ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್ (ಐಪಿಯು) 2008ರಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಆಚರಣೆಯನ್ನು ಆರಂಭಿಸಿತು.
ಫಿಲಿಪೈನ್ಸ್ ಜನಚಳವಳಿಯ ಹೋರಾಟಗಾರ್ತಿ ಕೊರಾಜನ್ ಸಿ.ಅಕ್ವಿನೋ ‘ಪೀಪಲ್ ಪವರ್ ರೆವಲ್ಯೂಷನ್’ ಮೂಲಕ ಫರ್ಡಿನಾಂಡ್ ಮಾರ್ಕೋಸ್ನ 20 ವರ್ಷಗಳ ಸರ್ವಾಧಿಕಾರವನ್ನು ಕೊನೆಗೊಳಿಸಿ 1986ರ ಸೆಪ್ಟಂಬರ್ 15ರಂದು ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುತ್ತಾಳೆ. ಇದು ಗಂಡಾಳ್ವಿಕೆಯ ವಿರುದ್ಧದ ಹೆಣ್ಣಿನ ವಿಜಯದ ಸಂಕೇತವೂ ಕೂಡ.
ಹಾಗಾದರೆ ಈ ಕೊರಾಜನ್ ಸಿ.ಆಕ್ವಿನೋ ಯಾರು? ಸರ್ವಾಧಿಕಾರವನ್ನು ಮಣಿಸಿದರೂ ಮುಂದೆ ಆಕೆಯೂ ಬಂಡವಾಳಶಾಹಿ ಮತ್ತು ಭೂಮಾಲೀಕರ ಪರವಾದದ್ದೇಕೆ? ಯಾವ ಸರ್ವಾಧಿಕಾರಿಯನ್ನು ಆಕ್ವಿನೋ ಮಣಿಸಿದ್ದಳೋ ಆ ಫರ್ಡಿನಾಂಡ್ ಮಾರ್ಕೋಸ್ನ ಮಗನಾದ ಫರ್ಡಿನಾಂಡ್ ಭಾಂಗ್ ಬಾಂಗ್ ಮಾರ್ಕೋಸ್ ಅಧಿಕಾರಕ್ಕೆ ಬಂದಿರುವುದು ಏನನ್ನು ಸೂಚಿಸುತ್ತದೆ? ಈ ಸ್ಥಿತ್ಯಂತರವೇ ಇಂದಿನ ವರ್ತಮಾನದ ಪ್ರಜಾಪ್ರಭುತ್ವದ ಬಿಕ್ಕಟ್ಟುಗಳನ್ನು ಮುಂದಿಡುತ್ತದೆ.
ಆಗ್ನೇಯ ಏಷಿಯಾದ ದ್ವೀಪವಾದ ‘ರಿಪಬ್ಲಿಕ್ ಆಫ್ ದ ಫಿಲಿಪೈನ್ಸ್’ನ ಫರ್ಡಿನಾಂಡ್ ಮಾರ್ಕೋಸ್ ಕ್ರೋನಿ ಕ್ಯಾಪಿಟಲ್ಗಳ ಸಹಾಯದಿಂದ ‘ನಾನೇ ಈ ದೇಶದ ನಿಜವಾದ ಧೀರ’ ಎನ್ನುವ ನಂಬಿಕೆ ಹುಟ್ಟಿಸಿ, ವ್ಯಾಪಕ ಸುಳ್ಳು ಮತ್ತು ಹುಸಿ ಭರವಸೆಯನ್ನು ನೀಡಿ ಫಿಲಿಫೈನ್ಸ್ನಲ್ಲಿ ಸರ್ವಾಧಿಕಾರ ಸ್ಥಾಪಿಸುತ್ತಾನೆ. 1965ರಿಂದ 1986ರತನಕ ಅಕ್ಷರಶಃ ಸರ್ವಾಧಿಕಾರಿಯಾಗಿ ಆಳುತ್ತಾನೆ. ಮಾರ್ಕೋಸ್ನ ಆಡಳಿತವು ವ್ಯಾಪಕ ಭ್ರಷ್ಟಾಚಾರದಿಂದ ಕೂಡಿತ್ತು. ಆತನ ದುಂದುಗಾರಿಕೆ ಮತ್ತು ಕ್ರೌರ್ಯದಿಂದ ಇಡೀ ಫಿಲಿಪೈನ್ಸ್ ಜನರು ಉಸಿರುಗಟ್ಟಿದ್ದರು. ಈತನ ಆಡಳಿತದಲ್ಲಿ ಫಿಲಿಪೈನ್ಸ್ ಜನರು ತೀವ್ರ ಬಡತನದಲ್ಲಿ ನರಳಿದರು. ಮಾಧ್ಯಮಗಳ ಮೇಲೆ ಹಿಂಸಾತ್ಮಕ ದಾಳಿ ಮಾಡಿದನು. ಇದರಿಂದ ಬಹುಪಾಲು ಮಾಧ್ಯಮಗಳು ಮಾರ್ಕೋಸ್ನ ಅಡಿಯಾಳಾಗಿ ವಕಾಲತ್ತು ವಹಿಸಿದವು. 1981ರಲ್ಲಿ ಮೂರನೆಯ ಬಾರಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ವಂಚನೆ ಮಾಡಿ ಮರಳಿ ಅಧಿಕಾರ ಹಿಡಿದನು. ಆರ್ಥಿಕವಾಗಿ ತೀವ್ರ ಕುಸಿತ ಉಂಟಾಯಿತು. ವಿರೋಧ ಪಕ್ಷದ ನಾಯಕ ಆಕ್ವಿನೋ ಜೂನಿಯರ್ ಅವರ ಹತ್ಯೆ ಮಾಡಲಾಯಿತು.
