ಮೈಸೂರು ಜಿಲ್ಲೆ, ಹೆಗ್ಗಡದೇವನಕೋಟೆಯ ಅಂಬೇಡ್ಕರ್ ಭವನದಲ್ಲಿ ಎಸ್‌ಐಆರ್ ವಿರೋಧಿ ಕರ್ನಾಟಕ ಸಂಘಟನೆಯ ವತಿಯಿಂದ ಸಾರ್ವಜನಿಕ ಸಭೆ ನಡೆಯಿತು. ಸಭೆಯಲ್ಲಿ ಪಿಪಿಟಿ ಪ್ರದರ್ಶನದ ಮೂಲಕ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಿಂದ ಉಂಟಾಗುತ್ತಿರುವ ಸಮಸ್ಯೆಗಳು, ಮತದಾರರ ಹಕ್ಕುಗಳ ಮೇಲೆ ಅದರ ಪರಿಣಾಮಗಳು ಹಾಗೂ ಸಂಘಟನೆಯ ಪ್ರಮುಖ ಆಗ್ರಹಗಳ ಕುರಿತು ಸಾರ್ವಜನಿಕರೊಂದಿಗೆ ಸಂವಾದ ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ಮುಖಂಡರು, ಭಾರತದ ಸಂವಿಧಾನದ 324ನೇ ವಿಧಿಯನ್ವಯ ತನ್ನ ಕರ್ತವ್ಯಗಳನ್ನು ನಿರ್ವಹಿಸಬೇಕಾದ ಭಾರತೀಯ ಚುನಾವಣಾ ಆಯೋಗ (ECI) ಮತದಾರರ ಪಟ್ಟಿಯ ನಿರ್ವಹಣೆಯಲ್ಲಿ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಎಂದು ಆರೋಪಿಸಿದರು. ಎಲ್ಲ ಅರ್ಹ ನಾಗರಿಕರನ್ನು ಒಳಗೊಂಡ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಲ್ಲಿ ಎಸ್‌ಐಆರ್ ಪ್ರಕ್ರಿಯೆ ವಿಫಲವಾಗಿದ್ದು, ಕಳೆದ ಒಂದು ವರ್ಷದ ಅನುಭವ ಅದರ ಅಸಮರ್ಥತೆಯನ್ನು ಬಯಲಿಗೆಳೆದಿದೆ ಎಂದು ಅಭಿಪ್ರಾಯಪಟ್ಟರು.

ಮತದಾರರ ಪಟ್ಟಿಯಿಂದ ಅರ್ಹರ ಹೆಸರುಗಳು ಕೈಬಿಡುವ ಸಾಧ್ಯತೆ, ದಾಖಲೆಗಳ ಪರಿಶೀಲನೆಯಲ್ಲಿ ಉಂಟಾಗುತ್ತಿರುವ ಗೊಂದಲ ಹಾಗೂ ಸಾಮಾನ್ಯ ನಾಗರಿಕರಿಗೆ ಆಗುತ್ತಿರುವ ತೊಂದರೆಗಳ ಕುರಿತು ಸಭೆಯಲ್ಲಿ ವಿವರವಾಗಿ ಚರ್ಚಿಸಲಾಯಿತು. ಪ್ರಜಾಪ್ರಭುತ್ವದ ಮೂಲಾಧಾರವಾದ ಮತದಾನದ ಹಕ್ಕು ಯಾವುದೇ ಕಾರಣಕ್ಕೂ ಕಸಿಯಲ್ಪಡಬಾರದು ಎಂದು ಒತ್ತಾಯಿಸಲಾಯಿತು.
ಇದೇ ವೇಳೆ, ಮತದಾರರ ಮತ್ತು ನಾಗರಿಕರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಯ ವಿಚಾರದಲ್ಲಿ ದೇಶದ ಸುಪ್ರೀಂ ಕೋರ್ಟ್ ಬಗ್ಗೆ ಜನರಲ್ಲಿ ನಿರಾಶೆ ಮೂಡಿರುವುದಾಗಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಎಸ್‌ಐಆರ್ ಸಂಬಂಧ ಬಾಕಿ ಇರುವ ವಿಚಾರಣೆಯನ್ನು ಶೀಘ್ರ ಪೂರ್ಣಗೊಳಿಸಿ, ಮತದಾರರ ಹಕ್ಕುಗಳನ್ನು ರಕ್ಷಿಸುವಂತಹ ಸ್ಪಷ್ಟ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಬೇಕು ಎಂದು ಆಗ್ರಹಿಸಲಾಯಿತು.

ಮತದಾರರ ಪಟ್ಟಿಗಳ ನವೀಕರಣ ಪ್ರಕ್ರಿಯೆಯನ್ನು ಮುಂದುವರಿಸುವ ಮೊದಲು ಸಮಗ್ರ ಮರುಪರಿಶೀಲನೆ ನಡೆಸಿ, ಕಂಡುಬಂದಿರುವ ಲೋಪದೋಷಗಳನ್ನು ತಿದ್ದುಪಡಿ ಮಾಡಬೇಕು. ಈಗಾಗಲೇ ಆಗಿರುವ ತಪ್ಪುಗಳಿಂದ ತೊಂದರೆಗೊಳಗಾದ ಮತದಾರರಿಗೆ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಈ ಸುದ್ದಿ ಓದಿದ್ದೀರಾ?ಹುಣಸೂರು | ಕೊಟ್ಟಿಗೆ ಕಾವಲು ಹಾಡಿಯಲ್ಲಿ ಎಸ್‌ಐಆರ್ ವಿರೋಧಿ ಜನಜಾಗೃತಿ ಕಾರ್ಯಕ್ರಮ
ಸಭೆಯಲ್ಲಿ ಜೀವಿಕ ಸಂಘಟನೆ ಸೇರಿದಂತೆ, ವಿವಿಧ ಜನಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.




