎಸ್‌ಪಿ ಅನುದಾನದಲ್ಲಿ ಒಟ್ಟು 929.41 ಕೋಟಿ ರೂ. ಬಳಕೆ ಮಾಡಿಕೊಂಡಿದೆ. ಅದಲ್ಲದೇ, ಅದೇ 2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ರಾಜ್ಯಕೀಯ ಪರಸ್ಥಿತಿಗಳ ಬಗ್ಗೆ ಮಾಹಿತಿ ಕಲೆ ಹಾಕಲು ಪೂರಕ ಅಂದಾಜಿನಲ್ಲಿ 10 ಕೋಟಿ ಅನುದಾನವನ್ನು ಪೋಲೀಸ್ ಇಲಾಖೆಗೆ ವರ್ಗಾಯಿಸಿ ದಲಿತರ ಮೀಸಲು ಹಣವನ್ನ ದುರ್ಬಳಕೆ ಮಾಡಿಕೊಂಡಿದೆ. ಚುನಾವಣಾ ಕರ್ತವ್ಯಕ್ಕೆ ಪೋಲೀಸರನ್ನು ನಿಯೋಜಿಸುವದಕ್ಕಾಗಿ 10 ಕೋಟಿ ದಲಿತರ ಅನುದಾನವನ್ನು ದುರ್ಬಳಕೆ ಮಾಡಿಕೊಂಡು ದಲಿತರಿಗೆ ವಂಚಿಸಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕೂಡಲೇ ರಾಜ್ಯ ಸರ್ಕಾರ ದಲಿತರ ಅನುದಾನವನ್ನು ಬೇರೆ ಯೋಜನೆಗಳಿಗೆ ಬಳಸುವದನ್ನು ನಿಲ್ಲಿಸಬೇಕು. ದಲಿತರ ಅಭಿವ್ರದ್ದಿಗೆ ಆಧ್ಯತೆ ನೀಡಬೇಕು. ಇಲ್ಲದೇ ಹೋದಲ್ಲಿ ಸರ್ಕಾರದ ವಿರುದ್ದ ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ರಾಹುಲ್ ಕೊಲ್ಲೂರ್ಕರ್, ಜುಮ್ಮಾಣ್ಣ ಗುಡಿಮ, ಮೌನೇಶ್ ಯಡ್ಡಳ್ಳಿ, ಮಲ್ಲಿಕಾರ್ಜುನ್ ನಾಟೇಕಾರ್, ವೀರೂಪಾಕ್ಷ, ಭೀಮರಾಯ, ಭೀಮಾಶಂಕರ್, ಬಸ್ಸು ಬೀರನೂರ್, ಆಂಜನೇಯ, ರಮೇಶ್, ಮಲ್ಲು, ಆನೇಕರು ಇದ್ದರು.