ಈ ಹತ್ಯೆಯಿಂದ ಕಂಗೆಟ್ಟ ಆಕ್ವಿನೋ ಮಡದಿ ಕೊರಜಾನೋ ಜನಚಳವಳಿ ಕಟ್ಟಲು ಮುಂದಾಗುತ್ತಾಳೆ. ಈ ಹತ್ಯೆಯು ಸಾರ್ವಜನಿಕವಾಗಿ ಮಾರ್ಕೋಸ್ ಬಗ್ಗೆ ವ್ಯಾಪಕ ವಿರೋಧ ಭುಗಿಲೇಳುವಂತೆ ಮಾಡುತ್ತದೆ. ಜನರು ದಂಗೆಯೇಳಲು ಶುರುಮಾಡುತ್ತಾರೆ. ಇದನ್ನರಿತ ಮಾರ್ಕೋಸ್ 1986ರಲ್ಲಿ ಕ್ಷಿಪ್ರ ಚುನಾವಣೆ ಘೋಷಿಸುತ್ತಾನೆ. ಹೀಗೆ ಸಾಮೂಹಿಕ ವಂಚನೆ, ರಾಜಕೀಯ ಪ್ರಕ್ಷುಬ್ಧ ವಾತಾವರಣ, ಮಾನವ ಹಕ್ಕುಗಳ ಉಲ್ಲಂಘನೆ ಎಲ್ಲವೂ ಒಟ್ಟಾಗಿ ಫಿಲಿಪೈನ್ಸ್ನಲ್ಲಿ 1986ರ ‘ಪೀಪಲ್ ಪವರ್ ರೆವಲ್ಯೂಷನ್’ ನಡೆಯುತ್ತದೆ. ಈ ಕ್ರಾಂತಿಯ ಮುಂದಾಳುವಾಗಿ ಕೊರಜಾನೋ ಸಿ. ಆಕ್ವಿನೋ ಮುನ್ನಲೆಗೆ ಬರುತ್ತಾಳೆ. ಈ ಕ್ರಾಂತಿಯಿಂದಾಗಿ ಮಾರ್ಕೋಸ್ ಮಡದಿ ಮಕ್ಕಳೊಂದಿಗೆ ಹವಾಯಿ ದ್ವೀಪಕ್ಕೆ ಓಡಿಹೋಗುತ್ತಾನೆ. ಹೀಗೆ ಭೂಸುಧಾರಣೆಗಾಗಿ ಹೋರಾಡುತ್ತಿದ್ದ ಮಾವೋವಾದಿ ಕ್ರಾಂತಿಕಾರಿಗಳ ಬೆಂಬಲದಿಂದ ಆಕ್ವಿನೋ ಅಧಿಕಾರಕ್ಕೆ ಬರುತ್ತಾಳೆ.

1986ರ ಸೆಪ್ಟೆಂಬರ್ 15ರಂದು ಮಾರ್ಕೋಸ್ನ ಸರ್ವಾಧಿಕಾರವನ್ನು ಮಣಿಸಿ ಫಿಲಿಫೈನ್ಸ್ ಅನ್ನು ಮೊದಲ ಮಹಿಳಾ ಅಧ್ಯಕ್ಷೆಯಾಗಿ ಆಕ್ವಿನೋ ಅಧಿಕಾರ ವಹಿಸಿಕೊಳ್ಳುತ್ತಾಳೆ. ಈ ಮೂಲಕ ಏಷಿಯಾದ ಮೊದಲ ಮಹಿಳಾ ಅಧ್ಯಕ್ಷೆ ಎಂದು ಗುರುತಿಸಲ್ಪಡುತ್ತಾಳೆ. ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ನಂತರ ಕೈಗೊಂಡ ಮೊದಲ ಕಾರ್ಯವೆಂದರೆ, ಮಾರ್ಕೋಸ್ನ ಶತಕೋಟಿ ಡಾಲರ್ ಅಕ್ರಮ ಸಂಪತ್ತನ್ನು ವಶಪಡಿಸಿಕೊಂಡು ಜನಕಲ್ಯಾಣ ಕಾರ್ಯಗಳಿಗೆ ಯೋಜನೆ ರೂಪಿಸಿದ್ದು. 1973ರಲ್ಲಿ ಜಾರಿಯಾಗಿದ್ದ ಮಾರ್ಷಲ್ ಯುಗದ ಸರ್ವಾಧಿಕಾರಿ ಸಂವಿಧಾನವನ್ನು ರದ್ದುಗೊಳಿಸುತ್ತಾಳೆ. ನ್ಯಾಯವಾದಿ ಸಿಸಿಲಿಯಾ ಮುನೋಜ್-ಪಾಲ್ಮಾ ಅವರನ್ನು ಹೊಸ ಸಂವಿಧಾನ ರಚನೆಯ ಅಧ್ಯಕ್ಷೆಯನ್ನಾಗಿ ನೇಮಿಸುತ್ತಾಳೆ.
ಕರಡು ರಚನೆಯಾದ ನಂತರ ಫಿಲಿಪೈನ್ಸ್ನ ರಾಷ್ಟ್ರವ್ಯಾಪಿ ಜನಾಭಿಪ್ರಾಯ ಸಂಗ್ರಹಿಸಿ 1987ರ ಫೆಬ್ರವರಿ 2ರಂದು ಪ್ರಜಾಪ್ರಭುತ್ವದ ಸ್ವತಂತ್ರ ಸಂವಿಧಾನವನ್ನು ಜಾರಿಗೊಳಿಸಲಾಗುತ್ತದೆ. ಕ್ರೋನಿ ಕ್ಯಾಪಿಟಲ್ಗಳನ್ನು ನಿಯಂತ್ರಿಸಿ ಮಾರುಕಟ್ಟೆಯ ಉದಾರ ನೀತಿಯನ್ನು ಜಾರಿಗೊಳಿಸಿ ಆರ್ಥಿಕ ವಿಕೇಂದ್ರೀಕರಣಕ್ಕೆ ಬೆಂಬಲ ನೀಡಿದಳು.
