ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳು ಆರಂಭಿಸುವ ನಿರ್ಧಾರ ಕೈಬಿಡುವಂತೆ ಆಗ್ರಹಿಸಿ ಸಿಐಟಿಯು ನೇತೃತ್ವದ ತಾಲೂಕು ಅಂಗನವಾಡಿ ಕಾರ್ಯಕರ್ತರು ಪೌರಾಡಳಿತ ಸಚಿವ ರಹೀಂ ಖಾನ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬೀದರ್ ನಗರದ ಚಿದ್ರಿ ಮತ್ತು ಮೈಲೂರು ರಿಂಗ್ ರಸ್ತೆಯಲ್ಲಿರುವ ಸಚಿವ ರಹೀಂ ಖಾನ್ ಅವರ ಕಚೇರಿಯ ಎದುರು ನೂರಾರು ಅಂಗನವಾಡಿ ಕಾರ್ಯಕರ್ತರು ಕಳೆದ 3 ದಿನಗಳಿಂದ ಧರಣಿ ಸತತ್ಯಾಗ್ರಹ ನಡೆಸುತ್ತಿದ್ದಾರೆ.
“ರಾಜ್ಯ ಸರ್ಕಾರ ಕಳೆದ ವರ್ಷದಿಂದ ಜಾರಿಗೆ ತಂದಿರುವ ಶಿಕ್ಷಣ ನೀತಿಯಿಂದ ಗ್ರಾಮೀಣ ಭಾಗದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಹಾಜರಾತಿ ಇಲ್ಲದೇ ಅಂಗನವಾಡಿಗಳು ಮುಚ್ಚುವ ಸ್ಥಿತಿ ಬಂದಿರುವುದಲ್ಲದೇ, ಅಂಗನವಾಡಿ ಸಹಾಯಕಿಯರು ಮತ್ತು ಕಾರ್ಯಕರ್ತರು ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕಲ್ಯಾಣ ಕರ್ನಾಟಕ ಭಾಗದ 1,008 ಸರ್ಕಾರಿ ಶಾಲೆಗಳಲ್ಲಿ ಕೆಕೆಆರ್‌ಡಿಬಿ ಅಡಿಯಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸುವ ಆದೇಶ ಹಿಂಪಡೆದು, ಅಂಗನವಾಡಿ ಕೇಂದ್ರಗಳಲ್ಲಿಯೇ ಈ ತರಗತಿಗಳನ್ನು ಆರಂಭಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸ್ನೇಹಿತರೊಂದಿಗೆ ಈಜಲು ಹೋದ ಬಾಲಕ ನೀರುಪಾಲು
ಪ್ರತಿಭಟನೆಯಲ್ಲಿ ಸಿಐಟಿಯು ತಾಲೂಕು ಅಧ್ಯಕ್ಷ ಶಕುಂತಲಾ ನರಸಿಂಗ ಸೋನಿ ಸೇರಿದಂತೆ ಅಂಗನವಾಡಿ ನೌಕರರ ಸಂಘದ ಪ್ರಮುಖರಾದ ಶ್ರೀದೇವಿ ಚೂಡೆ, ಉಷಾ ಗುತ್ತೆದಾರ, ಚನ್ನಮ್ಮ ಕೆಂಪೆ, ಸುಮಿತ್ರಾ ಪೂಜಾರಿ, ವಿಜಯಲಕ್ಷ್ಮಿ ಹುಮನಾಬಾದ, ಪ್ರಭು ಸಂತೋಷಕರ್, ಜಗದೇವಿ ಪತ್ರಿ, ಶಾಂತಾ ನಾಗೂರೆ ಸೇರಿ ನೂರಾರು ಕಾರ್ಯಕರ್ತೆಯರು ಇದ್ದರು.