ಜನವರಿ 22, 1987ರಂದು ರೈತರು ಭೂಸುಧಾರಣೆಗಾಗಿ ಶಾಂತಿಯುತ ಚಳವಳಿ ನಡೆಸಿದರು. ಆಗ ಪೊಲೀಸ್ ಮತ್ತು ನೌಕಾಪಡೆಯ ಗಡಿಮೀರಿದ ಕಾರಣಕ್ಕೆ ಗುಂಡುಹಾರಿಸಿದ ಪರಿಣಾಮ 12 ನಾಗರಿಕರು ಕೊಲ್ಲಲ್ಪಟ್ಟು 50 ಜನರು ಗಾಯಾಳುಗಳಾದರು. ಇದನ್ನೆ ಮೆಂಡಿಯೋಲಾ ಹತ್ಯಾಕಾಂಡ ಎಂದು ಗುರುತಿಸುತ್ತಾರೆ. ಆಕ್ವಿನೋ ರಾಜವಂಶದ ಪರಂಪರೆಯಿಂದ ಬಂದವಳು. ಅಪಾರ ಆಸ್ತಿಪಾಸ್ತಿ ಸಂಪತ್ತಿನ ಒಡತಿಯೂ ಆಗಿದ್ದವಳು. ಹೀಗಾಗಿ ಫಿಲಿಫೈನ್ಸ್ ಮಾವೋವಾದಿ ಕ್ರಾಂತಿಕಾರಿಗಳ ವಿರೋಧಕ್ಕೂ ಗುರಿಯಾಗುತ್ತಾಳೆ. ತನ್ನ ಸಂಪತ್ತಿನ ಶೇರುಗಳನ್ನು ಹಂಚುವ ಮೂಲಕ ಈ ವಿರೋಧವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಾಳೆ. ಜನಚಳವಳಿಯ ಒತ್ತಡ ಹೆಚ್ಚಿದಂತೆ ಕೃಷಿಯಲ್ಲಿ ಆಮೂಲಾಗ್ರ ಬದಲಾವಣೆ ತರಲು ಆಕೆ ಭೂ ಸುಧಾರಣೆಯನ್ನು ತರುತ್ತಾಳೆ. ಇದರಿಂದ ಜಮೀನ್ದಾರಿ ಬಲಾಢ್ಯರಿಂದ ಟೀಕೆಯನ್ನು ಎದುರಿಸುತ್ತಾಳೆ. ಇಷ್ಟಾಗಿಯೂ ಸಮಗ್ರ ಕೃಷಿ ಸುಧಾರಣ ಕಾಯ್ದೆ ಜಾರಿಗೊಳಿಸಿ ಭೂಮಾಲೀಕರಿಂದ ಭೂಮಿ ಇಲ್ಲದವರಿಗೆ ಭೂಮಿಯನ್ನು ಮರುಹಂಚಿಕೆ ಮಾಡಲು ಪ್ರಯತ್ನಿಸಿದಳು. ಈ ಕಾಯ್ದೆಯ ನಂತರ 5 ಹೆಕ್ಟೇರಿಗಿಂತ ಹೆಚ್ಚಿನ ಭೂಮಿಯನ್ನು ಯಾರೂ ಹೊಂದುವಂತಿರಲಿಲ್ಲ.
ಈ ಬಗೆಯ ಸುಧಾರಣೆಗಳು ಸಹಜವಾಗಿ ಬಲಾಢ್ಯ ಬಂಡವಾಳಶಾಹಿಗಳಿಗೆ ತೀವ್ರ ನಷ್ಟವಾಗತೊಡಗಿತು. ಮಾರ್ಕೋಸ್ ಬೆಂಬಲದಿಂದ 1986ರಿಂದ 1990ರತನಕ ಆಕ್ವಿನೋ ವಿರುದ್ಧ ಆಂತರಿಕ ದಂಗೆಗಳನ್ನು ಆಯೋಜಿಸತೊಡಗಿದರು. 1990ರಲ್ಲಿ ಸಂಭವಿಸಿದ ಲುಜಾನ್ ಭೂಕಂಪ, 1991ರ ಜ್ವಾಲಾಮುಖಿ ಸ್ಫೋಟ, 1991ರ ಕೊನೆಗೆ ಸಂಭವಿಸಿದ ಚಂಡಮಾರುತದಂತಹ ನೈಸರ್ಗಿಕ ವಿಕೋಪಗಳು ದೇಶದ ಆರ್ಥಿಕತೆಯನ್ನು ದುರ್ಬಲಗೊಳಿಸಿದವು. ಆಕ್ವಿನೋ ನಿಧಾನಕ್ಕೆ ಭೂಮಾಲೀಕರ ಮತ್ತು ಬಂಡವಾಳಶಾಹಿಗಳ ಪರ ವಾಲುತ್ತಾ ಕ್ರಾಂತಿಕಾರಿಗಳ ಸರಣಿ ಕೊಲೆಗಳನ್ನು ನಡೆಸತೊಡಗುತ್ತಾಳೆ.
ಪರಿಣಾಮವಾಗಿ 1992ರ ಅಧ್ಯಕ್ಷೀಯ ಚುನಾವಣೆಯಲ್ಲಿ ತನ್ನದೇ ಪಕ್ಷದ ಫಿಡೆಲ್ ವಿ.ರಾಮೋಸ್ ಅವರನ್ನು ತನ್ನ ಉತ್ತರಾಧಿಕಾರಿಯಾಗಿ ಬೆಂಬಲಿಸುತ್ತಾಳೆ. ನಂತರ ಪಿಲಿಫೈನ್ಸ್ನ ಸಾರ್ವಜನಿಕ ಚುನಾವಣೆಯಲ್ಲಿ ರಾಮೋಸ್ ಆಯ್ಕೆಯಾಗುತ್ತಾನೆ. ಜೂನ್ 30, 1992ರಂದು ಅಧಿಕಾರ ಹಸ್ತಾಂತರ ಮಾಡುತ್ತಾಳೆ. ಸರಕಾರ ನೀಡಿದ ಮರ್ಸಿಡಿಸ್ ಬೆಂಜ್ ಕಾರ್ ಸರಕಾರಕ್ಕೆ ನೀಡಿ ತನ್ನ ಸಾಮಾನ್ಯವಾದ ಟೊಯೋಟಾ ಕಾರೊಂದರಲ್ಲಿ ಮನೆಗೆ ಮರಳುತ್ತಾಳೆ. ಮುಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಜಾಪ್ರಭುತ್ವ, ಮಾನವ ಹಕ್ಕುಗಳು, ಮತ್ತು ಮಹಿಳಾ ಸಬಲೀಕರಣಕ್ಕಾಗಿ ದುಡಿಯುತ್ತಾಳೆ. ಮನಿಲಾದಲ್ಲಿ UNESCO ವರ್ಲ್ಡ್ ಕಮಿಷನ್ ಆನ್ ಕಲ್ಚರ್ ಅಂಡ್ ಡೆವಲಪ್ಮೆಂಟ್ನ 1994ರ ಸಭೆಯಲ್ಲಿ, ಬರ್ಮಾದ ಪ್ರಜಾಪ್ರಭುತ್ವ ನಾಯಕಿ ಆಂಗ್ ಸಾನ್ ಸೂಕಿಯನ್ನು ಬಂಧನದಿಂದ ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಭಾಷಣ ಮಾಡುತ್ತಾಳೆ.
ಆಕ್ವಿನೋ ತನ್ನ ಗಂಡನ ಹೆಸರಿನಲ್ಲಿ 2007ರಲ್ಲಿ Aquino PinoyME ಫೌಂಡೇಶನ್ ಅನ್ನು ಸ್ಥಾಪಿಸಿ ಬಡವರು ಮತ್ತು ನಿರಾಶ್ರಿತರಿಗೆ ನೆರವಾಗುವ ಸಾಮಾಜಿಕ ವಸತಿ ಯೋಜನೆಯನ್ನು ಕೈಗೊಳ್ಳುತ್ತಾಳೆ. ಲಾಭದ ಉದ್ದೇಶವಿಲ್ಲದೆ ಬಡವರಿಗೆ ಕಿರುಬಂಡವಾಳ ಸಾಲದ ಯೋಜನೆಗಳನ್ನು ಜನಪ್ರಿಯಗೊಳಿಸಿದರು. ಆ ನಂತರ ದೀರ್ಘಕಾಲೀನ ಕ್ಯಾನ್ಸರ್ನಿಂದ ಬಳಲಿ ಆಕ್ವಿನೊ ಅವರು 76ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಆಗಸ್ಟ್ 1, 2009ರಂದು ನಿಧನರಾದರು. ಪ್ರಜಾಪ್ರಭುತ್ವದ ಸಂಕೇತವಾಗಿ ಆಕ್ವಿನೋ ಅವರನ್ನು ಗುರುತಿಸುತ್ತಿದ್ದರೂ ನಂತರದ ಬೆಳವಣಿಗೆಯಲ್ಲಿ ಆಕೆ ಬಂಡವಾಳಶಾಹಿಯ ಪರವಾದ ಜನಚಳವಳಿಯನ್ನು ದಮನ ಮಾಡುವುದು, ಇದೀಗ ಯಾವ ಸರ್ವಾಧಿಕಾರಿಯನ್ನು ಹಿಮ್ಮೆಟ್ಟಿಸಿದ್ದಳೋ ಅದೇ ಮಾರ್ಕೋಸ್ನ ಮಗ ಫರ್ಡಿನಾಂಡ್ ಭಾಂಗ್ ಬಾಂಗ್ ಮಾರ್ಕೋಸ್ ಅಧಿಕಾರಕ್ಕೆ ಬಂದಿರುವುದು ಚಾರಿತ್ರಿಕ ವ್ಯಂಗ್ಯವಾಗಿದೆ.
2
ಈಚೆಗೆ ದೆಹಲಿಯ ಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಬೆಂಬಲಿತ ಯುವಜನರು ದೊಡ್ಡ ದನಿಯಲ್ಲಿ ಕೇಂದ್ರ ಸರಕಾರದ ವಿರುದ್ಧ ಧನಿ ಎತ್ತಿ ಕೇಂದ್ರ ಸರಕಾರದ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ಪಡೆದರು. ಈ ಜೆನ್ ಝೀ ಯುವಜನರ ಹೋರಾಟದ ಬಗೆಗೇ ಚರ್ಚೆ ಸಂವಾದಗಳು ನಡೆಯುತ್ತಿವೆ. ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಮಹಾರಾಷ್ಟ್ರದ ಸಂಭಾಜಿನಗರ್ ಜಿಲ್ಲೆಯವರು. ವಿಶೇಷವೆಂದರೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ನಡೆದಾಡಿದ ಮಹಾರಾಷ್ಟ್ರದ ದಲಿತ ಯುವಕನೊಬ್ಬ ಇಂತಹ ಹೋರಾಟಕ್ಕೆ ನಾಯಕತ್ವ ವಹಿಸಿರುವುದು, ಜೆನ್-ಜಿ ಯುವಜನರು ಜಾತ್ಯತೀತವಾಗಿ ಈತನ ನಾಯಕತ್ವ ಬೆಂಬಲಿಸಿರುವುದು ಈ ದೇಶದ ಯುವಜನರ ಬಗ್ಗೆ ಹೊಸ ಭರವಸೆ ಮೂಡಿಸಿದೆ.

ವಿಡೆಮ್ ಡೆಮಾಕ್ರಸಿ ವರದಿ 2026ರ ಪ್ರಕಾರ ಭಾರತ ಚುನಾಯಿತ ಸರ್ವಾಧಿಕಾರಿ ದೇಶಗಳ ಪಟ್ಟಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಭಾರತದಲ್ಲಿನ ಯುವಜನರ ಈ ಚಳವಳಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಮೇಲೆತ್ತುವ ಕನಸಿನಂತೆ ಕಾಣುತ್ತಿದೆ. ಇದು ಕೇವಲ ಭಾರತದ ವಿದ್ಯಮಾನ ಮಾತ್ರವಲ್ಲ, ಜಗತ್ತಿನಲ್ಲಿ ಪ್ರಜಾಪ್ರಭುತ್ವ ಕೊನೆಗೊಳ್ಳಲಿದೆಯೇ ಎನ್ನುವ ಆತಂಕ ಮನೆಮಾಡಿದೆ. ಈ ಸಂದರ್ಭದಲ್ಲಿ ಭಾರತವನ್ನೂ ಒಳಗೊಂಡಂತೆ ಇಡೀ ಜಗತ್ತಿನ ಪ್ರಜಾಪ್ರಭುತ್ವ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿರುವುದನ್ನು ಸ್ವೀಡನ್ನಿನ ವಿ-ಡೆಮ್ ಸಂಸ್ಥೆಯ 2026ರ ಪ್ರಜಾಪ್ರಭುತ್ವದ ವರದಿ ಬಯಲುಗೊಳಿಸುತ್ತಿದೆ.
ಸ್ವೀಡನ್ ದೇಶದ ರಾಜಕೀಯ ವಿಜ್ಞಾನಿ ಸ್ಟ್ಯಾಂಫನ್ ಐ ಲಿಂಡ್ಬರ್ಗ್ ನಿರ್ದೇಶಕರಾಗಿರುವ ವೆರೈಟೀಸ್ ಆಫ್ ಡೆಮಾಕ್ರಸಿ (ವಿ-ಡೆಮ್) ಸಂಸ್ಥೆಯ ಪ್ರಜಾಪ್ರಭುತ್ವ ವರದಿಗಳು ಜಾಗತಿಕವಾಗಿ ವಿಶ್ವಸನೀಯ ಚರ್ಚೆ ಸಂವಾದಗಳಿಗೆ ಕಾರಣವಾಗಿವೆ. ಜಾಗತಿಕ ವಿಶ್ವವಿದ್ಯಾಲಯಗಳಲ್ಲಿ ವಿದ್ವತ್ಪೂರ್ಣ ಸಂಶೋಧನೆ ಮತ್ತು ಅಧ್ಯಯನಗಳ ಗುಣಮಟ್ಟ ಕುಸಿಯುತ್ತಿರುವ ಹೊತ್ತಿನಲ್ಲಿ ಸ್ವೀಡನ್ನಿನ ಗೊಥೆನ್ಬರ್ಗ್ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಬದ್ಧತೆಯ ಸಂಶೋಧನ ತಂಡ ಜಗತ್ತಿನ ಗಮನ ಸೆಳೆದಿದೆ. ಈ ವರದಿಯಲ್ಲಿ 1789ರಿಂದ 2025ರ ತನಕದ 202 ದೇಶಗಳನ್ನು ಒಳಗೊಂಡಂತೆ ಜಾಗತಿಕವಾಗಿ 4,200ಕ್ಕೂ ಹೆಚ್ಚಿನ ವಿದ್ವಾಂಸರು ಪ್ರಜಾಪ್ರಭುತ್ವದ 600ಕ್ಕೂ ಹೆಚ್ಚಿನ ಗುಣಲಕ್ಷಣಗಳನ್ನು ಅಳೆಯಲಾಗುತ್ತದೆ. ಇಂತಹ ಹಿನ್ನೆಲೆಯ ವಿ-ಡೆಮ್ ಸಂಸ್ಥೆ ಬಿಡುಗಡೆಮಾಡಿದ 2026ರ ಪ್ರಜಾಪ್ರಭುತ್ವದ ವರದಿಯು ಹಲವು ಕಾರಣಗಳಿಗೆ ಮುಖ್ಯವಾಗಿದೆ. 52 ಪುಟದ ಈ ವರದಿಯು ಜಗತ್ತಿನ ಪ್ರಜಾಪ್ರಭುತ್ವದ ಬಿಕ್ಕಟ್ಟನ್ನು ಎಳೆಎಳೆಯಾಗಿ ತೆರೆದಿಟ್ಟಿದೆ. ‘ಪ್ರಜಾಪ್ರಭುತ್ವ ಯುಗ’ ಕೊನೆಗೊಳ್ಳುತ್ತಿದೆಯೇ? ಎನ್ನುವ ಪ್ರಶ್ನೆಯನ್ನು ಹಾಕಿಕೊಂಡು ಚಾರಿತ್ರಿಕ ಹೋರಾಟಗಳಿಂದ ನೇಯ್ದ ಪ್ರಜಾಪ್ರಭುತ್ವದ ಬಟ್ಟೆಯೊಂದು ಹೇಗೆ ಎಳೆ ಎಳೆ ಬಿಚ್ಚಿಕೊಳ್ಳುತ್ತಾ ಸಡಿಲಗೊಳ್ಳುತ್ತಿದೆ ಎನ್ನುವುದನ್ನು ವಿವರಿಸುತ್ತಾ ಹೋಗುತ್ತದೆ.
ವಿಶ್ವದ ಜನಸಂಖ್ಯೆಯ ಸುಮಾರು ಮುಕ್ಕಾಲು ಭಾಗ ಶೇ 74ರಷ್ಟು ಆರು ಬಿಲಿಯನ್ ಜನರು ನಿರಂಕುಶ (ಸರ್ವಾಧಿಕಾರಿ) ಪ್ರಭುತ್ವದಡಿ ವಾಸಿಸುತ್ತಿದ್ದಾರೆ. ಅಂದರೆ ಜಗತ್ತಿನ ಪ್ರತಿ ನಾಲ್ಕು ಜನರಲ್ಲಿ ಮೂವರು ನಿರಂಕುಶ ಪ್ರಭುತ್ವದಡಿ ಬದುಕುತ್ತಿದ್ದಾರೆ. ಶೇಕಡ 28ರಷ್ಟು ಅರೆ ಸರ್ವಾಧಿಕಾರಿ ದೇಶಗಳಲ್ಲಿದ್ದಾರೆ. ಶೇ 7ರಷ್ಟು ಜನರು ಮಾತ್ರ ಉದಾರವಾದಿ ಪ್ರಜಾಪ್ರಭುತ್ವದಡಿಯಲ್ಲಿದ್ದಾರೆ. 2025ರ ಅಂತ್ಯದ ವೇಳೆಗೆ ಪ್ರಪಂಚದಲ್ಲಿ 92 ಸಂಪೂರ್ಣ ಸರ್ವಾಧಿಕಾರಿ ದೇಶಗಳಾಗಿ ರೂಪಾಂತರಗೊಳ್ಳುತ್ತಿವೆ. 87 ಚುನಾಯಿತ ಸರ್ವಾಧಿಕಾರವಿರುವ ಪ್ರಜಾಪ್ರಭುತ್ವ ದೇಶಗಳಿವೆ. 2025ರಲ್ಲಿ 10 ಹೊಸ ಸರ್ವಾಧಿಕಾರಿ ದೇಶಗಳನ್ನು ಗುರುತಿಸಲಾಗಿದೆ. ಸರ್ವಾಧಿಕಾರ ಇರುವ 33 ದೇಶಗಳಲ್ಲಿ ಶೇ 73ರಷ್ಟು ಮಾಧ್ಯಮಗಳು ಸರಕಾರಗಳ ಕಣ್ಗಾವಲಿನಲ್ಲಿ ನಿಯಂತ್ರಣಕ್ಕೊಳಪಟ್ಟಿವೆ. 30 ಸರ್ವಾಧಿಕಾರಿ ದೇಶಗಳಲ್ಲಿ ನಾಗರಿಕ ಸಮಾಜದ ಮೇಲಿನ ದಮನಕಾರಿ ನಡವಳಿಕೆಗಳು ಶೇ 68ರಷ್ಟು ಹೆಚ್ಚಾಗಿದೆ. 2025ರಲ್ಲಿ 33 ದೇಶಗಳು ರಾಜಕೀಯ ವಿರೋಧವನ್ನು ಹತ್ತಿಕ್ಕಲು ಚಿತ್ರಹಿಂಸೆ ಕೊಡುವ ಪ್ರಮಾಣವನ್ನು ಹೆಚ್ಚಿಸಿವೆ. ಕಳೆದ 25 ವರ್ಷಗಳಲ್ಲಿ ಪ್ರಜಾಪ್ರಭುತ್ವವವನ್ನು ಅಳೆಯಬಹುದಾದ ಎಲ್ಲಾ ಸಂಗತಿಗಳ ಕ್ರಮಾಂಕದಲ್ಲಿ ತೀವ್ರವಾದ ಕುಸಿತ ಕಂಡಿವೆ. ಸದ್ಯಕ್ಕೆ ನಡೆಯುತ್ತಿರುವ ಸರ್ವಾಧಿಕಾರ ಬಲಗೊಳ್ಳುತ್ತಿರುವ ಮೂರನೆ ಅಲೆಯಲ್ಲಿ ಚಾರಿತ್ರಿಕವಾಗಿ ಇಷ್ಟು ವೇಗದಲ್ಲಿ ಬೆಳೆಯುತ್ತಿರುವ ಸರ್ವಾಧಿಕಾರಿ ದೇಶಗಳನ್ನು ಜಗತ್ತು ಈವರೆಗೂ ಕಂಡಿರಲಿಲ್ಲ.
ಅಕ್ಷರಶಃ ಪ್ರಜಾಪ್ರಭುತ್ವ ಇಂದು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಬಹು ಅಂಗಾಂಗಗಳ ವೈಫಲ್ಯದಿಂದಾಗಿ ಗಂಭೀರ ಶಸ್ತ್ರಚಿಕಿತ್ಸೆಗಾಗಿ ಕಾದಿರುವಂತಿದೆ. ಪ್ರಸ್ತುತ ಇಂದಿನ ಪ್ರಜಾಪ್ರಭುತ್ವದ ಸ್ಥಿತಿಯು ಜಗತ್ತಿನಲ್ಲಿ ಅತಿ ಹೆಚ್ಚು ಸರ್ವಾಧಿಕಾರಿ ದೇಶಗಳಿದ್ದ ಕಾಲಾವಧಿ 1978ರ ಕಾಲಘಟ್ಟಕ್ಕೆ ಮರಳಿದೆ. ಹೀಗಾಗಿ ಪ್ರಜಾಪ್ರಭುತ್ವದ ಸ್ಥಿತಿ ಅರ್ಧ ಶತಮಾನದಷ್ಟು ಹಿಂದಕ್ಕೆ ಸರಿದಿದೆ. ಅಂದರೆ ಜಗತ್ತಿನಲ್ಲಿ ಸರ್ವಾಧಿಕಾರ ಬಲಗೊಳ್ಳುತ್ತಿರುವುದು ಜಾಗತಿಕ ಸಮುದಾಯದ ಆತಂಕಕಾರಿ ಸಂಗತಿಯಾಗಿದೆ. ಸರ್ವಾಧಿಕಾರ ಎನ್ನುವ ಗುರತ್ವಾಕರ್ಷಣೆಯೆಡೆಗೆ ಜಗತ್ತಿನ ದೇಶಗಳು ಹೆಚ್ಚು ಹೆಚ್ಚು ಆಕರ್ಷಿತವಾಗುತ್ತಿವೆ.
ಪ್ರಜಾಪ್ರಭುತ್ವದ ಉಸಿರಿನಂತಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊದಲ ಆದ್ಯತೆಯಾಗಿ ಸರ್ವಾಧಿಕಾರಿ ದೇಶಗಳು ದಮನಿಸುತ್ತಿವೆ. ಅರ್ಜೆಂಟೈನಾ, ಸ್ಲೋವಾಕಿಯಾ, ಯುಕೆ ಮತ್ತು ಯುಎಸ್ಎ ಸೇರಿದಂತೆ 28 ಸರ್ವಾಧಿಕಾರಿ ದೇಶಗಳಲ್ಲಿ ಶೇ 64ರಷ್ಟು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿ ಸ್ವಾತಂತ್ರ್ಯ ಕ್ಷೀಣಿಸುತ್ತಿದೆ. ಶೇ 75ರಷ್ಟು ನಿರಂಕುಶಾಧಿಕಾರಿ ದೇಶಗಳು ಸ್ವತಂತ್ರ ಮಾಧ್ಯಮವನ್ನು ಕೊಲ್ಲುತ್ತಿವೆ. ಕಾಂಬೋಡಿಯಾ, ಇಟಲಿ, ಪಾಕಿಸ್ತಾನ, ರೊಮೇನಿಯಾ ಮತ್ತು ಯುಕೆ ಸೇರಿದಂತೆ 26 ದೇಶಗಳಲ್ಲಿ ಮಾಧ್ಯಮಗಳು ಕಡ್ಡಾಯವಾಗಿ ಸರಕಾರಗಳ ಸೆನ್ಸಾರ್ ಶಿಪ್ಗೆ ಒಳಗಾಗಬೇಕಾಗಿದೆ. ಸರಕಾರಗಳ ಕಣ್ತಪ್ಪಿಸಿ ಯಾವ ಸುದ್ದಿಯೂ ಸಾರ್ವಜನಿಕವಾಗದಷ್ಟು ಬಿಗಿಯಾಗಿದೆ. ಇನ್ನು ಚುನಾಯಿತ ಸರ್ವಾಧಿಕಾರ (ಅಟೋಕ್ರಸಿ) ಬಲಗೊಳ್ಳುತ್ತಿರುವ ದೇಶಗಳಲ್ಲಿ ಮಾಧ್ಯಮಗಳನ್ನು ಎಡಮುರಿಗೆ ಕಟ್ಟಿ ಸರಕಾರದ ಮುಖವಾಣಿಯನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಹಂಗೇರಿ, ಭಾರತ, ಯುಎಸ್ಎ ಒಳಗೊಂಡಂತೆ 22 ದೇಶಗಳಲ್ಲಿ ಮಾಧ್ಯಮಗಳು ಆಳುವ ಸರಕಾರದ ಏಜಂಟರಂತೆ ವರ್ತಿಸುತ್ತಿವೆ.

ಜಗತ್ತಿನಲ್ಲಿ ಸರ್ವಾಧಿಕಾರ ಹೆಚ್ಚುತ್ತಿದ್ದಂತೆ ಆಯಾ ದೇಶಗಳಲ್ಲಿ ಸಾಮಾಜಿಕ ಸಾಂಸ್ಕೃತಿಕ ಸಂಘಟನೆಗಳನ್ನು ನಿಯಂತ್ರಿಸಲಾಗುತ್ತಿದೆ. 2024ರಲ್ಲಿ 45 ನಿರಂಕುಶ ದೇಶಗಳಲ್ಲಿ 22 ದೇಶಗಳಲ್ಲಿ ಈ ನಿಯಂತ್ರಣ ತೀವ್ರವಾಗಿತ್ತು. 2025ರಲ್ಲಿ ಈ ಸಂಖ್ಯೆ 30ಕ್ಕೇರಿದೆ. ಅಂದರೆ ಶೇ 68ರಷ್ಟು ಸಂಘಟನೆಗಳನ್ನು ನಿರ್ನಾಮ ಮಾಡಲಾಗುತ್ತಿದೆ. ಬೆಲಾರಸ್, ಎಲ್ ಸಾಲ್ವಡಾರ್, ಜಾರ್ಜಿಯಾ, ಗಿನಿಯಾ ಮತ್ತು ಮೆಕ್ಸಿಕೋವನ್ನು ಒಳಗೊಂಡಂತೆ ಎಲ್ಲಾ ಸರ್ವಾಧಿಕಾರಿ ದೇಶಗಳಲ್ಲಿ ಮೂರನೆ ಎರಡರಷ್ಟು ದೇಶಗಳು ಸಾರ್ವಜನಿಕ ಸಂಘಟನೆಗಳನ್ನು ಸಂಪೂರ್ಣ ನಿಯಂತ್ರಣಕ್ಕೊಳಪಡಿಸಿವೆ. ಇದು ಸರಕಾರದ ವಿರುದ್ಧ ಜನರನ್ನು ಒಟ್ಟಾಗದಂತೆ ಜಾಗೃತಗೊಳಿಸದಂತೆ ತಡೆಯುವ ವ್ಯವಸ್ಥಿತ ಕಾರ್ಯಯೋಜನೆಯಾಗಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಮಮತಾ ಬ್ಯಾನರ್ಜಿ ತಾನು ರಾಜೀನಾಮೆ ಕೊಡುವುದಿಲ್ಲ, ಇದು ಚುನಾವಣಾ ಆಯೋಗದ ಕುತಂತ್ರದ ಗೆಲುವು ಎಂದಿದ್ದರು. ಇಡೀ ದೇಶದಲ್ಲಿ ಚುನಾವಣೆಗಳು ನಡೆಯುತ್ತಿರುವ ರಾಜ್ಯಗಳಲ್ಲಿ ಎಸ್.ಐ.ಆರ್.(ವಿಶೇಷ ತೀವ್ರ ಪರಿಷ್ಕರಣೆ) ಮೂಲಕ ವ್ಯಾಪಕವಾಗಿ ಬಡ ದಲಿತ ದಮನಿತ ಕೃಷಿಕ ಅಲ್ಪಸಂಖ್ಯಾತ ಮತದಾರರ ಹೆಸರುಗಳನ್ನು ಕಿತ್ತುಹಾಕಲಾಗಿದೆ. ಈ ಮೂಲಕ ಕೇಂದ್ರ ಸರಕಾರವು ಚುನಾವಣಾ ಆಯೋಗವನ್ನು ನಿಯಂತ್ರಿಸುತ್ತಿರುವುದು ಗುಟ್ಟಾಗಿಲ್ಲ. ಜಗತ್ತಿನಲ್ಲಿ ಸರ್ವಾಧಿಕಾರ ಹೆಚ್ಚುತ್ತಿರುವ ಬಹುಪಾಲು ದೇಶಗಳು ಅಲ್ಲಿನ ಚುನಾವಣಾ ಸಂಸ್ಥೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿವೆ. ಜಾರ್ಜಿಯಾ, ಗಿನಿಯಾ-ಬಿಸೌ, ಹಂಗೇರಿ, ಇಂಡೋನೇಷಿಯಾ, ರೊಮೇನಿಯಾ ಸೇರಿದಂತೆ 25 ಸರ್ವಾಧಿಕಾರಿ ದೇಶಗಳಲ್ಲಿ ಚುನಾವಣಾ ಸಂಸ್ಥೆಗಳ ಸ್ವಾಯತ್ತತೆಯನ್ನು ಕಿತ್ತುಕೊಳ್ಳಲಾಗಿದೆ. ಹೀಗಾಗಿ ಜಗತ್ತಿನಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳು ಗಣನೀಯವಾಗಿ ಕ್ಷೀಣಿಸುತ್ತಿವೆ. ಸರ್ವಾಧಿಕಾರಿ ದೇಶಗಳಲ್ಲಿ ಸಾರ್ವಜನಿಕ ಆಡಳಿತವೂ ಗರಿಷ್ಠ ಪ್ರಮಾಣದಲ್ಲಿ ಭ್ರಷ್ಟಗೊಂಡು ಅಕ್ರಮದಲ್ಲಿ ತೊಡಗಿದೆ. ಈ ದೇಶಗಳಲ್ಲಿ ಶಾಸಕಾಂಗ ಅನಿಯಂತ್ರಿತ ಅಧಿಕಾರವನ್ನು ಚಲಾಯಿಸುತ್ತಾ ನ್ಯಾಯಾಂಗವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿವೆ.
ಈ ವರದಿಯು ಜಗತ್ತಿನಲ್ಲಿ ಯಾವ ಯಾವ ದೇಶಗಳಲ್ಲಿ ಸರ್ವಾಧಿಕಾರ ಹಂತ ಹಂತವಾಗಿ ಹೇಗೆ ಬೆಳೆಯಿತು ಎಂದು ವಿವರಿಸುವ ಭಾಗದಲ್ಲಿ ಭಾರತದಲ್ಲಿ ಹೇಗೆ ಪ್ರಜಾಪ್ರಭುತ್ವ ಕುಸಿಯುತ್ತಿದೆ ಎನ್ನುವುದರ ವಿವರವಿದೆ. ‘ಭಾರತದಲ್ಲಿ ಸರ್ವಾಧೀಕರಣ 2009ರಿಂದ ಪ್ರಾರಂಭವಾಯಿತು. ನಿಧಾನಕ್ಕೆ ಪ್ರಜಾಪ್ರಭುತ್ವೀಯ ಸಂಸ್ಥೆಗಳನ್ನು ದುರ್ಬಲಗೊಳಿಸಲು ಆರಂಭಿಸಿತು. ಆಡಳಿತಾರೂಢ ಬಹುತ್ವ ವಿರೋಧಿ, ಹಿಂದೂ ರಾಷ್ಟ್ರೀಯತಾವಾದಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಪ್ರಧಾನಿ ಮೋದಿಯವರು ಪ್ರಜಾಪ್ರಭುತ್ವದ ಹಳಿ ತಪ್ಪಿಸಲು ಆರಂಭಿಸಿದರು. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಧ್ಯಮ ಸ್ವಾತಂತ್ರ್ಯವನ್ನು ತೀವ್ರವಾಗಿ ಹತ್ತಿಕ್ಕಲಾಯಿತು. ಸರಕಾರವನ್ನು ಟೀಕಿಸುವ ಪರ್ತಕರ್ತರ ಮೇಲಿನ ಕಿರುಕುಳ ಮತ್ತು ನಾಗರಿಕ ಸಮಾಜ ಮತ್ತು ವಿರೋಧ ಪಕ್ಷಗಳ ಮೇಲಿನ ದಾಳಿ ಹೆಚ್ಚಾಯಿತು. ಹೀಗಾಗಿ 2017ರಿಂದಲೂ ಭಾರತವನ್ನು ಚುನಾಯಿತ ಸರ್ವಾಧಿಕಾರಿ ದೇಶವೆಂದು ಗುರುತಿಸಲಾಗಿದೆ’ (ಪುಟ:24) ಎಂದು ವಿಶ್ಲೇಷಿಸಲಾಗಿದೆ.
ವಿ-ಡೆಮ್ನ ಹಿಂದಿನ ವರದಿಗಳಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆಗೊಂಡಿರುವ ಜಗತ್ತಿನ ಕೆಲವು ದೇಶಗಳು ಮರಳಿ ಸರ್ವಾಧಿಕಾರಕ್ಕೆ ಜಾರುತ್ತಿರುವ ದೇಶಗಳ ಕಾರಣಶೋಧ ಮಾಡಲಾಗಿದೆ. ಅಂತೆಯೇ ಒಮ್ಮೆ ಸರ್ವಾಧಿಕಾರಕ್ಕೆ ಒಳಪಟ್ಟ ಕೆಲವು ದೇಶಗಳು ಈ ಸರ್ವಾಧಿಕಾರದ ಅಪಾಯಗಳನ್ನು ಬೇಗನೆ ಅರಿತು ಅಲ್ಲಿನ ರಾಜಕೀಯದಲ್ಲಿ ಕ್ಷಿಪ್ರ ಬದಲಾವಣೆಗಳು ಸಂಭವಿಸಿ, ಅಲ್ಲಿನ ಜನರ ಹಕ್ಕೊತ್ತಾಯಗಳು ಮರಳಿ ‘ಪ್ರಜಾಪ್ರಭುತ್ವ’ವನ್ನು ಸ್ಥಾಪಿಸಿಕೊಂಡಿರುವ ದೇಶಗಳ ಉದಾಹರಣೆಯನ್ನೂ ಚರ್ಚಿಸಲಾಗಿದೆ. ಡೊಮಿನಿಕನ್ ಗಣರಾಜ್ಯ, ಫಿಜಿ, ಶ್ರೀಲಂಕಾ, ಗ್ಯಾಂಬಿಯಾ, ಮಾಂಟೆನೆಗ್ರೋ, ಸೀಶೆಲ್ಸ್, ಟಿಮೋರ್ ಲೆಸ್ಟೆ ಮತ್ತು ಸೋಲೋಮನ್ ದ್ವೀಪಗಳು ಮರಳಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಿಕೊಂಡಿವೆ. ಇವುಗಳನ್ನೆಲ್ಲಾ ಒಟ್ಟಾಗಿಸಿದರೆ 40 ಮಿಲಿಯನ್ ಜನರನ್ನು ಹೊಂದಿರುವ ವಿಶ್ವದ ಜನಸಂಖ್ಯೆಯ ಕೇವಲ 0.005ನಷ್ಟಿರುವ ಅತ್ಯಂತ ಸಣ್ಣ ದೇಶಗಳಾಗಿವೆ. ಸದ್ಯಕ್ಕೆ ಈ ಪುಟ್ಟ ಪುಟ್ಟ ದೇಶಗಳೆ ಸರ್ವಾಧಿಕಾರದತ್ತ ವೇಗವಾಗಿ ಮರಳುತ್ತಿರುವ ವಿಶ್ವಕ್ಕೆ ಸಣ್ಣ ಬ್ರೇಕ್ಗಳಾಗಿ ಕಾಣುತ್ತಿವೆ. ಸರ್ವಾಧಿಕಾರದ ಭಯ ಆತಂಕದಲ್ಲಿರುವ ಜನರಿಗೆ ಈ ಪುಟ್ಟ ದೇಶಗಳು ಕಗ್ಗತ್ತಲಿನಲ್ಲಿ ಬಹುದೂರದಿಂದ ಕಾಣುತ್ತಿರುವ ಮಿಣುಕು ದೀಪಗಳಂತೆ ಕಾಣುತ್ತಿವೆ.

ಅರುಣ್ ಜೋಳದ ಕೂಡ್ಲಿಗಿ
ಲೇಖಕ, ಜಾನಪದ ಸಂಶೋಧಕರು



